ಕರ್ನಾಟಕ ವಿಧಾನಸಭೆ ಚುನಾವಣೆ: ಬಿಜೆಪಿಯ ಗೇಮ್ ಪ್ಲಾನ್ ನಲ್ಲಿ ಜಾತಿ ಸಮೀಕರಣವೇ ಪ್ರಧಾನ

ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಭಾರತೀಯ ಜನತಾ ಪಕ್ಷ (BJP) ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಎಂಬ ಎರಡು ಘಟಕಗಳನ್ನು ರಚಿಸಿದೆ. 
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕೃಷಿ ಸಚಿವೆ ಶೋಭಾ ಕರಂದ್ಲಾಜೆ(ಸಂಗ್ರಹ ಚಿತ್ರ)
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕೃಷಿ ಸಚಿವೆ ಶೋಭಾ ಕರಂದ್ಲಾಜೆ(ಸಂಗ್ರಹ ಚಿತ್ರ)

ಬೆಂಗಳೂರು: ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಭಾರತೀಯ ಜನತಾ ಪಕ್ಷ (BJP) ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಎಂಬ ಎರಡು ಘಟಕಗಳನ್ನು ರಚಿಸಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ 25 ಸದಸ್ಯರ ಚುನಾವಣಾ ಪ್ರಚಾರ ಸಮಿತಿ ಸೇರಿದಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಸಮಿತಿಗಳನ್ನು ಘೋಷಿಸಿದ್ದಾರೆ. ಘೋಷಣೆಯಿಂದ ಬರುವ ಒಂದು ಪ್ರಮುಖ ಅಂಶವೆಂದರೆ 14 ಸದಸ್ಯರ ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿ ಫೈರ್‌ಬ್ರಾಂಡ್ ನಾಯಕಿ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸಲಾಗಿದೆ.

ಉಡುಪಿ-ಚಿಕ್ಕಮಗಳೂರಿನಿಂದ ಎರಡು ಬಾರಿ ಸಂಸದರಾಗಿರುವ ಕರಂದ್ಲಾಜೆ ಅವರು ಬಿಜೆಪಿಯ ಪ್ರಬಲ ವ್ಯಕ್ತಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ರಾಜಕೀಯವಾಗಿ ದೀರ್ಘಾವಧಿಯಿಂದ ಗುರುತಿಸಿಕೊಂಡವರು. ಎರಡೂ ಸಮಿತಿಗಳಲ್ಲಿ ಶೋಭಾ ಕರಂದ್ಲಾಜೆಯವರ ಹೆಸರು ಇದೆ. 

ಕರಂದ್ಲಾಜೆ ಮತ್ತು ಬೊಮ್ಮಾಯಿ ಅವರನ್ನು ಎರಡು ಸಮಿತಿಗಳ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ ಬಿಜೆಪಿ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತರಿಗೆ ಪ್ರಾಮುಖ್ಯತೆ ನೀಡಿದೆ. ಶೋಭಾ ಕರಂದ್ಲಾಜೆಯವರು ಒಕ್ಕಲಿಗ ಸಮುದಾಯದ ಹೃದಯಭಾಗವಾದ ಮಂಡ್ಯ-ಹಾಸನದಿಂದ ಬಂದವರಲ್ಲ, ಕರಾವಳಿ ಕರ್ನಾಟಕದವರು. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಅವಧಿಯಲ್ಲಿ ಪಕ್ಷ ಸಂಘಟನೆ ಹಾಗೂ ಸರ್ಕಾರದಲ್ಲಿ ತಮ್ಮ ಕಠಿಣ ಪರಿಶ್ರಮದ ಮೂಲಕ ತಮಗೊಂದು ಸ್ಥಾನ ಕಲ್ಪಿಸಿದ್ದಾರೆ. 2014 ರಲ್ಲಿ ಲೋಕಸಭೆಗೆ ಚೊಚ್ಚಲ ಚುನಾವಣೆಯ ನಂತರ ಅವರು ರಾಜ್ಯದಲ್ಲಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ಇದೇ ಮೊದಲು.

ಶೋಭಾ ಕರಂದ್ಲಾಜೆ ಅವರ ಸಮಿತಿಯು ಚುನಾವಣೆಗೆ ಪಕ್ಷದ ಕಾರ್ಯತಂತ್ರವನ್ನು ರೂಪಿಸುವ ಕಾರ್ಯವನ್ನು ಹೊಂದಿದೆ, ಪಕ್ಷವು ಅವರ ಸಾಮರ್ಥ್ಯವನ್ನು ಈ ಬಾರಿ ಪರೀಕ್ಷಿಸಲು ಈ ಹೊಣೆಗಾರಿಕೆ ನೀಡಿರಬಹುದು. ಚುನಾವಣೋತ್ತರ ಸನ್ನಿವೇಶದಲ್ಲಿ ಹೈಕಮಾಂಡ್ ಅವರನ್ನು ಮನಸ್ಸಿನಲ್ಲಿಟ್ಟುಕೊಳ್ಳಬಹುದು. 'ಶೋಭಕ್ಕ' ಎಂದೇ ಅಭಿಮಾನಿ ವಲಯದಲ್ಲಿ ಜನಪ್ರಿಯರಾಗಿರುವ ಇವರು ಪ್ರಚಾರ ಸಮಿತಿಯ ಸದಸ್ಯರೂ ಆಗಿದ್ದಾರೆ.

ಯಡಿಯೂರಪ್ಪ ಅವರ ಬೆಂಬಲಿಗರು ತಮ್ಮ ನಾಯಕನನ್ನು ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವ ನಿರೀಕ್ಷೆಯಲ್ಲಿದ್ದರು. ಹಾಗಾಗಲಿಲ್ಲ. ಮುಖ್ಯಮಂತ್ರಿಯಾಗಿ ಕೆಲವು ಪರೀಕ್ಷೆಗಳನ್ನು ಎದುರಿಸುತ್ತಿರುವ ಬೊಮ್ಮಾಯಿ ಅವರಿಗೆ ಆ ಕೆಲಸವನ್ನು ವಹಿಸಲಾಗಿದೆ. ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದ ಬೊಮ್ಮಾಯಿ ಅವರಿಗೆ ಇದು ಒಂದು ರೀತಿಯ ನೈತಿಕ ಬೂಸ್ಟರ್ ಆಗಿದೆ. ಬೊಮ್ಮಾಯಿ ಅವರು ಬಿಎಸ್‌ವೈ ಅವರಂತೆ ಲಿಂಗಾಯತ ಸಮುದಾಯಕ್ಕೆ ಸೇರಿದವರು. 

ಬಿಎಸ್ ವೈ ಅವರ ಪುತ್ರ ಬಿವೈ ವಿಜಯೇಂದ್ರ ಕೂಡ ಸಮಿತಿಯ ಸದಸ್ಯರಾಗಿದ್ದಾರೆ. ವಿಜಯೇಂದ್ರ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ರೂಪಿಸುತ್ತಿರುವ ಯಡಿಯೂರಪ್ಪ ಅವರಿಗೆ ಇದು ಮಹತ್ವದ್ದಾಗಿದೆ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿರುವ ಮಾಜಿ ಸಿಎಂ, ಶಿಕಾರಿಪುರ (ಶಿವಮೊಗ್ಗ ಜಿಲ್ಲೆ)ದಿಂದ ವಿಜಯೇಂದ್ರ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ.

ಆದಾಗ್ಯೂ, ಪಕ್ಷವು ವಿಜಯೇಂದ್ರ ಅವರಿಗೆ ಟಿಕೆಟ್ ನೀಡುತ್ತದೆಯೇ ಎಂದು ನೋಡಬೇಕಾಗಿದೆ. 2018ರಲ್ಲಿ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಮಗನನ್ನು ಕಣಕ್ಕಿಳಿಸಬೇಕು ಎಂಬ ಬಿಎಸ್‌ವೈ ಒತ್ತಡಕ್ಕೆ ಮಣಿಯಲು ಪಕ್ಷ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಜಯೇಂದ್ರ ಅವರಿಗೆ ಪಕ್ಷ ಬ್ರೇಕ್ ಹಾಕಿದಾಗ ಆ ಕ್ಷೇತ್ರದಲ್ಲಿ ಬಾಡಿಗೆಗೆ ಮನೆಯನ್ನೂ ತೆಗೆದುಕೊಂಡು ಪ್ರಚಾರ ಆರಂಭಿಸಿದ್ದರು. ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿ ವೈ ರಾಘವೇಂದ್ರ ಶಿವಮೊಗ್ಗದಿಂದ ಮೂರನೇ ಬಾರಿಗೆ ಸಂಸದರಾಗಿದ್ದಾರೆ.

ಹಿಂದುತ್ವ ಪಕ್ಷವು ಸುಮಾರು ಮೂರು ದಶಕಗಳಿಂದ ಲಿಂಗಾಯತರ ನಿಷ್ಠೆಯ ಮೇಲೆ ಸವಾರಿ ಮಾಡುತ್ತಿದೆ ಮತ್ತು ಈ ಬಾರಿಯೂ ಅದನ್ನು ಮುಂದುವರಿಸಲು ಆಶಿಸುತ್ತಿದೆ. ಪಕ್ಷದ ಪ್ರಮುಖ ಶಕ್ತಿ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಅವರಿಂದ ಬರುತ್ತಿದೆ. 2018ರ ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿದರೆ ಈ ಬಾರಿ ಹೆಚ್ಚು ಕಡಿಮೆ ಒಂದೇ ಆಗಿದ್ದರೆ ಬಹುಮತ ದಾಟಲು ಬಿಜೆಪಿಗೆ ಒಕ್ಕಲಿಗ ಸಮುದಾಯದ ಬೆಂಬಲದ ಅವಶ್ಯಕತೆಯಿದೆ. 

ಬಿಜೆಪಿ ಕರ್ನಾಟಕದಲ್ಲಿ ಎಂದಿಗೂ ಬಹುಮತವನ್ನು ಗೆದ್ದಿಲ್ಲ. 2019 ರಲ್ಲಿ ಆರಪೇಷನ್ ಕಮಲ ಮಾಡಿ ಸರ್ಕಾರ ರಚಿಸಿತು. ಹಳೇ ಮೈಸೂರು ಭಾಗದ ಒಕ್ಕಲಿಗ ಭದ್ರಕೋಟೆ ಹಾಗೂ ಸಾಂಪ್ರದಾಯಿಕವಾಗಿ ಕಳಪೆ ಪ್ರದರ್ಶನ ನೀಡಿದ ಹಾಸನದ ಮೇಲೆ ಕೇಸರಿ ಪಕ್ಷವು ಪ್ರಬಲವಾಗಿ ಗಮನಹರಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಈ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಿದ್ದು, ಒಕ್ಕಲಿಗ ರಾಜಕೀಯದ ಕೇಂದ್ರವಾಗಿರುವ ಮಂಡ್ಯದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಹೊಸ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ. ಇದು ಪಕ್ಷವು ಈ ಪ್ರದೇಶಕ್ಕೆ ನೀಡುವ ಮಹತ್ವವನ್ನು ತೋರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com