ಫೈಟರ್ ರವಿಯೊಂದಿಗೆ ಪ್ರಧಾನಿ ಮೋದಿ: 'ಭದ್ರತಾ ಲೋಪ.. ಮೋದಿಗೆ ಆತ ಯಾರೆಂದು ತಿಳಿದಿಲ್ಲ'; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪ್ರಧಾನಿ ಮೋದಿ ಅವರಿಗೆ ಫೈಟರ್ ರವಿ ಯಾರೆಂದು ತಿಳಿದಿಲ್ಲ.. ಮಂಡ್ಯ ಭೇಟಿ ವೇಳೆ ಸ್ವಾಗತ ಸಮಿತಿಯಲ್ಲಿ ರವಿ ಅವರನ್ನು ಸೇರಿಸಿಕೊಂಡಿರುವುದು ಭದ್ರತಾ ಲೋಪ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ.
Published: 14th March 2023 08:16 AM | Last Updated: 14th March 2023 01:42 PM | A+A A-

ಶೋಭಾ ಕರಂದ್ಲಾಜೆ
ಬೆಂಗಳೂರು: ಪ್ರಧಾನಿ ಮೋದಿ ಅವರಿಗೆ ಫೈಟರ್ ರವಿ ಯಾರೆಂದು ತಿಳಿದಿಲ್ಲ.. ಮಂಡ್ಯ ಭೇಟಿ ವೇಳೆ ಸ್ವಾಗತ ಸಮಿತಿಯಲ್ಲಿ ರವಿ ಅವರನ್ನು ಸೇರಿಸಿಕೊಂಡಿರುವುದು ಭದ್ರತಾ ಲೋಪ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ.
ಮಂಡ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೌಡಿಶೀಟರ್ ಫೈಟರ್ ರವಿ ಕೂಡ ಸ್ವಾಗತಿಸಿದ್ದು, ಮೋದಿಯೂ ಆತನಿಗೆ ಕೈ ಮುಗಿದಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಮುಗಿಬಿದ್ದು ಟೀಕಾ ಪ್ರಹಾರವನ್ನೇ ನಡೆಸಿದ್ದವು.
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ರೌಡಿಶೀಟರ್ ಫೈಟರ್ ರವಿ ಯಾರೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿರಲಿಲ್ಲ. ಇದಕ್ಕೆ ಮೋದಿ ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.
ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೇಂದ್ರ ಸಚಿವರು ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾದ ಕು. @ShobhaBJP ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @RajeshGaVee ಅವರು ವಿವಿಧ ವಿಭಾಗಗಳ ಸಭೆ ನಡೆಸಿದರು.#BJPYeBharavase pic.twitter.com/Luu01zrNyM
— BJP Karnataka (@BJP4Karnataka) March 13, 2023
'ಸ್ವಾಗತ ಕೋರುವವರ ಪಟ್ಟಿಯಲ್ಲಿ ರವಿ ಹೆಸರು ಹೇಗೆ ಬಂತು ಎಂಬುದು ಗೊತ್ತಿಲ್ಲ. ಪ್ರಧಾನಿ ಮೋದಿಗೆ ಫೈಟರ್ ರವಿ ಸ್ವಾಗತ ಕೋರಿರುವುದು ಲೋಪವಾಗಿದೆ. ಫೈಟರ್ ರವಿ ಸ್ವಾಗತ ಅಲ್ಲಿನ ಸ್ಥಳೀಯರ ಕಣ್ತಪ್ಪಿನಿಂದ ಆಗಿರುವ ಸಾಧ್ಯತೆ ಇದೆ. ಸ್ವಾಗತ ಕೋರುವವರ ಪಟ್ಟಿಯನ್ನು ಮೋದಿಯವರು ಮೊದಲೇ ಗಮನಿಸಿಲ್ಲ. ಸ್ವಾಗತ ಕೋರುವ ಪಟ್ಟಿಯಲ್ಲಿ ರವಿ ಹೆಸರು ಹೇಗೆ ಬಂತು ಎಂಬುದನ್ನು ಪರಿಶೀಲನೆ ಮಾಡಲಾಗುವುದು. ಕಾಂಗ್ರೆಸ್ ನಾಯಕರು ಇದರಲ್ಲಿ ಹುಳುಕು ನೋಡೋದು ಬೇಡ' ಎಂದರು.
ಇದನ್ನೂ ಓದಿ: ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ: ಕಾಂಗ್ರೆಸ್ ವಾಗ್ದಾಳಿ
'ಫೈಟರ್ ರವಿ ಯಾರೆಂದು ಪ್ರಧಾನಿ ಮೋದಿಗೆ ತಿಳಿದಿಲ್ಲ, ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರು ಪ್ರಧಾನಿಯನ್ನು ಭೇಟಿ ಮಾಡಲು ತೆರವುಗೊಳಿಸಿದ ಹೆಸರುಗಳನ್ನು ಗಮನಿಸಬೇಕಾಗಿತ್ತು, ಆದರೆ ಅದು ಆಗಿಲ್ಲ. ಒಂದು ಲೋಪವಾಗಿದೆ, ಅದಕ್ಕೆ ಪ್ರಧಾನಿ ಹೊಣೆಯಲ್ಲ, ಅದು ನಮ್ಮ ಜವಾಬ್ದಾರಿ. ಅವರು ಹೇಗೆ ಮತ್ತು ಏಕೆ ಪ್ರಧಾನಿಯವರನ್ನು ಅಭಿನಂದಿಸಲು ಬಂದರು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ಪ್ರಧಾನಿಯನ್ನು ಟ್ರೋಲ್ ಮಾಡುವ ಅಗತ್ಯವಿಲ್ಲ ಮತ್ತು ತಮ್ಮದೇ ಪಕ್ಷದಲ್ಲಿ (ಕಾಂಗ್ರೆಸ್) ಅನೇಕ ರೌಡಿಶೀಟರ್‌ಗಳಿದ್ದಾರೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಬಿಜೆಪಿಯಲ್ಲಿ, ಒಂದು ಲೋಪದಿಂದಾಗಿ, ರೌಡಿ ಶೀಟರ್ ಇದ್ದರು. ಆದರೆ ಕಾಂಗ್ರೆಸ್‌ನಲ್ಲಿ, ಪಕ್ಷವನ್ನು ಮುನ್ನಡೆಸುತ್ತಿರುವವರೇ ರೌಡಿ ಶೀಟರ್‌ಗಳು.. ಅವರಿಗೆ ನೈತಿಕತೆ ಇಲ್ಲ ಹಾಗಾಗಿ ಅದರ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ' ಎಂದು ಹೇಳಿದರು.
ಬಿಜೆಪಿಯ ಹಿರಿಯರಿಗೆ ಸಿಗದ ಸ್ಥಾನಗಳೂ ಸೋಮಣ್ಣಗೆ ಸಿಕ್ಕಿದೆ
ಇದೇ ವೇಳೆ ಸಚಿವ ವಿ ಸೋಮಣ್ಣ ಅವರು ಬಿಜೆಪಿ ಮೇಲೆ ಮುನಿಸುಗೊಂಡು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ, 'ಸೋಮಣ್ಣ ಅವರು ಬಿಜೆಪಿಯ ಉನ್ನತ ನಾಯಕರು. ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ನಂತರ ಹಲವು ಜವಾಬ್ದಾರಿಗಳನ್ನು ನೀಡಲಾಗಿದೆ. ಬಿಜೆಪಿಯ ಹಿರಿಯರಿಗೆ ಸಿಗದ ಸ್ಥಾನಗಳೂ ಸೋಮಣ್ಣ ಅವರಿಗೆ ಸಿಕ್ಕಿದೆ. ಅವರು ಉಪ ಚುನಾವಣೆಯಲ್ಲಿ ಸೋತಿದ್ದರೂ ಅವರನ್ನು ಎಮ್ಎಲ್ಸಿ ಮಾಡಲಾಗಿದೆ. ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಅಂತ ಅವರು ಬೇಸರವಾಗುವುದು ಬೇಡ. ಅವರಿಗೆ ಬೇಸರ ಇದೆ ಅನ್ನೋದು ಊಹಾಪೋಹ. ಅವರು ತಮ್ಮ ಕ್ಷೇತ್ರದ ಕಡೆ ಗಮನ ಕೊಡುತ್ತಿದ್ದಾರೆ' ಎಂದರು.
ಇದನ್ನೂ ಓದಿ: ಸಕ್ಕರೆ ನಾಡಿನಲ್ಲಿ ಪಿಎಂ ಮಿಂಚಿನ ಸಂಚಾರ: ದಳಪತಿಗಳ ಭದ್ರಕೋಟೆ ಛಿದ್ರಗೊಳಿಸಲು ಮೋದಿ ರೋಡ್ ಶೋ ಬ್ರಹ್ಮಾಸ್ತ್ರ!
ಯಾರು ಈ ಫೈಟರ್ ರವಿ?
ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಕಳೆದೆರಡು ವರ್ಷಗಳಿಂದ ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. 2022ರ ನವೆಂಬರ್ ತಿಂಗಳಲ್ಲಿ ಸಚಿವರಾದ ಅಶ್ವತ್ಥ ನಾರಾಯಣ, ಗೋಪಾಲಯ್ಯ, ನಾರಾಯಣಗೌಡ ಅವರ ಸಮ್ಮುಖದಲ್ಲಿ ಮಂಡ್ಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮಾತ್ರವಲ್ಲದೆ, ಇತ್ತೀಚೆಗೆ ನಾಗಮಂಗಲದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ್ದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಾಗಮಂಗಲ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ್ ಫೈಟರ್ ರವಿ ಅವರ ಗೆಲುವು ನಿಶ್ಚಿತ ಎಂದು ಹೇಳಿಕೆ ನೀಡಿದ್ದರು.