ಅರಸೀಕೆರೆಯಲ್ಲಿ ಹೈವೋಲ್ಟೇಜ್ ಕದನ: ಶಾಸಕ ಶಿವಲಿಂಗೇಗೌಡರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್ ಭರ್ಜರಿ ಪ್ಲಾನ್!
ಅರಸೀಕೆರೆ ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅರಸೀಕೆರೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಾನಾ ತಂತ್ರಗಳನ್ನು ರೂಪಿಸುತ್ತಿದ್ದು, ಪ್ರಾದೇಶಿಕ ಪಕ್ಷಕ್ಕೆ ದ್ರೋಹ ಬಗೆದಿದ್ದಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
Published: 16th March 2023 11:48 AM | Last Updated: 16th March 2023 02:03 PM | A+A A-

ಕೆ.ಎಂ ಶಿವಲಿಂಗೇಗೌಡ
ಹಾಸನ: ಅರಸೀಕೆರೆ ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅರಸೀಕೆರೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಾನಾ ತಂತ್ರಗಳನ್ನು ರೂಪಿಸುತ್ತಿದ್ದು, ಪ್ರಾದೇಶಿಕ ಪಕ್ಷಕ್ಕೆ ದ್ರೋಹ ಬಗೆದಿದ್ದಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
ಹಾಸನ ಕ್ಷೇತ್ರದಂತೆಯೇ ಜಿಲ್ಲೆಯ ಅರಸೀಕೆರೆಯಲ್ಲಿ ಜೆಡಿಎಸ್‌ಗೆ ಕದನ ಪ್ರತಿಷ್ಠೆಯಾಗಿದೆ. ಕ್ಷೇತ್ರದಿಂದ ಕುರುಬರನ್ನು ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಹೋದರ ಹೆಚ್ ಡಿ ರೇವಣ್ಣ ಅವರು ಸ್ಥಾನ ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಅರಸೀಕೆರೆಯಲ್ಲಿ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯ ಯಶಸ್ಸಿನಿಂದ ಹುಮ್ಮಸ್ಸಿನಲ್ಲಿರುವ ಮುಖಂಡರು ಕ್ಷೇತ್ರದಲ್ಲಿ ಬಹುಮತ ಹೊಂದಿರುವ ಒಬಿಸಿ, ಎಸ್ಸಿ, ಎಸ್ಟಿ ಮತಗಳನ್ನು ಗುರಿಯಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ನೆಲೆ ನಾಶಪಡಿಸಲು ರಾಷ್ಟ್ರೀಯ ಪಕ್ಷಗಳಿಗೆ ಸಾಧ್ಯವಿಲ್ಲ: ಎಚ್‌ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕರು ಎರಡು ತಿಂಗಳ ಹಿಂದಿನ ಹಳೆಯ ಆಡಿಯೋ ಕ್ಲಿಪ್ ವೈರಲ್ ಮಾಡಿದ್ದಾರೆ, ಇದರಲ್ಲಿ ಶಿವಲಿಂಗೇಗೌಡ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭಾರೀ ಹಿನ್ನಡೆಗೆ ಕಾರಣಗಳನ್ನು ರೇವಣ್ಣ ಅವರಿಗೆ ಅಂಕಿಅಂಶಗಳೊಂದಿಗೆ ವಿವರಿಸಿದ್ದಾರೆ.
ಮತ್ತೊಂದೆಡೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿಧರ್ ಸೇರಿದಂತೆ ಪ್ರಮುಖ ಲಿಂಗಾಯತ ಮುಖಂಡರನ್ನು ಸೆಳೆಯಲು ಕುಮಾರಸ್ವಾಮಿ ಪ್ರಯತ್ನ ನಡೆಸುತ್ತಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರ್ಧರಿಸಿದ ನಂತರ ಶಶಿಧರ್ ಅವರು ಕಾಂಗ್ರೆಸ್ ತೊರೆದಿದ್ದಾರೆ. ಹೀಗಾಗಿ ಲಿಂಗಾಯತ ನಾಯಕರಾದ ಆದ ನಿರಂಜನ್ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷ ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯಿಂದ ಅರಸೀಕೆರೆ ಕದನ ಹೈವೋಲ್ಟೇಜ್ ಆಗಲಿದೆ.
ಇದನ್ನೂ ಓದಿ: ಸೂಕ್ತ ಸಮಯಕ್ಕೆ ಶಾಸಕ ಕೆ.ಎಂ ಶಿವಲಿಂಗೇಗೌಡ ಆಡಿಯೋ ಬಿಡುಗಡೆ ಮಾಡ್ತೀನಿ: ಎಚ್.ಡಿ ರೇವಣ್ಣ
ಜೆಡಿಎಸ್ ನಾಯಕರು ಉದ್ದೇಶಪೂರ್ವಕವಾಗಿ ಆಡಿಯೋ ವೈರಲ್ ಮಾಡಿದ್ದಾರೆ. ಚುನಾವಣೆ ವೇಳೆ ಲಾಭ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.