ಬಿಜೆಪಿಯೊಳಗೆ ನನ್ನ ತೇಜೋವಧೆಗೆ ಪ್ರಯತ್ನ,3 ಸುಳ್ಳು ಕೊಲೆ ಪ್ರಕರಣಗಳಲ್ಲಿ ನನ್ನನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದರು, ದೇವರು ನನ್ನ ಕಾಪಾಡಿದರು: ಮತ್ತೆ ಭಾವುಕರಾದ ಸೋಮಣ್ಣ 

ಪಕ್ಷದ ಹೈಕಮಾಂಡ್ ಎಲ್ಲಿ ಚುನಾವಣೆಯಲ್ಲಿ ನಿಲ್ಲುವಂತೆ ಹೇಳುತ್ತಾರೋ ಅಲ್ಲಿ ನಿಲ್ಲುತ್ತೇನೆ, ನನ್ನ ಇದುವರೆಗಿನ ಚುನಾವಣಾ ರಾಜಕೀಯದಲ್ಲಿ 2 ಚುನಾವಣೆ ಸೋತಿರಬಹುದು, ಆದರೆ ಸಂಸ್ಕಾರ, ಸಂಸ್ಕೃತಿ, ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ, ಪಕ್ಷ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ಸಿಡಿಮಿಡಿಗೊಂಡು ದೆಹ
ವಿ ಸೋಮಣ್ಣ
ವಿ ಸೋಮಣ್ಣ

ಬೆಂಗಳೂರು: ಪಕ್ಷದ ಹೈಕಮಾಂಡ್ ಎಲ್ಲಿ ಚುನಾವಣೆಯಲ್ಲಿ ನಿಲ್ಲುವಂತೆ ಹೇಳುತ್ತಾರೋ ಅಲ್ಲಿ ನಿಲ್ಲುತ್ತೇನೆ, ನನ್ನ ಇದುವರೆಗಿನ ಚುನಾವಣಾ ರಾಜಕೀಯದಲ್ಲಿ 2 ಚುನಾವಣೆ ಸೋತಿರಬಹುದು, ಆದರೆ ಸಂಸ್ಕಾರ, ಸಂಸ್ಕೃತಿ, ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ, ಪಕ್ಷ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ಸಿಡಿಮಿಡಿಗೊಂಡು ದೆಹಲಿಗೆ ಹೋಗಿಬಂದು ಸುದ್ದಿಯಾಗಿರುವ ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಗೆ ಒಬ್ಬನೇ ಬಂದವನಲ್ಲ, 30-40 ಜನರನ್ನು ಕರೆದುಕೊಂಡು ಬಂದಿದ್ದೆ. ಚಿಂಚೋಳಿ ಕ್ಷೇತ್ರದಲ್ಲಿ 3-4 ಇದ್ದ ಸಂಖ್ಯೆಯನ್ನು 3-5 ಮಾಡಿದ್ದು ಈ ಸೋಮಣ್ಣ. ಪಕ್ಷಕ್ಕೋಸ್ಕರ ದುಡಿದವನು ಸೋಮಣ್ಣ. ಹೀಗೆ ಅನೇಕ ಕ್ಷೇತ್ರಗಳಿಗೆ ಸಹಾಯ ಮಾಡಿದ್ದೇನೆ ಎಂದು ಹೇಳುವ ಮೂಲಕ ಸೋಮಣ್ಣ ಪರೋಕ್ಷವಾಗಿ ತಾನೊಬ್ಬ ಪ್ರಭಾವಶಾಲಿ ನಾಯಕ ಎಂದು ಹೇಳಿಕೊಂಡರು.

ಪಕ್ಷದಲ್ಲಿ ನನಗಿಂತ ಹೆಚ್ಚಿನ ಅರ್ಹತೆ ಇರುವ ಹಲವಾರು ಜನರಿದ್ದಾರೆ. ಯಾರಿಗೆ ಅವಕಾಶ ಸಿಕ್ಕಿಲ್ಲವೋ ಅಂಥವರಿಗೆ ಸಿಗಬೇಕಾಗಿದೆ ಎಂದು ಹೇಳುವ ಮೂಲಕ ವಿ.ಸೋಮಣ್ಣ ಚಾಮರಾಜನಗರ ಸ್ಪರ್ಧೆ ಗುಟ್ಟು ಬಿಟ್ಟುಕೊಡಲಿಲ್ಲ.

ನಾನು 10 ಬಾರಿ ಚುನಾವಣೆ ಎದುರಿಸಿ 7 ಬಾರಿ ಶಾಸಕನಾಗಿದ್ದೇನೆ. ಚಾಮರಾಜನಗರ ಜಿಲ್ಲೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಚಾಮರಾಜನಗರ ಜಿಲ್ಲೆಯನ್ನು ಮುಖ್ಯವಾಹಿನಿಗೆ ತರಬೇಕೆಂಬ ಹಂಬಲವಿದೆ. ಮಲೆ ಮಹದೇಶ್ವರ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ ಹಲವಾರು ದೇವಸ್ಥಾನಗಳಿಗೆ, ದೇವರ ಇಚ್ಛೆಯಂತೆ ಕೆಲಸ ಮಾಡುತ್ತೇನೆ ಎಂದರು.

20 ಕೋಟಿ ರೂ. ವೆಚ್ಚದಲ್ಲಿ ಮಹದೇಶ್ವರ ಪ್ರತಿಮೆ: ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಮಹದೇಶ್ವರ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಸದ್ಯ ಪ್ರತಿಮೆ ಸಂಪೂರ್ಣ ನಿರ್ಮಾಣ ಮಾತ್ರವಾಗಿದ್ದು, ಮಹದೇಶ್ವರ ಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ ಎಂದರು.

ಬಿಜೆಪಿ ಬಿಡುವುದಿಲ್ಲ: ನಾನು ಬಿಜೆಪಿ ಬಿಡುವುದಿಲ್ಲ, ಇದು ರಾಷ್ಟ್ರೀಯ ಪಕ್ಷ, ಬಿಜೆಪಿಯಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿದೆ, ಮರ್ಯಾದೆ, ಗೌರವ ಸಿಕ್ಕಿದೆ, ಅದಕ್ಕೆ ದ್ರೋಹ ಮಾಡುವುದಿಲ್ಲ ಎಂದರು.

ನಿರರ್ಗಳವಾಗಿ ನಾನು ಮಾತನಾಡುವ ವ್ಯಕ್ತಿ. ಪಿಗ್ಮಿ ಕಲೆಕ್ಟ್ ಮಾಡಲು ಕೂಡ ನಾನು ತಯಾರಿದ್ದೇನೆ, ನನ್ನ ಜೀವನವನ್ನು ನಾನು ರೂಪಿಸಿಕೊಂಡಿದ್ದೇನೆ. ಬಿಜೆಪಿಯಲ್ಲಿ ನನ್ನ ವಿರುದ್ಧ ಅನವಶ್ಯಕವಾಗಿ ತೇಜೋವಧೆ ಮಾಡಲಾಗುತ್ತಿದೆ. ನಾನು 1983ರಲ್ಲಿ ಕಾರ್ಪೊರೇಟರ್ ಆಗಿದ್ದೆ, ರಾಜಕೀಯದಲ್ಲಿ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರು. ವಿ ಎಸ್ ಕೃಷ್ಣ ಅಯ್ಯರ್ ಅವರು ರಾಜಕೀಯ ಗುರು.ಮೂರು ಸುಳ್ಳು ಕೊಲೆ ಪ್ರಕರಣಗಳಲ್ಲಿ ನನ್ನನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದರು. ಆದರೆ ದೇವರು ನನ್ನನ್ನು ಕಾಪಾಡಿದರು ಎಂದು ಭಾವುಕರಾಗಿ ಸೋಮಣ್ಣ ಮತ್ತೆ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com