ಕೇಂದ್ರೀಯ ಸಂಸ್ಥೆಗಳ ಬಳಸಿ ಸರ್ಕಾರ ಕಾಂಗ್ರೆಸ್'ನ್ನು ಬೆದರಿಸಲು ಸಾಧ್ಯವಿಲ್ಲ; ಮಲ್ಲಿಕಾರ್ಜುನ ಖರ್ಗೆ
ಮಹಿಳೆಯರಿಗೆ ಕಿರುಕುಳ ನೀಡಿದ್ದರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.
Published: 21st March 2023 09:23 AM | Last Updated: 21st March 2023 04:57 PM | A+A A-

ಪಕ್ಷದ ನಾಲ್ಕನೇ ಚುನಾವಣಾ ಭರವಸೆಯ ಭಾಗವಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಸೋಮವಾರ ಬೆಳಗಾವಿಯಲ್ಲಿ ಯುವ ನಿಧಿ ಕಾರ್ಡ್ ಬಿಡುಗಡೆ ಮಾಡಿದರು.
ಬೆಳಗಾವಿ: ಮಹಿಳೆಯರಿಗೆ ಕಿರುಕುಳ ನೀಡಿದ್ದರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಯುವ ಕ್ರಾಂತಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ ಅವರು, ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಪ್ರತಿಕ್ರಿಯಿಸಿ ಮೋದಿಜಿ, ಆಪ್ ಕೋಶಿಶ್ ಕರೋ ಹಮೇ ಮಿಟ್ಟಿ ಮೇ ದಬನೇಕಿ, ಲೇಕಿನ್ ಹಮ್ ಬೀಜ್ ಹೈ, ಬಾರ್ ಬಾರ್ ಉಗ್ತೇ ರೆಹತೇ ಹೈ (ಮಿಸ್ಟರ್ ಮೋದಿ, ನೀವು ನಮ್ಮನ್ನು ಮಣ್ಣಿನ ಕೆಳಗೆ ಹೂತು ಹಾಕಲು ಪ್ರಯತ್ನಿಸುತ್ತಿರಿ, ಆದರೆ, ನಾವು ಪ್ರತಿ ಬಾರಿಯೂ ಬೀಜದಂತೆ ಮೊಳಕೆಯೊಡೆಯುತ್ತಲೇ ಇರುತ್ತೇವೆ) ಎಂದು ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಲು ಅವರ ನಿವಾಸಕ್ಕೆ ದೆಹಲಿ ಪೊಲೀಸರು ಭೇಟಿ ನೀಡಿದ್ದನ್ನು ಮಲ್ಲಿಕಾರ್ಜುನ ಖರ್ಗೆಯವರು ಟೀಕಿಸಿದರು.
ಇದನ್ನೂ ಓದಿ: ಪ್ರತಿಪಕ್ಷ ನಾಯಕರಿಗೆ ಇಡಿ-ಸಿಬಿಐ, ಮೆಹುಲ್ ಚೋಕ್ಸಿಗೆ ಇಂಟರ್‌ಪೋಲ್ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ಜಾರಿ ನಿರ್ದೇಶನಾಲಯ, ಸಿಬಿಐ ಅಥವಾ ಇತರ ಕೇಂದ್ರೀಯ ಸಂಸ್ಥೆಗಳ ಮೂಲಕ ಕೇಂದ್ರವು ಕಾಂಗ್ರೆಸ್ ನಾಯಕರನ್ನು ಹೆದರಿಸಲು ಸಾಧ್ಯವಿಲ್ಲ. “ನೀವು ನಮ್ಮನ್ನು (ಕಾಂಗ್ರೆಸ್ ನಾಯಕರನ್ನು) ಜೈಲಿಗೆ ಹಾಕಲು ಬಯಸಿದರೆ, ಮಾಡಿ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ. ನಿಮ್ಮ ಬಗ್ಗೆ ಎಂದಿಗೂ ಹೆದರುವುದಿಲ್ಲ ಎಂದು ಸವಾಲು ಹಾಕಿದರು.
“ಕರ್ನಾಟಕದಲ್ಲಿ, ಗುತ್ತಿಗೆದಾರರ ಸಂಘವು ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರವು ಕಾಮಗಾರಿಗಳಿಗೆ ಶೇ.40 ಕಮಿಷನ್‌ಗೆ ಒತ್ತಾಯಿಸುತ್ತಿದೆ ಎಂದು ದೂರು ನೀಡಿದೆ. ಇದಕ್ಕೆ ಸಾಕ್ಷ್ಯಾಧಾರಗಳೂ ಇವೆ. ಆದರೆ, ಮೋದಿ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕೇಂದ್ರೀಯ ಸಂಸ್ಥೆಗಳು ತನಿಖೆ ನಡೆಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಅದಾನಿ ವಿಚಾರವಾಗಿ ಜೆಪಿಸಿ ತನಿಖೆ, ಲಂಡನ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆಗಳಿಂದ ಸಂಸತ್ತು ಸ್ತಬ್ಧ
ಮೋದಿ ಸರ್ಕಾರ ಸಂಪೂರ್ಣ ಸುಳ್ಳು ಹೇಳುವ ಸರ್ಕಾರವಾಗಿದೆ. ನಾನು ಮತ್ತು ರಾಹುಲ್ ಅವರು ಸಂಸತ್ತಿನಲ್ಲಿ ಅದಾನಿ ಪ್ರಕರಣದ ಬಗ್ಗೆ ಕೇಂದ್ರ ನಾಯಕತ್ವವನ್ನು ಪ್ರಶ್ನಿಸಿದಾಗ ಅದನ್ನು ಕಡತದಿಂದ ತೆಗೆದು ಹಾಕುತ್ತಾರೆ. "ಇದು ದೇಶದ ಪ್ರಜಾಪ್ರಭುತ್ವದ ಸ್ಥಿತಿಯಾಗಿದೆ, ಅಲ್ಲಿ ಯಾರಿಗೂ ತಪ್ಪುಗಳನ್ನು ಎತ್ತಿ ತೋರಿಸಲು ಮತ್ತು ಸರ್ಕಾರವನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಖರ್ಗೆಯವರ ರಿಮೋಟ್ ಕಟ್ರೋಲ್ ಬೇರೆಯವರ ಬಳಿ ಇದೆ ಎಂದು ಟೀಕಿಸಿದ್ದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಖರ್ಗೆಯವರು, ಹಾಗಾದರೆ ನಿಮ್ಮ ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ? ಬಿಜೆಪಿ ಅಧ್ಯಕ್ಷರನ್ನು ಯಾರು ನಿಯಂತ್ರಿಸುತ್ತಿದ್ದಾರೆ? ಎಂದು ತಿರುಗೇಟು ನೀಡಿದರು.