ಅಥಣಿಯಿಂದ ಕುಮಟಳ್ಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್ ಸ್ಪರ್ಧೆ: ರಮೇಶ್ ಜಾರಕಿಹೊಳಿ
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಹಾಲಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಹಾಲಿ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದೆ’ ಎಂದು ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರು ಸೋಮವಾರ ಹೇಳಿದರು.
Published: 21st March 2023 11:22 AM | Last Updated: 21st March 2023 01:29 PM | A+A A-

ರಮೇಶ್ ಜಾರಕಿಹೊಳಿ
ಬೆಳಗಾವಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಹಾಲಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಹಾಲಿ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದೆ’ ಎಂದು ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರು ಸೋಮವಾರ ಹೇಳಿದರು.
ಅಥಣಿಯಲ್ಲಿ ಆರ್‌ಎಸ್‌ಎಸ್ ಮುಖಂಡ ಅರವಿಂದ್ ದೇಶಪಾಂಡೆ, ಇತರೆ ನಾಯಕರೊಂದಿಗೆ ಗೌಪ್ಯಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದು ವೇಳೆ ಅಂತಿಮಗೊಂಡ ಅಭ್ಯರ್ಥಿಗಳನ್ನು ಬದಲಾಯಿಸಿದ್ದೇ ಆದರೆ, ನಾನು ಮತ್ತು ಕುಮಟಳ್ಳಿ ರಾಜಕೀಯದಿಂದ ನಿವೃತ್ತಿಪಡೆಯುತ್ತೇವೆಂದು ಹೇಳಿದರು.
28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಥಣಿಗೆ ಭೇಟಿ ನೀಡಲಿದ್ದು, 13 ಸಾವಿರ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಹೇಳಿದರು.
ಇದನ್ನೂ ಓದಿ: ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ಚುನಾವಣೆಗೆ ನಾನು ಸ್ಪರ್ಧಿಸಲ್ಲ: ರಮೇಶ್ ಜಾರಕಿಹೊಳಿ ಬಾಂಬ್!
ಈ ಹಿಂದೆ ಯೋಜನೆಗೆ ಚಾಲನೆ ನೀಡುವುದಾಗಿ ಅಥಣಿ ಜನತೆಗೆ ಭರವಸೆ ನೀಡಿದ್ದೆ. ಆ ಭರವಸೆಯನ್ನು ಈಡೇರಿಸುವಲ್ಲಿ ಬದ್ಧನಾಗಿದ್ದೆ ಎಂದು ತಿಳಿಸಿದರು.
ಆದರೆ, ದೇಶಪಾಂಡೆ ಜೊತೆಗೆ ನಡೆದ ಗೌಪ್ಯ ಸಭೆ ಕುರಿತು ಮಾಹಿತಿ ನೀಡಲು ಜಾರಕಿಹೊಳಿಯವರು ನಿರಾಕರಿಸಿದರು. ಇದೊಂದು ಸಾಂದರ್ಭಿಕ ಭೇಟಿಯಷ್ಟೇ ಎಂದು ಹೇಳಿದರು. ಅಮಿತ್ ಶಾ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಜಾರಕಿಹೊಳಿ ನಿರಾಕರಿಸಿದರು.