ದಾವಣಗೆರೆಯಲ್ಲಿ ಮೋದಿ ಘರ್ಜನೆ: ಖರ್ಗೆ, ಸಿದ್ದರಾಮಯ್ಯ, ಕಾಂಗ್ರೆಸ್ ಗ್ಯಾರಂಟಿಗಳ ಗುರಿಯಾಗಿಸಿಕೊಂಡು ವಾಗ್ದಾಳಿ

ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿದರು. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ದಾವಣಗೆರೆ: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿದರು. 

ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್​​ನವರು ಹಲವು ಗ್ಯಾರಂಟಿಗಳನ್ನು ಘೋಷಿಸಿದ್ದು ಇವುಗಳೆಲ್ಲ ಪೊಳ್ಳು ಭರವಸೆಗಳು ಎಂದು ಟೀಕಿಸಿದರು. ಮತ್ತೊಂದೆಡೆ ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷರ ಕರ್ಮಭೂಮಿಯಲ್ಲಿ ಬಿಜೆಪಿಯ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತ. ಕರ್ನಾಟಕದಲ್ಲಿ ಬಿಜೆಪಿ ವಿಜಯ ಯಾತ್ರೆ ಆರಂಭವಾಗಿದೆ ಎಂದರು. ಇದು ಹೀಗೆ ಮುಂದುವರೆಯಬೇಕು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ತಂದುಕೊಡುಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಇನ್ನು ತ್ಯಾಗ, ತಪಸ್ಸಿನಿಂದ ತುಂಬಿರುವ ಜೀವನ ನಡೆಸುತ್ತಿರುವ ನಿಮ್ಮೆಲ್ಲರ ದರ್ಶನ ಮಾಡುವುದು ನನ್ನ ಸೌಭಾಗ್ಯ. ವಿಜಯ ಮಹೋತ್ಸವದಂತೆ ಈ ವಿಜಯ ಸಂಕಲ್ಪ ರ‍್ಯಾಲಿ ಕಾಣುತ್ತಿದೆ ಎಂದರು. ದೇಶಾದ್ಯಂತ 7 ಟೆಕ್ಸ್ ಟೈಲ್ಸ್ ಹಬ್ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಒಂದು ದಾವಣಗೆರೆಯಲ್ಲಿ ಇದೆ. ಇದು ಹಲವು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ಯುವಕರಿಗೆ ಉದ್ಯೋಗದ ಅವಕಾಶಗಳು ಸಿಗಲಿವೆ. ಜಗತ್ತಿನಾದ್ಯಂತ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ. ಇದು ಕೇವಲ ಮೋದಿಯ ಕಾರಣಕ್ಕೆ ಅಲ್ಲ. ನೀವೆಲ್ಲರೂ ಮತ ನೀಡಿದ ಕಾರಣಕ್ಕೆ ಎಂದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ನೋಡಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷದ ಪ್ರಮುಖ ನಾಯಕರೊಬ್ಬರು ಕಾರ್ಯಕರ್ತನ ಕಪಾಳಕ್ಕೆ ಹೊಡೆಯುತ್ತಾರೆ. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸದವರು ನಾಡಿನ ಜನರನ್ನು ಗೌರವಿಸುತ್ತಾರಾ ಎಂದು ಪ್ರಶ್ನಿಸಿದರು. ಇದಕ್ಕೆಲ್ಲಾ ನೀವು ಮತದಾನದ ಮೂಲಕ ಉತ್ತರ ನೀಡಬೇಕು ಎಂದರು. 

ರಾಜ್ಯದಲ್ಲಿನ ದಲಿತ, ಆದಿವಾಸಿ ಸೇರಿದಂತೆ ವಂಚಿತ ಸಮುದಾಯಗಳ ಏಳಿಗೆ ನಮ್ಮ ಆದ್ಯತೆಯಾಗಿದೆ. ಹೀಗಾಗಿ ಇದನ್ನೆಲ್ಲಾ ಈಡೇರಿಸಬೇಕಾದರೆ ಪೂರ್ಣ ಬಹುಮತದ ಅಗತ್ಯವಿದೆ. ಕರ್ನಾಟಕಕ್ಕೆ ಬಹುಮತದ ಸರ್ಕಾರ ಬೇಕಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಸ್ಥಿರ ಸರ್ಕಾರ ಅಗತ್ಯ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com