ಕೆ ಆರ್ ಪುರ- ವೈಟ್‌ಫೀಲ್ಡ್ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಚಾಲನೆ: ಮಹಿಳಾ ಲೋಕೋ ಪೈಲಟ್ ಚಾಲಿತ ರೈಲಿನಲ್ಲಿ ಮೋದಿ ಪ್ರಯಾಣ
ಬಹು ನಿರೀಕ್ಷಿತ ಕೆ ಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಉದ್ಘಾಟನೆ ಮಾಡಿದರು.
Published: 25th March 2023 01:59 PM | Last Updated: 25th March 2023 04:29 PM | A+A A-

ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ.
ಬೆಂಗಳೂರು: ಬಹು ನಿರೀಕ್ಷಿತ ಕೆ ಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಉದ್ಘಾಟನೆ ಮಾಡಿದರು.
ಬೆಂಗಳೂರಿನ ಕೆಆರ್‌ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ ಬಳಿಕ ಮೋದಿಯವರು, ನಾಲ್ಕು ಕಿ.ಮೀ ವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಮೆಟ್ರೋ ರೈಲು ಸಂಚಾರದ ವೇಳೆ ಮೋದಿಯವರು ಮೆಟ್ರೋ ಸಿಬ್ಬಂದಿಗಳು, ಮಕ್ಕಳು, ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿದರು.
ಮೆಟ್ರೋ ರೈಲು ಸಂಚಾರಕ್ಕೆ ಉದ್ಘಾಟನೆ ಬಳಿಕ ನಿಲ್ದಾಣದಲ್ಲಿದ್ದ ಗ್ಯಾಲರಿಗೆ ತೆರಳಿದ ಸುತ್ತಲೂ ಓಡಾಡಿ ಅಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದರು. ಬಳಿಕ ಟಿಕೆಟ್ ಕೌಂಟರ್'ಗೆ ಟೋಕನ್ ಖರೀದಿಸಿದರು. ಈ ವೇಳೆ ಭಾರತಿ ಎಸ್ ಅಯ್ಯರ್ ಅವರು ಮೋದಿಯವರಿಗೆ ಟಿಕೆಟ್ ಹಸ್ತಾಂತರಿಸಿದರು.
ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಸತ್ಯ ಸಾಯಿ ಆಸ್ಪತ್ರೆಗೆ ತೆರಳಲು ಮೋದಿಯವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ರೈಲು ಹತ್ತಿದರು. ಈ ವೇಳೆ ರೈಲನ್ನು ಮಹಿಳಾ ಲೋಕೋ ಪೈಲಟ್ ಪಿ ಪ್ರಿಯಾಂಕಾ ಅವರು ಚಲಾಯಿಸಿದರು. ರೈಲು ಹೋಪ್ ಫಾರ್ಮ್, ಚನ್ನಸಂದ್ರ, ಕಾಡುಗೋಡಿ ಟ್ರೀ ಪಾರ್ಕ್, ಪಟ್ಟಂದೂರು ಅಗ್ರಹಾರಕ್ಕೆ ತೆರಳಿ ನಂತರ ಶ್ರೀ ಸತ್ಯಸಾಯಿ ಆಸ್ಪತ್ರೆ ನಿಲ್ದಾಣದಲ್ಲಿ ನಿಂತಿತು.
PM Shri @NarendraModi Ji takes a ride on the newly inaugurated Whitefield Metro Line in Bengaluru, Karnataka https://t.co/eVfdlqh9BC
— CM of Karnataka (@CMofKarnataka) March 25, 2023
ಎರಡೂ ಕಡೆಗಳಲ್ಲಿ ಇಂಜಿನ್‌ಗಳಿರುವುದರಿಂದ ರೈಲು ರಿಟರ್ನ್ ಟ್ರಿಪ್ ತಕ್ಷಣವೇ ಪ್ರಾರಂಭಿಸಿತು. ಮೋದಿಯವರು ಇದೇ ರೈಲಿನಲ್ಲಿ ಮರಳಿ ನಿಲ್ದಾಣಕ್ಕೆ ವಾಪಸ್ಸಾದರು. ಈ ವೇಳೆ ಪ್ರಿಯಾಂಕಾ ಬಳ್ಳಾರಿಯವರು ರೈಲನ್ನು ಚಲಾಯಿಸಿದರು.
ಇನ್ನು ಆಸ್ಪತ್ರೆಯ ಆಚೆಗಿನ ಇತರ ನಿಲ್ದಾಣಗಳೆಂದರೆ ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ, ಗರುಡಾಚಾರ್ಪಾಳ್ಯ, ಸಿಂಗಯ್ಯನಪಾಳ್ಯ ಮತ್ತು ಕೃಷ್ಣರಾಜಪುರ ಆಗಿದೆ ಎಂದು ಬಿಎಂಆರ್ಸಿಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರದಿಂದ ಐದು ರೈಲುಗಳು 10- 12 ನಿಮಿಷಗಳ ಅಂತರದೊಳಗೆ ಸೇವೆಯನ್ನು ನೀಡಲಿದೆ. ರೈಲು ನಿರ್ವಹಣೆಗೆ ಅನುಕೂಲವಾಗುವಂತೆ ಈ ಮಾರ್ಗವನ್ನು ಕಾಡುಗೋಡಿ ಡಿಪೋದೊಂದಿಗೆ ಸಂಪರ್ಕಿಸಲಾಗಿದೆ. ಈ ಮಾರ್ಗದಲ್ಲಿ 1.5 ಲಕ್ಷ ಪ್ರಯಾಣಿಕರ ನಿರೀಕ್ಷೆಗಳಿವೆ ಎಂದು ತಿಳಿಸಿದೆ.
13.71 ಕಿ.ಮೀ. ಉದ್ದದ ಕೆ ಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು 4,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ದೇಶದ ಎರಡನೇ ಅತಿ ದೂರ ಕ್ರಮಿಸುವ ಮೆಟ್ರೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ದೆಹಲಿ ಮೆಟ್ರೋ ಪ್ರಸ್ತುತ 390 ಕಿ.ಮೀ. ಸಂಚಾರ ಮಾರ್ಗ ಹೊಂದಿದ್ದು, ದೇಶದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದೆ.