ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಪ್ರಮುಖ ಅಭ್ಯರ್ಥಿಗಳಿವರು...

ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ನಾಯಕರಾಗಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ನಾಯಕರಾಗಿದ್ದಾರೆ. 

ಡಿ ಕೆ ಶಿವಕುಮಾರ್ ಎಂದಿನಂತೆ ಕನಕಪುರದಿಂದ ಸ್ಪರ್ಧಿಸುತ್ತಿದ್ದರೆ, ಸಿದ್ದರಾಮಯ್ಯ ಅವರು ಪ್ರಸ್ತುತ ತಮ್ಮ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರಕ್ಕೆ ಮರಳುತ್ತಿದ್ದಾರೆ. 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಯತೀಂದ್ರ ಅವರ ಹೆಸರು ಬೇರೆ ಕ್ಷೇತ್ರಗಳಲ್ಲಿಯೂ ಪ್ರಕಟವಾಗಿಲ್ಲ. 

ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಬಾದಾಮಿಯನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದರು, ಆದರೆ ಪಕ್ಷದ ನಾಯಕತ್ವವು ಅಲ್ಲಿಂದ ಸ್ಪರ್ಧಿಸುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ ನಂತರ ಹಿಂದೆ ಸರಿದರು. 

ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನು ಎರಡನೇ ಕ್ಷೇತ್ರ ಆಯ್ಕೆಯ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಸಿದ್ದರಾಮಯ್ಯ ಅವರು ಕೋಲಾರ ಮತ್ತು ಬಾದಾಮಿ ಮೇಲೆ ಕಣ್ಣಿಟ್ಟಿರುವ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿರುವ ಪ್ರಸ್ತುತ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂ 100 ಸೀಟುಗಳಿಗೆ ಹೆಸರು ಅಂತಿಮಗೊಳ್ಳಬೇಕಿದೆ. ಕರ್ನಾಟಕವು ಒಟ್ಟು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

ಭಾರತೀಯ ಚುನಾವಣಾ ಆಯೋಗವು ಮುಂದಿನ ಕೆಲವು ದಿನಗಳಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರು ಪ್ರತಿನಿಧಿಸುವ ಸ್ಥಾನಗಳು ಮತ್ತು ರಾಜ್ಯ ಘಟಕದಿಂದ ಕೇವಲ ಒಂದು ಹೆಸರನ್ನು ಮಾತ್ರ ಶಿಫಾರಸು ಮಾಡಿದ ಕ್ಷೇತ್ರಗಳನ್ನು ಒಳಗೊಂಡಿದೆ.

ಕುತೂಹಲಕಾರಿಯಾಗಿ, ಏಳು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ ಎಚ್ ಮುನಿಯಪ್ಪ ಅವರು ರಾಜ್ಯ ರಾಜಕೀಯಕ್ಕೆ ಮರಳಿದ್ದಾರೆ. ಪಕ್ಷದಿಂದ ದೇವನಹಳ್ಳಿಯಿಂದ ಕಣಕ್ಕಿಳಿದಿದ್ದಾರೆ, ಅವರ ಪುತ್ರಿ ಮತ್ತು ಕೆಜಿಎಫ್‌ನ ಹಾಲಿ ಶಾಸಕಿ ರೂಪಕಲಾ ಎಂ ಮತ್ತೊಮ್ಮೆ ಟಿಕೆಟ್ ಪಡೆದಿದ್ದಾರೆ. 

91ರ ಹರೆಯದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣದಿಂದ ಮತ್ತೊಮ್ಮೆ ಟಿಕೆಟ್ ಪಡೆದಿದ್ದು, ದಾವಣಗೆರೆ ಉತ್ತರದಿಂದ ಅವರ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ್ ಕೂಡ ಟಿಕೆಟ್ ಪಡೆದಿದ್ದಾರೆ. ಟಿಕೆಟ್ ಪಡೆದಿರುವ ಪಕ್ಷದ ಹಿರಿಯ ಮುಖಂಡರಲ್ಲಿ ಜಿ ಪರಮೇಶ್ವರ-ಕೊರಟಗೆರೆ ಸೇರಿದ್ದಾರೆ.

ಆರ್ ವಿ ದೇಶಪಾಂಡೆ- ಹಳಿಯಾಳ, ಎಚ್ ಕೆ ಪಾಟೀಲ್-ಗದಗ, ಎಂ ಬಿ ಬಾಟಿಲ್ (ಪ್ರಚಾರ ಸಮಿತಿ ಮುಖ್ಯಸ್ಥ)- ಬಬಲೇಶ್ವರ್, ಪ್ರಿಯಾಂಕ್ ಖರ್ಗೆ (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ)- ಚಿತಾಪುರ, ಕೆ ಆರ್ ರಮೇಶಕುಮಾರ್ (ಮಾಜಿ ಸ್ಪೀಕರ್)-ಶ್ರೀನಿವಾಸಪುರ, ಈಶ್ವರ ಖಂಡ್ರೆ (ಕಾರ್ಯಾಧ್ಯಕ್ಷ)-ಭಾಲ್ಕಿ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ (ಕಾರ್ಯಾಧ್ಯಕ್ಷ)- ಯಮಕನಮರಡಿ, ಕೆಜೆ ಜಾರ್ಜ್- ಸರ್ವಜ್ಞನಗರ, ದಿನೇಶ್ ಗುಂಡೂರಾವ್-ಗಾಂಧಿ ನಗರದಿಂದ ಸ್ಪರ್ಧಿಸುತ್ತಿದ್ದಾರೆ. 

ಇತ್ತೀಚೆಗಷ್ಟೇ ನಿಧನರಾದ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಪುತ್ರ ದರ್ಶನ್‌ ದರ್ಶನ್‌ ಧ್ರುವನಾರಾಯಣ ಅವರಿಗೆ ನಂಜನಗೂಡಿನಿಂದ ಟಿಕೆಟ್‌ ದೊರೆತಿದ್ದು, ಟಿ.ನರಸೀಪುರದಿಂದ ಈ ಸ್ಥಾನಕ್ಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹಿರಿಯ ಮುಖಂಡ ಎಚ್‌.ಸಿ.ಮಹದೇವಪ್ಪ ಕಣಕ್ಕಿಳಿದಿದ್ದಾರೆ.

ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಪುತ್ರ, ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸೆಣಸಲು ರಾಮನಗರದಿಂದ ಇಕ್ಬಾಲ್ ಹುಸೇನ್ ಎಚ್ ಎ ಕಣಕ್ಕಿಳಿದಿದ್ದಾರೆ. ಪಕ್ಷದ ನಾಯಕತ್ವದ ಸಂದೇಶವನ್ನು ಉಲ್ಲೇಖಿಸಿ ಶಿವಕುಮಾರ್ ತಮ್ಮ ಸಹೋದರ ಮತ್ತು ಕಾಂಗ್ರೆಸ್‌ನ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಅವರನ್ನು ಸ್ಥಾನದಿಂದ ಕಣಕ್ಕೆ ಇಳಿಸುವ ಬಗ್ಗೆ ಸೂಚಿಸಿದ್ದರು.

ಆದರೆ, ಸುರೇಶ್ ಅವರು ರಾಜ್ಯದ ಏಕೈಕ ಕಾಂಗ್ರೆಸ್ ಸಂಸದರಾಗಿದ್ದು, ರಾಜ್ಯ ರಾಜಕಾರಣದಲ್ಲಿ ನನಗೆ ಆಸಕ್ತಿಯಿಲ್ಲ ಎಂದು ಹೇಳಿ ಅವಕಾಶವನ್ನು ತಳ್ಳಿಹಾಕಿದ್ದರು. ಇತ್ತೀಚೆಗಷ್ಟೇ ಬಿಜೆಪಿಗೆ ಬಂದಿದ್ದ ಪುಟ್ಟಣ್ಣ ಮತ್ತು ಯು ಬಿ ಬಣಕಾರ್ ಅವರು ಕ್ರಮವಾಗಿ ರಾಜಾಜಿನಗರ ಮತ್ತು ಹಿರೇಕೆರೂರಿನಿಂದ ಕಣಕ್ಕಿಳಿದಿದ್ದಾರೆ.

ಸೊರಬದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರರಾದ ಇಬ್ಬರು ಒಡಹುಟ್ಟಿದವರ ನಡುವಿನ ಫೈಟ್ ಮತ್ತೊಮ್ಮೆ ನಿರೀಕ್ಷಿಸಲಾಗಿದೆ, ಕಾಂಗ್ರೆಸ್ ಮಧು ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಿದರೆ, ಬಿಜೆಪಿಯು ಕುಟುಂಬದ ಭದ್ರಕೋಟೆಯಾಗಿರುವ ಕ್ಷೇತ್ರದಿಂದ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. 

ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ತಂದೆ-ಮಗ ಅಥವಾ ತಂದೆ-ಮಗಳು ಮಾಜಿ ಸಚಿವ ಎಂ. ಕೃಷ್ಣಪ್ಪ ಮತ್ತು ಪುತ್ರ ಪ್ರಿಯಾಕೃಷ್ಣ ಕ್ರಮವಾಗಿ ವಿಜಯನಗರ ಮತ್ತು ಗೋವಿಂದರಾಜ್ ನಗರ ಕ್ಷೇತ್ರದಿಂದ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ (ಕಾರ್ಯಾಧ್ಯಕ್ಷ) ಮತ್ತು ಅವರ ಪುತ್ರಿ ಸೌಮ್ಯ ಆರ್ ಕ್ರಮವಾಗಿ ಬಿಟಿಎಂ ಲೇಔಟ್ ಮತ್ತು ಜಯನಗರದಿಂದ ಕಣಕ್ಕಿಳಿದಿದ್ದಾರೆ. 

ಹಾಗೆಯೇ ಬಂಟ್ವಾಳದಿಂದ ಮಾಜಿ ಸಚಿವ ರಮಾನಾಥ ರೈ ಬಿ ಮತ್ತು ಮೂಡಬಿದ್ರಿಯಿಂದ ಅವರ ಪುತ್ರ ಮಿಥುನ್ ಎಂ.ರೈ ಕಣಕ್ಕಿಳಿದಿದ್ದಾರೆ. 

ಮೊದಲ ಪಟ್ಟಿಯಲ್ಲಿ ಎಂಟು ಮುಸ್ಲಿಂ ಅಭ್ಯರ್ಥಿಗಳಿದ್ದಾರೆ- ಯು.ಟಿ.ಅಬ್ದುಲ್ ಖಾದರ್ ಅಲಿ ಫರೀದ್ (ಮಂಗಳೂರು), ತನ್ವೀರ್ ಸೇಠ್ (ನರಸಿಂಹರಾಜ), ಎನ್.ಎ.ಹರೀಸ್ (ಶಾಂತಿ ನಗರ), ರಿಜ್ವಾನ್ ಅರ್ಷದ್ (ಶಿವಾಜಿನಗರ), ರಹೀಮ್ ಖಾನ್ (ಬೀದರ್), ಇಕ್ಬಾಲ್ ಹುಸೇನ್ ಎಚ್. ರಾಮನಗರ), ಬಿ.ಝಡ್.ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಮತ್ತು ಕನೀಜ್ ಫಾತಿಮಾ (ಗುಲ್ಬರ್ಗ ಉತ್ತರ).

ಆರು ಮಹಿಳೆಯರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ- ಕನೀಜ್ ಫಾತಿಮಾ, ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ), ಡಾ.ಅಂಜಲಿ ನಿಂಬಾಳ್ಕರ್ (ಖಾನಾಪುರ), ರೂಪಕಲಾ ಎಂ (ಕೆಜಿಎಫ್), ಕುಸುಮಾ ಎಚ್ (ರಾಜರಾಜೇಶ್ವರಿನಗರ), ಸೌಮ್ಯ ಆರ್ (ಜಯನಗರ).

ಮೊದಲ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿರುವ ಚನ್ನಪಟ್ಟಣ ಹಾಗೂ ಬಿಜೆಪಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಣಕ್ಕಿಳಿಸುವ ಶಿಗ್ಗಾವಿಯಿಂದ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ ಎಂಬುದು ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com