ಚುನಾವಣೆ ಬಂದಾಗ ಚರಂಡಿ ಉದ್ಘಾಟನೆಗೂ ರಾಜ್ಯಕ್ಕೆ ಬರಲು ತಯಾರಾಗುವ ಮೋದಿಯವರಿಗೆ ನಾಚಿಕೆಯಾಗಬೇಕು: ಕಾಂಗ್ರೆಸ್

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮನಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಚುನಾವಣೆ ಬಂದಾಗ ಚರಂಡಿ ಉದ್ಘಾಟನೆಗೂ ಕರ್ನಾಟಕಕ್ಕೆ ಬರಲು ತಯಾರಾಗುವ ಮೋದಿಯವರಿಗೆ ಅಪೂರ್ಣ ಮೆಟ್ರೋ ಕಾಮಗಾರಿ ಉದ್ಘಾಟಿಸಲು ನಾಚಿಕೆ ಆಗಬೇಕು ಎಂದು ಶನಿವಾರ ವಾಗ್ದಾಳಿ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮನಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಚುನಾವಣೆ ಬಂದಾಗ ಚರಂಡಿ ಉದ್ಘಾಟನೆಗೂ ಕರ್ನಾಟಕಕ್ಕೆ ಬರಲು ತಯಾರಾಗುವ ಮೋದಿಯವರಿಗೆ ಅಪೂರ್ಣ ಮೆಟ್ರೋ ಕಾಮಗಾರಿ ಉದ್ಘಾಟಿಸಲು ನಾಚಿಕೆ ಆಗಬೇಕು ಎಂದು ಶನಿವಾರ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.

ಕಷ್ಟಕ್ಕೆ ಕರಿಬೇಡ, ಚುನಾವಣೆಗೆ ಮರೀಬೇಡ ಎಂಬಂತೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ಲೇನ್‌ಗೆ ಸಂಪರ್ಕವೇ ಇಲ್ಲದ, ಪೂರ್ಣಗೊಳ್ಳದ ಮೆಟ್ರೋ ಉದ್ಘಾಟನೆಗೆ ಬರುತ್ತಿದ್ದಾರೆ ಎಲೆಕ್ಷನ್ ಪ್ರೈಮ್ ಮಿನಿಸ್ಟರ್. 40% ಕಮಿಷನ್‌ನಿಂದಾಗಿ ಮೆಟ್ರೋ ಪಿಲ್ಲರ್ ಕುಸಿದು ಬಲಿಯಾದವರ ಕುಟುಂಬಕ್ಕೆ ಸಾಂತ್ವನ ಹೇಳುವುದಿಲ್ಲವೇ ಮೋದಿಯವರೇ? ಎಂದು ಪ್ರಶ್ನಿಸಿದೆ.

ಚುನಾವಣೆ ಬಂದಾಗ ಚರಂಡಿ ಉದ್ಘಾಟನೆಗೂ ಕರ್ನಾಟಕಕ್ಕೆ ಬರಲು ತಯಾರಾಗುವ ಮೋದಿ ಅವರಿಗೆ ಅಪೂರ್ಣ ಮೆಟ್ರೋ ಕಾಮಗಾರಿ ಉದ್ಘಾಟಿಸಲು ನಾಚಿಕೆ ಆಗಬೇಕು. ಬೈಯ್ಯಪ್ಪನಹಳ್ಳಿಯಲ್ಲಿ ಕೊನೆಯಾಗುವ ಹಾಲಿ ಮೆಟ್ರೋ ಲೇನ್ ಕೆಆರ್ ಪುರಕ್ಕೆ ಸಂಪರ್ಕವನ್ನೇ ಹೊಂದಿಲ್ಲ. ಇಂತಹ ಅವಾಂತರದ ಉದ್ಘಾಟನೆ ಎಲೆಕ್ಷನ್ ಪ್ರೈಮ್ ಮಿನಿಸ್ಟರ್'ಗೆ ಮಾತ್ರ ಸಾದ್ಯವೇನೋ.

ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ ಬಾಕಿ ಇರುವಾಗಲೇ ರೋಡ್ ಶೋ ಮಾಡಿದ ಮೋದಿ ಅವರೇ,ಟೋಲ್ ಸುಲಿಗೆಗೆ ಆಕ್ರೋಶಗೊಂಡಿರುವ ಜನರಿಗೆ ನಿಮ್ಮ ಮಾತುಗಳೇನು? ಉದ್ಘಾಟನೆಯಾದ ಮರುದಿನವೇ "ನ್ಯೂನತೆಯಿಂದ" ರಸ್ತೆ ಕಿತ್ತುಹೋಗಿದ್ದಕ್ಕೆ ನಿಮ್ಮ ಸಬೂಬು ಏನು? ಸಣ್ಣ ಮಳೆಗೆ ರಸ್ತೆ ಮುಳುಗಿದ್ದಕ್ಕೆ ನಿಮ್ಮ ಉತ್ತರವೇನು? ಎಂದು ಸರಣಿ ಪ್ರಶ್ನೆಗಳನ್ನು ಮಾಡಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಯಾಪೈಸೆ ನೀಡದ ಮೋದಿ ಅವರೇ, ಎಲ್ಲದರಲ್ಲೂ ಕ್ರೆಡಿಟ್ ಪಡೆಯಲು ಹವಣಿಸುವ ತಾವು "ಕ್ರೆಡಿಟ್ ಜೀವಿ" ಅಲ್ಲವೇ!? ಉದ್ಘಾಟನೆ ಮಾಡಿದಾಗಿನಿಂದ ಶಿವಮೊಗ್ಗಕ್ಕೆ ಎಷ್ಟು ವಿಮಾನಗಳು ಹಾರಾಡುತ್ತಿವೆ? ಎಷ್ಟು ಜನ, ಎಲ್ಲೆಲ್ಲಿಗೆ ಪ್ರಯಾಣಿಸಿದ್ದಾರೆ? ಉತ್ತರಿಸಲು ಸಾಧ್ಯವೇ?

ನೆರೆ ಬಂದಾಗ ಬರಬೇಡ, ಎಲೆಕ್ಷನ್ ಬಂದಾಗ ಬರದೇ ಇರಬೇಡ" ಇದು ಎಲೆಕ್ಷನ್ ಪ್ರೈಮ್ ಮಿನಿಸ್ಟರ್ ಅಳವಡಿಸಿಕೊಂಡಿರುವ ನೀತಿ. ನೆರೆಯಲ್ಲಿ ಅರ್ಧ ರಾಜ್ಯ ಮುಳುಗಿದ್ದಾಗ ಕರ್ನಾಟಕದ ಕಡೆ ತಲೆ ಹಾಕದ ಪ್ರಚಾರಜೀವಿ ಮೋದಿ ಚುನಾವಣೆಗಾಗಿ ಮೂರು ದಿನಕ್ಕೊಮ್ಮೆ ಓಡಿಬರುತ್ತಿದ್ದಾರೆ. ನೆರೆ ಪರಿಹಾರ ಕೊಡದೆ ವಂಚಿಸಿದ್ದೇಕೆ ಎಂದು ಹೇಳುವ ಧೈರ್ಯ ತೋರುವರೇ?

ಹಗಲು-ರಾತ್ರಿ ದುಡಿ, ಸರ್ಕಾರಕ್ಕೆ ಕೊಡಿ, ಸಂಸಾರ-ಬದುಕು ಬಿಡಿ. ಇದು ಜನಸಾಮಾನ್ಯರ ದುಃಸ್ಥಿತಿ. ರಾಜ್ಯದ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಅವರದ್ದೇ ಕಾರ್ಯಕರ್ತರು ಬೆಲೆ ಏರಿಕೆಯ ಬಗ್ಗೆ ಛಿಮಾರಿ ಹಾಕುತ್ತಿದ್ದಾರೆ. ಮೋದಿ ಅವರ ಅಮೃತ ಕಾಲವು ಬಡ ಭಾರತೀಯರಿಗೆ ಅಪತ್ಕಾಲವಾಗಿದೆ. ಮಗನ ಮೂಲಕ ಲಂಚ ಪಡೆದ ಸಿಕ್ಕಿಬಿದ್ದರೂ ಒಂದೇ ದಿನದಲ್ಲಿ ಜಾಮೀನು ಅರ್ಜಿ ವಿಚಾರಣೆಯಾಗಿ, ಜಾಮೀನು ಮಂಜೂರಾಗಿ ಮೆರವಣಿಗೆ ಮಾಡಿಸಿಕೊಂಡ ಮಾಡಾಳ್ ವೀರೂಪಾಕ್ಷಪ್ಪರ ವತಿಯಿಂದ ಮೋದಿ ಅವರಿಗೆ ಸುಸ್ವಾಗತ. 40% ಕಮಿಷನ್ ಸರ್ಕಾರದಲ್ಲಿ ಎಲ್ಲೆಲ್ಲೂ ಕೋಟಿ ಕೋಟಿ ಹಣ ಸಿಗುವಂತೆ ಮಾಡಿದ್ದು ಮೋದಿಯವರ ಸಾಧನೆ.

ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ರೈತನ ಮನೆಯಲ್ಲೂ ಕೋಟಿ ಕೋಟಿ ಹಣ ಇರುವುದು ಸಾಮಾನ್ಯ ಸಂಗತಿಯಂತೆ. ಅದು ಕೇವಲ ಭ್ರಷ್ಟಾಚಾರದ ಫಸಲು ತೆಗೆಯುವ ಬಿಜೆಪಿಯ ರೈತರಲ್ಲಿ ಮಾತ್ರ. ರೈತರ ಆದಾಯ ಡಬಲ್ ಆಗದಿದ್ದರೂ ಬಿಜೆಪಿ ಭ್ರಷ್ಟರ ಆದಾಯ ಡಬಲ್ ಮಾಡಿದ ಮೋದಿಯವರು ನಿಜಕ್ಕೂ ಅಭಿನಂದನಾರ್ಹರು ಎಂದು ವ್ಯಂಗ್ಯವಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com