ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ ಎಂದ ಸುರ್ಜೆವಾಲಾ: ಹೇಳಿಕೆ ಕಾಂಗ್ರೆಸ್ನ ವರ್ತನೆ ತೋರಿಸುತ್ತದೆ ಎಂದ ಅರುಣ್ ಸಿಂಗ್
ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಈ ಸರ್ಕಾರ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಟೀಕಿಸಿದ್ದಾರೆ.
Published: 26th March 2023 02:42 PM | Last Updated: 27th March 2023 03:25 PM | A+A A-

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣ್ದೀಪ್ ಸಿಂಗ್ ಸುರ್ಜೆವಾಲಾ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಈ ಸರ್ಕಾರ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಟೀಕಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ಮೀಸಲಾತಿ ವಿರುದ್ಧ ಕಿಡಿಕಾರಿದರು, ಈ ವೇಳೆ ಮಾತನಾಡಿದ ರಣ್ದೀಪ್ ಸುರ್ಜೆವಾಲಾ, ಬಸವರಾಜ ಬೊಮ್ಮಾಯಿಯವರು ಸಮುದಾಯಕ್ಕೆ ಮೋಸ ಮಾಡ್ತಿದ್ದಾರೆ. ಮೀಸಲಾತಿಯನ್ನು 90 ದಿನಗಳಲ್ಲಿ 3 ಬಾರಿ ಬದಲಾವಣೆ ಮಾಡಿದ್ದಾರೆ. ಇದು ಇತಿಹಾಸದಲ್ಲಿ ಮೊದಲು. ರಾಜ್ಯವನ್ನು ಲೂಟಿ ಮಾಡ್ತಿದ್ದಾರೆ ಅದು 40% ಕಮಿಷನ್ ವಿಚಾರದಲ್ಲಿ ಗೊತ್ತಾಗಿದೆ. ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಇದು ಎಂದರು.
ರಣ್ದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಮನ್ಮ್ಯಾನ್, ಸಿಂಪಲ್ಮ್ಯಾನ್. ಯಾರೂ ಕೂಡಾ ಅವರ ಬದ್ಧತೆ ಬಗ್ಗೆ ಒಂದೂ ಪ್ರಶ್ನೆಯನ್ನೂ ಎತ್ತಲು ಅವಕಾಶವಿಲ್ಲದ ವ್ಯಕ್ತಿ, ಕಾಂಗ್ರೆಸ್ ನಾಯಕರ ಇಂತಹ ಅವಹೇಳನಕಾರಿ ಹೇಳಿಕೆ ಕಾಂಗ್ರೆಸ್ನ ವರ್ತನೆ ತೋರಿಸುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಕೂಡ ಇದೇ ರೀತಿ ಮಾತನಾಡುತ್ತಾರೆ. ಡಿಕೆ ಶಿವಕುಮಾರ್ ಕೂಡ ಅದೇ ರೀತಿಯಲ್ಲಿ ಮಾತಾಡುತ್ತಿದ್ದಾರೆ. ಎಸ್ಟಿ ಸಮುದಾಯದ ಹಿರಿಯ ನಾಯಕರಾಗಿರುವ ಸಚಿವ ಶ್ರೀರಾಮುಲುಗೆ ಸಿದ್ದರಾಮಯ್ಯ ಪೆದ್ದ ಎಂದು ಹೇಳಿದ್ದರು. ಈಗ ಬೊಮ್ಮಾಯಿಗೆ ಅಪಮಾನ ಮಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಗೆ ನೀಡುವ ಅವಹೇಳನಕಾರಿ ಹೇಳಿಕೆ ಕರ್ನಾಟಕದ ಜನರಿಗೆ ಮಾಡಿದ ಅಪಮಾನವಾಗಿದೆ. ಹೀಗಾಗಿ ರಾಜ್ಯದ ಜನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಇದನ್ನೂ ಓದಿ: ಮುಸ್ಲಿಮರಿಗೆ ಶೇ 4 ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಅಮಿತ್ ಶಾ ಸಮರ್ಥನೆ
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ?: ಮೀಸಲಾತಿ ಹೆಚ್ಚಳ ಪೊಲಿಟಿಕಲ್ ಗಿಮಿಕ್ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅರುಣ್ ಸಿಂಗ್, ಕಾಂಗ್ರೆಸ್ಗೆ ಬೇರೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಟೀಕಿಸುತ್ತಾರೆ. ಆದರೆ ಬಿಜೆಪಿ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದರು. ಅಲ್ಲದೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಏಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ? ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ, ಅದಕ್ಕೆ ಮೌನ ವಹಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಏನೇನು ಮಾಡಿದ್ದಾರೆ ಅಂತಾ ಜನರ ಮುಂದೆ ಬಂದು ಹೇಳಲು ನಾನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಅನಂತರ ನಾವು ನಮ್ಮ ಸಾಧನೆಗಳನ್ನು ಮುಂದಿಡುತ್ತೇವೆ ಎಂದರು.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಇದನ್ನು ನಮ್ಮ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸುತ್ತದೆ. ಮೊದಲು ರಾಜ್ಯ ಚುನಾವಣಾ ಸಮಿತಿ ಕುಳಿತು ಚರ್ಚಿಸಿ ನಂತರ ಕೇಂದ್ರಕ್ಕೆ ಕಳಿಸುತ್ತಾರೆ. ನಂತರ ಸರಿಯಾದ ಸಮಯದಲ್ಲಿ ಕೇಂದ್ರ ಚುನಾವಣಾ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ಇಂದು ರಾಜ್ಯ ಕೋರ್ ಕಮಿಟಿ ಸಭೆ ಇದೆ ಎಂದು ತಿಳಿಸಿದರು.