ಬೀದರ್/ರಾಯಚೂರು: ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಶ್ಲಾಘಿಸಿದ್ದು, ಧಾರ್ಮಿಕ ಮೀಸಲಾತಿಯು ಸಾಂವಿಧಾನಿಕವಾಗಿ ಅಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಬೀದರ್ ಜಿಲ್ಲೆಯ ಗೋರಟಾ ಗ್ರಾಮ ಮತ್ತು ರಾಯಚೂರು ಜಿಲ್ಲೆಯ ಗಬ್ಬೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಹೊಸ ಒಳಮೀಸಲಾತಿ ಜಾರಿಗೆ ತರುವ ಮೂಲಕ ಪರಿಶಿಷ್ಟ ಜಾತಿಗೆ ಆಗಿರುವ ಅನ್ಯಾಯವನ್ನು ದೂರ ಮಾಡಲು ಪ್ರಯತ್ನಿಸಿದೆ ಎಂದು ಗಮನ ಸೆಳೆದರು.
ಸಂಪೂರ್ಣ 2B ಪ್ರವರ್ಗವು ಮುಸ್ಲಿಮರಿಗೆ ಮಾತ್ರ ಇತ್ತು. ಸಂವಿಧಾನಾತ್ಮಕವಾಗಿ ಸಮರ್ಥನೀಯವಲ್ಲ ಎಂದು ಬಿಜೆಪಿ ಸರ್ಕಾರವು ಅದನ್ನು ರದ್ದುಗೊಳಿಸಿತು ಮತ್ತು ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗರಿಗೆ 2C ಮತ್ತು ವೀರಶೈವ ಲಿಂಗಾಯಿತರಿಗೆ 2Dಯಲ್ಲಿ ಸಮಾನವಾಗಿ ಶೇ 4ರಷ್ಟು ಮೀಸಲಾತಿಯನ್ನು ಹಂಚಿತು ಎಂದರು.
ಇದರೊಂದಿಗೆ, 2B ಅನಗತ್ಯವಾಯಿತು. ಆದರೆ, ಒಕ್ಕಲಿಗರ ಮೀಸಲಾತಿ ಶೇ 4 ರಿಂದ 6ಕ್ಕೆ ಮತ್ತು ಲಿಂಗಾಯಿತರ ಮೀಸಲಾತಿ ಐದು ಪ್ರತಿಶತದಿಂದ ಏಳು ಪ್ರತಿಶತಕ್ಕೆ ಏರಿತು. ಬಿಜೆಪಿಗೆ ಎಂದಿಗೂ ತುಷ್ಟೀಕರಣದಲ್ಲಿ ನಂಬಿಕೆ ಇಲ್ಲ. ಹಾಗಾಗಿ, ಮೀಸಲಾತಿಯನ್ನು ಬದಲಾಯಿಸಲು ನಿರ್ಧರಿಸಿದೆ ಎಂದು ಶಾ ಈ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು.
ಬಿಜೆಪಿ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿತು ಮತ್ತು ಒಕ್ಕಲಿಗರಿಗೆ ಎರಡು ಪ್ರತಿಶತ ಮತ್ತು ಲಿಂಗಾಯತರಿಗೆ ಎರಡು ಪ್ರತಿಶತವನ್ನು ನೀಡಿದೆ. ಅಲ್ಪಸಂಖ್ಯಾತರ ಮೀಸಲಾತಿಯು ಸಾಂವಿಧಾನಿಕವಾಗಿ ಮಾನ್ಯವಾಗಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಈ ಕಾಂಗ್ರೆಸ್ ಸರ್ಕಾರ ತನ್ನ ತುಷ್ಟೀಕರಣ ರಾಜಕಾರಣಕ್ಕಾಗಿ ಇದನ್ನು ಮಾಡಿದೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದೆ ಎಂದು ಅವರು ಹೇಳಿದರು.
Advertisement