ಮೀಸಲಾತಿ ನೀತಿಯು ಬಿಜೆಪಿಯ ಚುನಾವಣಾ ಅಜೆಂಡಾ, ಉದ್ದೇಶ ಜನರನ್ನು ವಂಚಿಸುವುದು: ಕಾಂಗ್ರೆಸ್ ನಾಯಕರ ಆರೋಪ

ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ನಿರ್ಮಲಾನಂದನಾಥಶ್ರೀ, ಜಯಮೃತ್ಯುಂಜಯ ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ. ಸ್ವಾಮೀಜಿಗಳಿಗೆಲ್ಲ ಫೋನ್​ ಮಾಡಿ ಒಪ್ಪಿಕೊಳ್ಳಿ ಅಂದರೆ ಸರೀನಾ ಲಿಂಗಾಯತರು ಶೇಕಡಾ 16, ಒಕ್ಕಲಿಗರು ಶೇಕಡಾ 12 ಮೀಸಲಾತಿ ಕೇಳಿದ್ದರು.
ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿ
ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು: ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ನಿರ್ಮಲಾನಂದನಾಥಶ್ರೀ, ಜಯಮೃತ್ಯುಂಜಯ ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ. ಸ್ವಾಮೀಜಿಗಳಿಗೆಲ್ಲ ಫೋನ್​ ಮಾಡಿ ಒಪ್ಪಿಕೊಳ್ಳಿ ಅಂದರೆ ಸರೀನಾ ಲಿಂಗಾಯತರು ಶೇಕಡಾ 16, ಒಕ್ಕಲಿಗರು ಶೇಕಡಾ 12 ಮೀಸಲಾತಿ ಕೇಳಿದ್ದರು. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಟ್ಟಿದ್ದು ಅನ್ಯಾಯ ಮಾಡಿದಂತಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ಸರ್ಕಾರ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮೀಸಲಾತಿ ವಿಚಾರವಾಗಿ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಎಲ್ಲಾ ಜನತೆಗೂ ಮೋಸ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ, ಜನರಿಗೆ ಇದರಿಂದ ನೋವಾಗಿದೆ. ಪ್ರಜಾಪ್ರಭುತ್ವಕ್ಕೆ ಇದು ಕರಾಳ ದಿನಗಳಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಮೀಸಲಾತಿಯನ್ನು 90 ದಿನಗಳಲ್ಲಿ 3 ಬಾರಿ ಬದಲಾಯಿಸಲಾಗಿದೆ. ಈ ರೀತಿ ಬದಲಾವಣೆ ಮಾಡಲು ಇದು ಆಸ್ತಿಯಾ? ಸಂವಿಧಾನದ ಹಕ್ಕಿನ ಪ್ರಕಾರ ಕೊಡುವಂತೆ ನಾವೆಲ್ಲ ಕೇಳಿದ್ದೇವೆ. ಒಕ್ಕಲಿಗ ಸಮುದಾಯ ಹಾಗೂ ಲಿಂಗಾಯತರೇನು ಭಿಕ್ಷುಕರಾ, ಯಾಕೆ ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡಬೇಕು. ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತದೆ. ನಾವೂ ಅಧಿಕಾರಕ್ಕೆ ಬಂದಮೇಲೆ ಇದನ್ನು ರದ್ದು ಮಾಡಿ ಎಲ್ಲಾ ಸಮುದಾಯಗಳಿಗೆ ಸಮಾನವಾದ ನ್ಯಾಯ ಕೊಡುತ್ತೇವೆ ಎಂದು ಹೇಳಿದರು.

ಮುಸ್ಲಿಮರಿಗೆ 1994ರಿಂದ ನೀಡಿದ್ದ ಮೀಸಲಾತಿಯನ್ನು ಯಾವ ಕಾರಣಕ್ಕೆ ಹಿಂಪಡೆಯಲಾಯಿತು, ಯಾವುದೇ ವರದಿ ಬಂದಿಲ್ಲ. ಕೋರ್ಟ್ ಆದೇಶ ಕೂಡ ಬಂದಿಲ್ಲ. ಆದರೂ ದ್ವೇಷ ರಾಜಕಾರಣ ಮಾಡಿ ಮೀಸಲಾತಿ ತೆಗೆಯಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮುಸ್ಲಿಂ ಜನಸಂಖ್ಯೆ ಆಧಾರವಾಗಿ ಮೀಸಲಾತಿ ಸಿಕ್ಕಿರಲಿಲ್ಲ. ಕೇವಲ ಶೇಕಡಾ 4ರಷ್ಟು ಮಾತ್ರ ಇತ್ತು. ಲಿಂಗಾಯತರು, ಒಕ್ಕಲಿಗರು ಮೀಸಲಾತಿ ಹೆಚ್ಚಳ ಕೇಳಿದ್ದರು. ಮೀಸಲಾತಿ ಶೇಕಡಾ 50 ದಾಟಬಾರದು ಎಂದಿದೆ. ಸಂವಿಧಾನ ಪೀಠ ಕೊಟ್ಟ ತೀರ್ಪು ಬದಲಾವಣೆ ಆಗಬಾರದು. ಆಗಬೇಕು ಅಂತ ಇದ್ದರೆ ಸಂಸತ್ತಿನಲ್ಲಿ ಬದಲಾವಣೆಯಾಗಬೇಕು. 9ನೇ ಶೆಡ್ಯೂಲ್ ಗೆ ಸೇರಿಸಿದಾಗ ಮಾತ್ರ ಮೀಸಲಾತಿ ಹೆಚ್ಚಳಕ್ಕೆ ಬೆಲೆ ಸಿಗುತ್ತದೆ. ಅದನ್ನು ಮಾಡದೇ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಈಗ ಅಲ್ಪಸಂಖ್ಯಾತರನ್ನು ತೆಗೆದು ಹಾಕಿ ರಾಜಕೀಯ ದ್ರೋಹ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮುಸ್ಲಿಮರನ್ನು ಸೇರಿಸಿ ಎಂದಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com