ವಿಧಾನಸಭೆ ಚುನಾವಣೆ: ಒಂದೇ ಹಂತದ ಮತದಾನ ಬಿಜೆಪಿ, ಜೆಡಿಎಸ್‌ಗೆ ದೊಡ್ಡ ಸವಾಲು?
ಕೇಂದ್ರ ಚುನಾವಣಾ ಆಯೋಗ ಬುಧವಾರ ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಿಸಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಸುವುದಾಗಿ ಮತ್ತು ಮೇ 13 ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಿದೆ.
Published: 29th March 2023 06:18 PM | Last Updated: 29th March 2023 07:15 PM | A+A A-

ಬಿಜೆಪಿ ನಾಯಕರು
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಬುಧವಾರ ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಿಸಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಸುವುದಾಗಿ ಮತ್ತು ಮೇ 13 ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಿದೆ.
ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಿಯೋಗಗಳು ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ರಾಜೀವ್ ಕುಮಾರ್ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಮಾಡಿದ್ದವು. ಆದರೆ ಪ್ರಸ್ತುತ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಹೊಂದಿರುವ ಬಿಜೆಪಿಗೆ ಈ ನಿರ್ಧಾರ ಹೆಚ್ಚು ಅನಾನುಕೂಲವಾಗಬಹುದು.
''1985ರಲ್ಲಿ ಮೊದಲ ಹಂತದ ಮತದಾನ ಮುಗಿದ ಬಳಿಕ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಆಡಳಿತಾರೂಢ ಜನತಾ ಪಕ್ಷ ಹಿನ್ನಡೆ ಅನುಭವಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ಸಿಕ್ಕಿತ್ತು. ನಂತರ ಹೆಚ್ಚುವರಿ ಪ್ರಣಾಳಿಕೆಯಲ್ಲಿ ಪಕ್ಷ 2 ರೂ. ಕೆಜಿ ಅಕ್ಕಿ ಮತ್ತು 25 ರೂಪಾಯಿಗೆ ಸೀರೆ, ಧೋತಿ ಸೆಟ್ ನೀಡುವುದಾಗಿ ಘೋಷಿಸಿತ್ತು. ಅಂತಿಮವಾಗಿ ಪಕ್ಷ 139 ಸ್ಥಾನಗಳನ್ನು ಗೆದ್ದುಕೊಂಡಿತು" ಎಂದು ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ನೆನಪಿಸಿಕೊಂಡಿದ್ದಾರೆ.
ಇದನ್ನು ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿಗೆ ಬೆಂಗಳೂರು ಬಿಡಿಸಲಾರದ ಒಗಟು, ಮೂಲ-ವಲಸಿಗರ ನಡುವೆ ಕಾದಾಟ
ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿರುವ ಉಗ್ರಪ್ಪ, ಇದು ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಲು ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಈಗ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ನಿರ್ಧಾರವು ಕೇಸರಿ ಪಕ್ಷವನ್ನು ದುರ್ಬಲಗೊಳಿಸಬಹುದು ಎನ್ನಲಾಗುತ್ತಿದೆ.
"ಒಂದು ವೇಳೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದರೆ ಪ್ರಧಾನಿ ಮೋದಿ ಅವರು ವ್ಯಾಪಕ ಪ್ರಚಾರ ನಡೆಸುತ್ತಿದ್ದರು ಮತ್ತು ಅದು ಮತದಾರರ ಮೇಲೆ ಪರಿಣಾಮ ಬೀರುತ್ತಿತ್ತು" ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಇದನ್ನು ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಒಂದೇ ಹಂತದಲ್ಲಿ ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ
ಇನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಬ್ಬರು ಸ್ಟಾರ್ ಪ್ರಚಾರಕರನ್ನು ಹೊಂದಿರುವ ಪ್ರಾದೇಶಿಕ ಜೆಡಿ(ಎಸ್) ಪಕ್ಷಕ್ಕೆ ಒಂದೇ ಹಂತದ ಮತದಾನವು ಅನಾನುಕೂಲವಾಗಿದೆ. ಇದನ್ನು ಸರಿದೂಗಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕುಮಾರಸ್ವಾಮಿ ಅವರ ಆಹ್ವಾನದ ಮೇರೆಗೆ ಆಯ್ದ ಸ್ಥಾನಗಳಲ್ಲಿ ಜೆಡಿಎಸ್ ಪರ ಪ್ರಚಾರ ಮಾಡುವುದಾಗಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಹ ಒಂದೇ ಹಂತದ ಮತದಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವ ಚುನಾವಣಾ ಆಯೋಗದ(ಇಸಿಐ) ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಇದು ಅಕ್ರಮ ಹಣ ಮತ್ತು ಅಧಿಕಾರ ಬಲದ ಬಳಕೆಗೆ ಕಡಿವಾಣ ಹಾಕಲು ಸಹಾಯ ಮಾಡುತ್ತದೆ. ನಿಷ್ಪಕ್ಷಪಾತ ಚುನಾವಣೆ ನಡೆಸುವಂತೆ ನಾನು ಆಯೋಗಕ್ಕೆ ಮನವಿ ಮಾಡುತ್ತೇನೆ’’ ಎಂದು ಹರಿಪ್ರಸಾದ್ ಅವರು ಹೇಳಿದ್ದಾರೆ.