ಕರ್ನಾಟಕ ಚುನಾವಣೆ 2023: ಶೂನ್ಯ ಭ್ರಷ್ಟಾಚಾರ, ಉಚಿತ ವಿದ್ಯುತ್ ಸೇರಿ 12 ಭರವಸೆಗಳ ನೀಡಿದ ಎಎಪಿ

ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಲು ಪ್ರಯತ್ನ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ), ಅಧಿಕಾರಕ್ಕೆ ಬಂದಿದ್ದೇ ಆದರೆ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವನ್ನು ಖಾತರಿಪಡಿಸುವುದಾಗಿ ಮತ್ತು ರಾಜ್ಯದಲ್ಲಿ ಶೂನ್ಯ ಭ್ರಷ್ಟಾಚಾರವನ್ನು ಖಚಿತಪಡಿಸುವುದಾಗಿ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಲು ಪ್ರಯತ್ನ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ), ಅಧಿಕಾರಕ್ಕೆ ಬಂದಿದ್ದೇ ಆದರೆ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವನ್ನು ಖಾತರಿಪಡಿಸುವುದಾಗಿ ಮತ್ತು ರಾಜ್ಯದಲ್ಲಿ ಶೂನ್ಯ ಭ್ರಷ್ಟಾಚಾರವನ್ನು ಖಚಿತಪಡಿಸುವುದಾಗಿ ಘೋಷಣೆ ಮಾಡಿದೆ.

ಎಎಪಿ ನಾಯಕ ಮತ್ತು ಸಂಸದ ಸಂಜಯ್ ಸಿಂಗ್ ಅವರು ಬುಧವಾರ ಚುನಾವಣೆಗೆ ಪಕ್ಷದ ಗ್ಯಾರಂಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಆಮ್‌ ಆದ್ಮಿ ಪಾರ್ಟಿಯು ಸುಳ್ಳು ಆಶ್ವಾಸನೆಗಳನ್ನು ನೀಡುವ ಪಕ್ಷವಲ್ಲ. ನಾವು ಆಶ್ವಾಸನೆಗಳ ಬದಲು ಗ್ಯಾರಂಟಿ ಕಾರ್ಡ್ ನೀಡುತ್ತೇವೆ. ಇದೊಂದು ಕರಾರುಪತ್ರವಾಗಿದ್ದು, ಇವೆಲ್ಲವನ್ನೂ ಶೇ. 100ರಷ್ಟು ಈಡೇರಿಸುತ್ತೇವೆ. ಪ್ರಣಾಳಿಕೆಯಲ್ಲಿದ್ದ ಎಲ್ಲ ಗ್ಯಾರಂಟಿಗಳನ್ನು ದೆಹಲಿಯಲ್ಲಿ ಈಡೇರಿಸಿದ್ದೇವೆ. ಪಂಜಾಬ್‌ನಲ್ಲಿ ಕೂಡ ಒಂದೊಂದಾಗಿ ಜಾರಿಗೆ ಬರುತ್ತಿದೆ. ಕರ್ನಾಟಕದಲ್ಲಿ ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್‌ ಉಚಿತ ವಿದ್ಯುತ್‌, ನಿರುದ್ಯೋಗಿ ಯುವಜನತೆಗೆ ತಿಂಗಳಿಗೆ 3000 ರೂಪಾಯಿ ನಿರುದ್ಯೋಗ ಭತ್ಯೆ, ಗುಣಮಟ್ಟದ ಆರೋಗ್ಯ ಸೇವೆಗಾಗಿ ಕ್ಲಿನಿಕ್‌ಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹಳೆ ಪಿಂಚಣಿ ಯೋಜನೆ ಜಾರಿ ಮುಂತಾದ ಒಟ್ಟು ಹತ್ತು ವಲಯಗಳಿಗೆ ಸಂಬಂಧಿಸಿದ ಪ್ರಮುಖ ಗ್ಯಾರೆಂಟಿಗಳನ್ನು ಇಂದು ಘೋಷಿಸಲಾಗುತ್ತಿದೆ. ಜೊತೆಗೆ, ಬೆಂಗಳೂರು ಹಾಗೂ ರಾಜ್ಯದ ಪ್ರಾದೇಶಿಕ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಗ್ಯಾರೆಂಟಿಗಳನ್ನು ಘೋಷಿಸುತ್ತಿದ್ದೇವೆ” ಎಂದು ಹೇಳಿದರು.

“ಆಮ್‌ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಮೂರನೇ ಬಾರಿ ಹಾಗೂ ಪಂಜಾಬ್‌ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದೆ. ಗೋವಾ ಚುನಾವಣೆಯಲ್ಲಿ ಶೇ. 6ಕ್ಕಿಂತಲೂ ಹೆಚ್ಚು ಮತ ಪಡೆದಿದ್ದೇವೆ. ಗುಜರಾತ್‌ನಲ್ಲಿ ಶೇ. 14ರಷ್ಟು ಮತ ಪಡೆದಿದ್ದು, ಐವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಆಮ್‌ ಆದ್ಮಿ ಪಾರ್ಟಿಯು ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಕಾನೂನಿನ ಪ್ರಕಾರ ಅರ್ಹವಾಗಿದ್ದರೂ ಚುನಾವಣಾ ಆಯೋಗವು ಇನ್ನೂ ಇದನ್ನು ಅಧಿಕೃತವಾಗಿ ಘೋಷಿಸಿಲ್ಲ. ಸ್ಥಾನಮಾನ ಕೋರಿ ನಾವು ಸಲ್ಲಿಸಿದ್ದ ಅರ್ಜಿಯನ್ನು ಹಲವು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕಳೆದ ಒಂದು ತಿಂಗಳಿನಿಂದ ಪ್ರಣಾಳಿಕೆ ರಚಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ರಾಜ್ಯದ ಮೂಲೆಮೂಲೆಗಳಿಂದ ಈಗಾಗಲೇ ಸಾವಿರಾರು ಸಲಹೆಗಳು ಬಂದಿವೆ. ಬೇರೆಬೇರೆ ವರ್ಗಗಳ ಜನಸಮಾನ್ಯರು, ಯುವಜನತೆ, ಮಹಿಳೆಯರು, ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಜನರಿಂದ ಜನರಿಗಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಯಾವ್ಯಾವುದನ್ನು ನಮ್ಮಿಂದ ಮಾಡಲು ಸಾಧ್ಯವೋ ಅವುಗಳನ್ನು ಸೇರಿಸುತ್ತಿದ್ದೇವೆ. ಆಮ್‌ ಆದ್ಮಿ ಪಾರ್ಟಿಯ ಗ್ಯಾರೆಂಟಿಗಳಿಂದಾಗಿ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ 8ರಿಂದ 10 ಸಾವಿರ ರೂಪಾಯಿ ಉಳಿತಾಯವಾಗಲಿದೆ. ನಾವು ಇವುಗಳನ್ನು ಗ್ಯಾರೆಂಟಿ ಕಾರ್ಡ್‌ ರೂಪದಲ್ಲಿ ನೀಡುತ್ತಿದ್ದು, ಅಧಿಕಾರಕ್ಕೆ ಬಂದು ನಾವು ಇವುಗಳನ್ನು ಜಾರಿಗೆ ತರದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಜನರಿಗೆ ಅವಕಾಶವಿರುತ್ತದೆ. ರಾಜ್ಯದ ಪ್ರತಿಯೊಂದು ವರ್ಗದ ಜನರ ಸಮಸ್ಯೆಗಳಿಗೆ ಪ್ರಣಾಳಿಕೆಯಲ್ಲಿ ಪರಿಹಾರ ಇರಲಿದೆ” ಎಂದು ಹೇಳಿದರು.

ಗ್ಯಾರಂಟಿ ಕಾರ್ಡ್​ನಲ್ಲಿ ಏನೇನಿದೆ?

  • ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ
  • ಮಹಿಳೆಯರಿಗೆ ಉಚಿತ ಸಿಟಿ ಬಸ್​ ಸಾರಿಗೆ
  • 18 ವರ್ಷ ಮೇಲ್ಪಟ್ಟ ಪ್ರತಿ ಬಿಪಿಎಲ್​ ಕಾರ್ಡ್​ ಹೊಂದಿರುವ ಮಹಿಳೆಗೆ ಮಾಸಿಕ 1000 ರೂ ಸಬಲೀಕರಣ ಭತ್ಯೆ
  • 2 ಲಕ್ಷ ಯುವಕರಿಗೆ ಗ್ಯಾರಂಟಿ ಉದ್ಯೋಗ ಸಿಗುವವರೆಗೆ ತಿಂಗಳಿಗೆ 3,000 ರೂ ನಿರುದ್ಯೋಗ ಭತ್ಯೆ
  • 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ತಿಂಗಳಿಗೆ ಸ್ಟೈಫಂಡ್​​ನೊಂದಿಗೆ 6 ತಿಂಗಳ ಉದ್ಯೋಗ ತರಬೇತಿ
  • ಸ್ಥಳೀಯ ಚುನಾವಣೆಯ ಮತದಾನ ವಯಸ್ಸು 16 ವರ್ಷಕ್ಕೆ ಇಳಿಕೆ
  • ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ
  • ಸಣ್ಣ ರೈತರ ಸಾಲಕ್ಕೆ ಒಂದು ಬಾರಿ ಸಾಲ ಮನ್ನಾ
  • ಕೃಷಿಗೆ 12 ಗಂಟೆ ಉಚಿತ ವಿದ್ಯುತ್​

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com