ಸುಳ್ಯ ವಿಧಾನಸಭಾ ಕ್ಷೇತ್ರ: ಅಂಗಾರ ವಿರುದ್ಧ ಬಿಜೆಪಿಯಲ್ಲಿ ಅಪಸ್ವರ; ಅಭ್ಯರ್ಥಿ ಬದಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದು ಕಾಂಗ್ರೆಸ್‌ಗೆ ತಿರುಗುಬಾಣವಾಗಿದೆ. ಅಭ್ಯರ್ಥಿ ಬದಲಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದು, ಪ್ರತಿಭಟನೆಗಿಳಿದಿದ್ದಾರೆ.
ಎಸ್. ಅಂಗಾರ ಮತ್ತು ಜಿ.ಕೃಷ್ಣಪ್ಪ
ಎಸ್. ಅಂಗಾರ ಮತ್ತು ಜಿ.ಕೃಷ್ಣಪ್ಪ

ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದು ಕಾಂಗ್ರೆಸ್‌ಗೆ ತಿರುಗುಬಾಣವಾಗಿದೆ. ಅಭ್ಯರ್ಥಿ ಬದಲಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದು, ಪ್ರತಿಭಟನೆಗಿಳಿದಿದ್ದಾರೆ.

ಸುಳ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ ಜಿ ಕೃಷ್ಣಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಸುಳ್ಯದಲ್ಲಿ ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.  ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ತೆಗೆದುಕೊಳ್ಳದೆ  ಬೆಂಗಳೂರು ಮೂಲದ ಗ್ರಾನೈಟ್ ಉದ್ಯಮಿ ಕೃಷ್ಣಪ್ಪ ಅವರನ್ನು ಪಕ್ಷದ ಮುಖಂಡರು ಅಭ್ಯರ್ಥಿಯನ್ನಾಗಿ ಘೋಷಿಸಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಬುಧವಾರ ಸುಳ್ಯದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ,  ಜಿ. ಕೃಷ್ಣಪ್ಪ  ಅವರ ಬದಲು ಮಡಿಕೇರಿ ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ನಂದಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.

ಕೃಷ್ಣಪ್ಪ ಅವರು ಕ್ಷೇತ್ರಕ್ಕೆ ಹೊರಗಿನವರಾಗಿದ್ದು, ಅವರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಪಕ್ಷದ ನಾಯಕತ್ವ ಮರುಪರಿಶೀಲಿಸಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಅವರ ಪ್ರಕಾರ, ಕೃಷ್ಣಪ್ಪ ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ಕೆಪಿಸಿಸಿ ಸಂಯೋಜಕರಾಗಿ ಕೆಲ ಸಮಯದ ಹಿಂದೆ ನೇಮಕಗೊಂಡಿದ್ದರೂ, ಕ್ಷೇತ್ರದಲ್ಲಿ ಅವರು ಅಷ್ಟಾಗಿ ಕಂಡುಬಂದಿಲ್ಲ.

ಮತ್ತೊಂದೆಡೆ, ಕಡಬ ಬ್ಲಾಕ್ ಕಾಂಗ್ರೆಸ್‌ನ ಕೆಪಿಸಿಸಿ ಸಂಯೋಜಕರಾಗಿ ನೇಮಕಗೊಂಡ ನಂದಕುಮಾರ್ ಅವರು ಕಳೆದ ಐದು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಸಹಾಯ ಮಾಡುವಲ್ಲಿ ಮತ್ತು ಪಕ್ಷವನ್ನು ಸಂಘಟಿಸುವಲ್ಲಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ, ಇದರ ಜೊತೆಗೆ  ಕೂಡ ಸುಳ್ಯದಲ್ಲಿ ನೆಲೆಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ. ನಂದಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಈ ಭಾಗದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ಹೇಳಿದ್ದಾರೆ.

ಹಾಲಿ ಶಾಸಕ ಮತ್ತು ಮೀನುಗಾರಿಕಾ ಸಚಿವ ಎಸ್ ಅಂಗಾರ ವಿರುದ್ಧ ಪಕ್ಷದಲ್ಲಿ ಸಾಕಷ್ಟು ಅಸಮಾಧಾನವಿದೆ.  ಜನರು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದು, ತಪ್ಪಾದ ಅಭ್ಯರ್ಥಿ ಆಯ್ಕೆಯಿಂದ ನಾವು ಸೋಲಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸುಳ್ಯದಲ್ಲಿ ಅಂಗಾರ ವಿಚಾರವಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ಮತ್ತೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮಾಹಿತಿ ನೀಡಿದ್ದಾರೆ. ‘ಸ್ವಾಭಿಮಾನಿ ಬಿಜೆಪಿ’ ಎಂದು ಕರೆಯುವ ಒಂದು ಗುಂಪು ಅಂಗಾರ ಅವರು ಕಳೆದ 30 ವರ್ಷಗಳಲ್ಲಿ ಶಾಸಕರಾಗಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿಲ್ಲ ಹಾಗಿದ್ದರೂ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಡಲು  ಹೊರಟಿದೆ ಎಂದು  ವಿರೋಧ ವ್ಯಕ್ತಪಡಿಸಿದ್ದಾರೆ.

ಅರಂತೋಡು, ಅಡ್ತಲೆ, ಅರಮನೆಗೆಯ, ಆಲೆಟ್ಟಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂಗಾರ ವಿರುದ್ಧ ಭಿತ್ತಿಪತ್ರಗಳು ರಾರಾಜಿಸುತ್ತಿವೆ. ಕಾಂಗ್ರೆಸ್‌ನ ಮೊದಲ ಪಟ್ಟಿ ಪ್ರಕಟವಾದ ಬಳಿಕ ಸುಳ್ಯದಿಂದ ಪಕ್ಷದ ಮುಖಂಡರ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭ್ಯರ್ಥಿ ಬದಲಾವಣೆ ಕೋರಿತ್ತು. ಆದರೆ ಡಿಸಿಸಿ ಸಲ್ಲಿಸಿದ ವರದಿ ಆಧರಿಸಿ ಕೃಷ್ಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಿವಕುಮಾರ್ ಅವರಿಗೆ  ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯ ಟಿಕೆಟ್‌ಗಾಗಿ ಕಳೆದ ಚುನಾವಣೆಯಲ್ಲಿ ಸೋತಿದ್ದ ಡಾ.ರಘು ಅವರ ಪುತ್ರರಾದ ಕೃಷ್ಣಪ್ಪ, ನಂದಕುಮಾರ್, ಅಭಿಲಾಷ್, ಪ್ರಹ್ಲಾದ್ ಸೇರಿದಂತೆ 6 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ರಘು ಮತ್ತು ಅವರ ಪುತ್ರರು ನಂದಕುಮಾರ್ ಪರವಾಗಿದ್ದು, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com