ಕರ್ನಾಟಕ ಚುನಾವಣೆ: ಸದ್ಯಕ್ಕೆ ಯಾರಿಗೂ ಬಹುಮತ ಇಲ್ಲ; ಅತಂತ್ರದ ಲೆಕ್ಕಾಚಾರವೇ ಎಲ್ಲ!

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮೇ 10ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಮುಂದಿನ ದಿನಗಳಲ್ಲಿ ತೀವ್ರವಾಗಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಬಾರಿ ಕೂಡ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆಯಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮೇ 10ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಮುಂದಿನ ದಿನಗಳಲ್ಲಿ ತೀವ್ರವಾಗಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಬಾರಿ ಕೂಡ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆಯಿಲ್ಲ. ಮತ್ತೆ ಕಳೆದ ಬಾರಿಯಂತೆ ಅತಂತ್ರ ವಿಧಾನಸಭೆ ಪುನರಾವರ್ತನೆಯಾದರೂ ಅಚ್ಚರಿಯಿಲ್ಲ. 

ಹಾಗೆಂದು ಇನ್ನೊಂದು ತಿಂಗಳಲ್ಲಿ ಪರಿಸ್ಥಿತಿ ಬದಲಾಗಲೂಬಹುದು. ರಾಜಕೀಯದಲ್ಲಿ ಕೊನೆಯ ಕ್ಷಣದವರೆಗೂ ಯಾವುದೇ ಅಚ್ಚರಿ, ಬದಲಾವಣೆಗಳು ನಡೆಯುವ ಸಾಧ್ಯತೆಗಳಿವೆ. ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೆ ಇದರ ಬಗ್ಗೆ ಅರಿವು ಇಲ್ಲದಿರುವಂತೆ ಕಾಣುತ್ತಿಲ್ಲ. ಬಿಜೆಪಿಯ ಹೈಕಮಾಂಡ್ ಸ್ವತಃ ಪ್ರಧಾನಿ ಮೋದಿಯವರೇ ಇತ್ತೀಚೆಗೆ ದಾವಣಗೆರೆ ಸಮಾವೇಶದಲ್ಲಿ ಈ ಬಾರಿ ಅತಂತ್ರ ಸ್ಥಿತಿ ಬರದಂತೆ ಎಚ್ಚರಿಕೆ ನೀಡಿದ್ದರು. ಪ್ರಧಾನಿಯವರು ಈ ಮಾತುಗಳನ್ನು ಆಡಿರುವುದಕ್ಕೆ ಕಾರಣ ಇಲ್ಲದಿಲ್ಲ.

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಂಶಗಳು ಸಾಕಷ್ಟಿವೆ. ಅದರ ಲಾಭ ಪಡೆಯಲು ಸರ್ವ ಪ್ರಯತ್ನಗಳನ್ನು ಮಾಡುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ಅದರಲ್ಲಿ ಸಫಲವಾಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಬಿಜೆಪಿಯ ಸುಸಜ್ಜಿತ ಚುನಾವಣಾ ತಂತ್ರವು ಆ ಅಂತರವನ್ನು ನಿವಾರಿಸಲು ಮತ್ತು ಸ್ವಂತವಾಗಿ ಅಧಿಕಾರಕ್ಕೆ ಮರಳಲು ಸಾಕಷ್ಟು ಶ್ರಮಿಸುತ್ತಿದೆ. ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಜನತಾದಳ ಸಾಕಷ್ಟು ಹರಸಾಹಸ ಮಾಡುತ್ತಿದೆ. ಅದರ ಕಾರ್ಯಕ್ಷಮತೆಯು ಕಾಂಗ್ರೆಸ್‌ನ ಪ್ರದರ್ಶನ ಮತ್ತು ಮೇ 13 ರಂದು ಪ್ರಕಟವಾಗಲಿರುವ 2023 ರ ಚುನಾವಣೆಯ ಒಟ್ಟಾರೆ ಫಲಿತಾಂಶಗಳ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ.

ಒಂದು ವರ್ಷದ ಹಿಂದಿನ ಪರಿಸ್ಥಿತಿ ನೋಡಿದರೆ ಕಾಂಗ್ರೆಸ್ ಬಗ್ಗೆ ಜನರಲ್ಲಿ ಮತ್ತೆ ಆಶಾಭಾವನೆ ಮೂಡಿ ಅಧಿಕಾರಕ್ಕೆ ಮರಳಬಹುದು ಎಂದು ಹೇಳಲಾಗುತ್ತಿತ್ತು. ಬಿಜೆಪಿಗೆ ಆಗ ವಿಶ್ವಾಸವೇ ಇರಲಿಲ್ಲ. ಲಿಂಗಾಯತ ಸಮುದಾಯದ ಪ್ರಬಲ ಮುಖಂಡ ಯಡಿಯೂರಪ್ಪನವರ ಸಾರಥ್ಯವಿಲ್ಲದೆ ಬಿಜೆಪಿ ಹೇಗೆ ಚುನಾವಣೆಯನ್ನು ಎದುರಿಸುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು. ಪರಿಸ್ಥಿತಿಯನ್ನು ಅರಿತ ಬಿಜೆಪಿ ತಕ್ಷಣವೇ ತನ್ನ ತಂತ್ರವನ್ನು ಬದಲಿಸಿ ಪಕ್ಷದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿತು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಯಡಿಯೂರಪ್ಪನವರು ಚುನಾವಣೆ ಪ್ರಚಾರದಲ್ಲಿ ತೊಡಗಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಾಗ್ಗೆ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಪಕ್ಷವು ತನ್ನ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರ ಮುಂದೆ ತೋರಿಸಲು ಸಹಾಯ ಮಾಡಿದೆ ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್‌ನ ಪ್ರಯತ್ನಗಳನ್ನು ಆಕ್ರಮಣಕಾರಿಯಾಗಿ ಎದುರಿಸಲು ಸಹಾಯ ಮಾಡಿದೆ. ಆಡಳಿತ ವಿರೋಧಿ ಅಲೆಯನ್ನು ಹೋಗಲಾಡಿಸಲು ಬಿಜೆಪಿ ಮೋದಿಯವರ ಜನಪ್ರಿಯತೆಯನ್ನು ಅವಲಂಬಿಸಿದೆ. ಕಾಂಗ್ರೆಸ್ ಗ್ಯಾರಂಟಿ ಎಂದು ಘೋಷಿಸಿದ ಉಚಿತ ಮತ್ತು ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿ ಕಾಂಗ್ರೆಸ್ ಭ್ರಷ್ಟಾಚಾರವನ್ನು ತನ್ನ ಪ್ರಮುಖ ಚುನಾವಣಾ ಯೋಜನೆಗಳಲ್ಲಿ ಒಂದನ್ನಾಗಿ ಮಾಡುತ್ತಿದೆ.

ಕರ್ನಾಟಕದಿಂದ ಮರುಹುಟ್ಟು ಬಯಸುತ್ತಿರುವ ಕಾಂಗ್ರೆಸ್: ಸರ್ಕಾರದ ಮೀಸಲಾತಿ ನಿರ್ಧಾರ, ಪ್ರತಿಪಕ್ಷಗಳ ಆರೋಪ, ರಾಜ್ಯಾದ್ಯಂತ ಹಲವು ಸಮುದಾಯಗಳ ಪ್ರತಿಭಟನೆ, ವಿರೋಧ ಯಾವ ರೀತಿ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿ ಸರ್ಕಾರವು ಎಸ್ ಸಿ ಮತ್ತು ಎಸ್ ಟಿ ಕೋಟಾವನ್ನು ಹೆಚ್ಚಿಸಿತು, ಮುಸ್ಲಿಮರಿಗೆ ಇತರ ಹಿಂದುಳಿದ ವರ್ಗಗಳಲ್ಲಿ (OBC) 2B ಯಲ್ಲಿ ಶೇಕಡಾ 4 ಮೀಸಲಾತಿಯನ್ನು ರದ್ದುಗೊಳಿಸಿತು. ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮರುಹಂಚಿಕೆ ಮಾಡಿದೆ. ಆರ್ಥಿಕವಾಗಿ ದುರ್ಬಲ ವರ್ಗದ ಕೋಟಾಕ್ಕೆ(EWS) ಸ್ಥಳಾಂತರಿಸಲ್ಪಟ್ಟ ಮುಸ್ಲಿಮರು ಸಂತೋಷವಾಗಿಲ್ಲ.

ಎಸ್‌ಸಿಯಲ್ಲಿ ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರದ ಕ್ರಮದಿಂದ ಬಂಜಾರ ಸಮುದಾಯದ ಒಂದು ವರ್ಗವು ಕೆರಳಿದೆ. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಸೇರಿದಂತೆ ಹಲವು ಕಡೆ ಪ್ರತಿಭಟನೆಗೆ ಬೀದಿಗಿಳಿದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾದರೆ, ಅದು ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು.

ಹಲವು ಹಿರಿಯ ಬಿಜೆಪಿ ನಾಯಕರು ಕೂಡ ತಾವು ಸ್ವಲ್ಪ ಮಟ್ಟಿಗೆ ಆಡಳಿತ ವಿರೋಧಿ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಮತ್ತು ಅದನ್ನು ಹೋಗಲಾಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಒಪ್ಪಿಕೊಳ್ಳುತ್ತಾರೆ. ಗುಜರಾತ್ ಮತ್ತು ಉತ್ತರ ಪ್ರದೇಶದಂತಲ್ಲದೆ, ಆಡಳಿತ ವಿರೋಧಿತನವನ್ನು ಹೋಗಲಾಡಿಸಲು ಅನೇಕ ಹಾಲಿ ಶಾಸಕರನ್ನು ಕೈಬಿಡುವಂತಹ ಕಠಿಣ ಕ್ರಮಗಳಿಗೆ ಪಕ್ಷವು ಹೋಗದಿರಬಹುದು, ಆದರೆ ಕೆಲವು ಅಸೆಂಬ್ಲಿ ಸ್ಥಾನಗಳಲ್ಲಿ ಅದನ್ನು ತಳ್ಳಿಹಾಕಲಾಗುವುದಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯ ಫಲಿತಾಂಶಗಳು ಬಿಜೆಪಿಗೆ ಸುಲಭವಲ್ಲ ಎಂದು ಸೂಚಿಸಿವೆ, ತಳಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಹೋರಾಡುತ್ತಿದ್ದಾರೆ. ತಮ್ಮ ರಾಜಕೀಯ ಹಿಡಿತವನ್ನು ಉಳಿಸಿಕೊಳ್ಳುತ್ತಾರೆ.

ಮೊದಲ ಬಾರಿಗೆ ಹಳೆ ಮೈಸೂರು ಭಾಗದಲ್ಲಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದ್ದು, ಬಿಜೆಪಿ ಈ ಪ್ರದೇಶದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ 2018 ರ ಕಾರ್ಯಕ್ಷಮತೆಯನ್ನು ಸುಧಾರಿಸಲು ಆಶಿಸುತ್ತಿದೆ, ಕರಾವಳಿ ಪ್ರದೇಶದಲ್ಲಿ ಬಿಜೆಪಿಗೆ ಲಾಭವಿದೆ. ಮಧ್ಯ ಕರ್ನಾಟಕ ಮತ್ತು ಬೆಂಗಳೂರು ನಗರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿವೆ. ದಕ್ಷಿಣದ ಇತರ ರಾಜ್ಯಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಯತ್ನಿಸುತ್ತಿರುವ ಬಿಜೆಪಿಗೆ ಕರ್ನಾಟಕ ವಿಧಾನಸಭಾ ಚುನಾವಣೆ ನಿರ್ಣಾಯಕವಾಗಿದೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕರ್ನಾಟಕದಿಂದ ತನ್ನ ರಾಷ್ಟ್ರವ್ಯಾಪಿ ಮರುಹುಟ್ಟು ಕಾಣಲು ಆಶಿಸುತ್ತಿರುವ ಕಾಂಗ್ರೆಸ್‌ಗೆ ಇದು ಅಷ್ಟೇ ಮುಖ್ಯವಾಗಿದೆ.  ಈ ರಾಜಕೀಯ ಆಟದಲ್ಲಿ ಯಾರು ಗೆಲ್ಲಬಹುದು ಎಂದು ಹೇಳಲು ಕಷ್ಟವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com