ಕರ್ನಾಟಕ ಚುನಾವಣೆ 2023: ಕದನ ಕೌತುಕ ಮೂಡಿಸಿರುವ ಪ್ರಮುಖ 20 ಕ್ಷೇತ್ರಗಳು!

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ 20 ಕ್ಷೇತ್ರಗಳ ಕದನ ತೀವ್ರ ಕೌತುಕ ಮೂಡಿಸಿದೆ. 
ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ವೈ ಮತ್ತಿತರರು
ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ವೈ ಮತ್ತಿತರರು
Updated on

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ 20 ಕ್ಷೇತ್ರಗಳ ಕದನ ತೀವ್ರ ಕೌತುಕ ಮೂಡಿಸಿದೆ. 

1. ಶಿಗ್ಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕ್ಷೇತ್ರದ ಹಾಲಿ ಶಾಸಕರು, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಜೀಂ ಪ್ರೀಮ್ ಖಾದ್ರಿ ವಿರುದ್ಧ 9,265 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2. ವರುಣಾ: 2018ರ ಚುನಾವಣೆಯಲ್ಲಿ ತನ್ನ ಮಗ ಯತೀಂದ್ರಗಾಗಿ ತ್ಯಾಗ ಮಾಡಿದ್ದ ವರುಣಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಟಿ. ದೇವೇಗೌಡ ಎದುರು 1,996 ಮತಗಳ ಅಂತರದಿಂದ ಸೋತಿದ್ದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸಿದ್ದರು. ಈಗ ತನ್ನ ತಂದೆಗಾಗಿ ಮಗ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. 

3. ರಾಮನಗರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಸೊಸೆ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಗೆದ್ದು ಶಾಸಕರಾಗಿದ್ದರು. ಈ ಬಾರಿ ನಿಖಿಲ್ ಕುಮಾರ ಸ್ವಾಮಿ ಸ್ಪರ್ಧಿಸುತ್ತಿದ್ದಾರೆ.  2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ  ಸ್ಪರ್ಧಿಸಿದ್ದ ನಿಖಿಲ್, ಸುಮಲತಾ ಅಂಬರೀಶ್ ಅವರ ವಿರುದ್ಧ ಸೋತಿದ್ದರು. 

4. ಮಂಡ್ಯ: 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಈಗ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಬೆಂಬಲಿಸುತ್ತಿರುವುದರಿಂದ ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 

5. ಕನಕಪುರ: ಕನಕಪುರ ಬಂಡೆ ಖ್ಯಾತಿಯ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಕ್ಷೇತ್ರದಿಂದ ಏಳು ಬಾರಿ ಗೆದ್ದು ಶಾಸಕರಾಗಿದ್ದಾರೆ. 1989ರಿಂದಲೂ ಇಲ್ಲಿಯವರೆಗೂ ಇದೇ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದಾರೆ.

6. ಹಾಸನ: ಬಿಜೆಪಿಯ ಪ್ರೀತಂ ಗೌಡ ಕಳೆದ ಬಾರಿ ಸುಮಾರು 13 ಸಾವಿರ ಮತಗಳ ಅಂತರದಿಂದ ಎಚ್‌ಎಸ್‌ ಪ್ರಕಾಶ್‌ ಅವರನ್ನು ಸೋಲಿಸುವ ಮೂಲಕ ಜೆಡಿಎಸ್‌ ಪ್ರಾಬಲ್ಯವನ್ನು ಮುರಿದಿದ್ದರು. ಈ ಬಾರಿ ಜೆಡಿಎಸ್‌ಗೆ ಕೌಟುಂಬಿಕ ಕಲಹ ಎದುರಾಗಿದ್ದು, ದೇವೇಗೌಡರ ಸೊಸೆ (ಎಚ್‌ಡಿ ರೇವಣ್ಣ ಅವರ ಪತ್ನಿ) ಭವಾನಿ ಹಾಸನದಿಂದ ಸ್ಪರ್ಧಿಸಲು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.

7. ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದರು. ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಕಳೆದ ವರ್ಷ ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್‌ನ ಹಾಲಿ ಶಾಸಕ ಕೆ ಶ್ರೀನಿವಾಸಗೌಡ ಕಾಂಗ್ರೆಸ್‌ ಪರ ನಿಂತಿದ್ದರು. ಜೆಡಿಎಸ್ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆಸಬೇಕಿದೆ.

8. ಚನ್ನಪಟ್ಟಣ: 2018ರಲ್ಲಿ ರಾಮನಗರದ ಬದಲು ಇಲ್ಲಿಂದ ಸ್ಪರ್ಧಿಸಿದ್ದ ಎಚ್‌ಡಿ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಅವರನ್ನು ಸೋಲಿಸಿದ್ದರು.  ಕುಮಾರಸ್ವಾಮಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

9. ಶಿಕಾರಿಪುರ: ಮಾಜಿ ಸಿಎಂ ಮತ್ತು ಲಿಂಗಾಯತ ಪ್ರಬಲ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾದ ನಂತರ ಈಗ ಅವರ ಸ್ಥಾನ ತೆರವಾಗಿದೆ. ಈಗ ಅವರ ಎರಡನೇ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಟಿಕೆಟ್ ಸಿಗಬಹುದು ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಇದೆ.

10. ಶಿವಮೊಗ್ಗ: ಲಂಚ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್.ಈಶ್ವರಪ್ಪ ಇಲ್ಲಿನ ಹಾಲಿ ಶಾಸಕ.

11. ಸೊರಬ: ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಇಬ್ಬರು ಪುತ್ರರಾದ ಬಿಜೆಪಿ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಮತ್ತೆ ಕಣಕ್ಕಿಳಿಯಬಹುದು. ಕಳೆದ ಬಾರಿ ಜೆಡಿಎಸ್ ಮಧು ಅವರಿಗೆ ಟಿಕೆಟ್ ನೀಡಿತ್ತು ಆದರೆ ಈ ಬಾರಿ ಅವರು ಕಾಂಗ್ರೆಸ್‌ನಲ್ಲಿದ್ದಾರೆ.

12. ಗೋಕಾಕ: ಬೆಳಗಾವಿಯ ಪ್ರಬಲ ಜಾರಕಿಹೊಳಿ ಕುಟುಂಬದ ರಮೇಶ್ ಜಾರಕಿಹೊಳಿ ಅವರು 1999 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಲೈಂಗಿಕ ಹಗರಣದ ನಂತರ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಾರಕಿಹೊಳಿ ಕಾಂಗ್ರೆಸ್ ತೊರೆದು 2019ರಲ್ಲಿ ಬಿಜೆಪಿ ಸೇರಿದ್ದರು.

13. ದೇವನಹಳ್ಳಿ: ಲೋಕಸಭೆಯಲ್ಲಿಯೇ ತಮ್ಮ ಎಲ್ಲಾ ಚುನಾವಣಾ ರಾಜಕೀಯವನ್ನು ಕಳೆದಿರುವ ಕೆ.ಎಚ್. ಮುನಿಯಪ್ಪ, ಈ ಬಾರಿ ದೇವನಹಳ್ಳಿಯಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ . ಜೆಡಿಎಸ್ ಹಾಲಿ ಶಾಸಕ ಎಲ್ ಎನ್ ನಾರಾಯಣ ಸ್ವಾಮಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 

14. ಗಂಗಾವತಿ: ಗಣಿ ಉದ್ಯಮಿ ಮತ್ತು ಬಿಜೆಪಿಯ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ತಮ್ಮ ಹೊಸ ಪಕ್ಷ 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ'ದ ಅಭ್ಯರ್ಥಿಯಾಗಿ ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದ ನಂತರ ಗಂಗಾವತಿ ಇದ್ದಕ್ಕಿದ್ದಂತೆ ಮಹತ್ವ ಪಡೆದುಕೊಂಡಿದೆ. ಸದ್ಯ ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. 

15. ವಿಜಯಪುರ: ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾದ ಬಸನಗೌಡ ಪಾಟೀಲ್ ಯತ್ನಾಳ್ ಇಲ್ಲಿನ ಬಿಜೆಪಿ ಶಾಸಕ.

16. ಬಳ್ಳಾರಿ ನಗರ: ಮಾಜಿ ಸಚಿವ, ಗಣಿ ಉದ್ಯಮಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಜಿ.ಜನಾರ್ದನ ರೆಡ್ಡಿ ಇಲ್ಲಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ರೆಡ್ಡಿ ಸಹೋದರ ಜಿ ಸೋಮಶೇಖರ ರೆಡ್ಡಿ ಹಾಲಿ ಬಿಜೆಪಿ ಶಾಸಕರಾಗಿದ್ದಾರೆ.

17. ಚಿತ್ತಾಪುರ: ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಇಲ್ಲಿಂದ ಪುನರಾಯ್ಕೆ ಬಯಸಿದ್ದಾರೆ.

18. ಕೊರಟಗೆರೆ: ಮಾಜಿ ಉಪಮುಖ್ಯಮಂತ್ರಿ ಹಾಗೂ ಐದು ಬಾರಿ ಶಾಸಕರಾಗಿದ್ದ ಜಿ.ಪರಮೇಶ್ವರ ಇಲ್ಲಿಂದ ಪುನರಾಯ್ಕೆ ಬಯಸಿದ್ದಾರೆ. ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ತಾನು ಕೂಡಾ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಒಬ್ಬರು ಎಂದು ಹೇಳಿಕೊಂಡಿದ್ದಾರೆ.

19. ಮಂಗಳೂರು: ಕಾಂಗ್ರೆಸ್ ತನ್ನ ಉಪನಾಯಕ ಯು ಟಿ ಖಾದರ್ ಅಲಿ ಫರೀದ್ ಅವರನ್ನು ಮತ್ತೆ ಇಲ್ಲಿಂದ ವಿಧಾನಸಭೆಗೆ ಕಣಕ್ಕಿಳಿಸಿದೆ. ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಇವರಾಗಿದ್ದಾರೆ. 

20. ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನಾಲ್ಕು ಬಾರಿ ಶಾಸಕರಾಗಿದ್ದ ಸಿ ಟಿ ರವಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com