ಬೆಂಗಳೂರು: 'ಸಮಾಜ ಮತ್ತು ದೇಶವನ್ನು ಒಡೆಯುವುದು ಬಿಜೆಪಿಯ ಉದ್ದೇಶ. ಸಮಾಜದ ಬೆಳವಣಿಗೆಗೆ ಯಾವತ್ತೂ ಅದು ಕೆಲಸ ಮಾಡಿಲ್ಲ. ದೇಶವನ್ನು ಒಡೆಯುವ ಗುರಿಯನ್ನು ಹೊಂದಿರುವ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುವುದಾಗಿ ಪಕ್ಷದ ಪ್ರಣಾಳಿಕೆಯು ಭರವಸೆ ನೀಡುತ್ತದೆ. ಇದು ಕೇಸರಿ ಪಕ್ಷದ ಪರ ಧ್ರುವೀಕರಣಕ್ಕಾಗಿ ಮಾತ್ರ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಇಲ್ಲಿ ಆರೋಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಪಕ್ಷವು ಈ ವಿಷಯವನ್ನು ಪ್ರಸ್ತಾಪಿಸುತ್ತದೆ. ಮೋದಿ ಸರ್ಕಾರ ನಾಲ್ಕು ಕಾರ್ಮಿಕ ಕಾನೂನುಗಳನ್ನು ಮಾರ್ಪಡಿಸಿದೆ. ಇದರಿಂದ ಕಾರ್ಮಿಕರು ಮತ್ತು ಕಾರ್ಮಿಕ ವರ್ಗದವರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ಅವರಿಗೆ ಸಾಮಾಜಿಕ ಭದ್ರತೆಯ ಪರಿಕಲ್ಪನೆಯನ್ನು ಕಡೆಗಣಿಸಿದೆ ಎಂದು ದೂರಿದರು.
'8 ರಿಂದ ದಿನದ 12 ಗಂಟೆಯ ಕೆಲಸದ ಸಮಯವನ್ನು ಬಂಡವಾಳಶಾಹಿಗಳು ಮತ್ತು ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವಂತೆ ವಿಸ್ತರಿಸಲಾಗಿದೆ. ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಮಹಿಳೆಯರ ಸುರಕ್ಷತೆಯನ್ನು ಪರಿಗಣಿಸಿ ಈ ಹಿಂದೆ ಅನುಮತಿ ನೀಡಿರಲಿಲ್ಲ. ಸರ್ಕಾರ ಬಲವಂತವಾಗಿ ಇಂತಹ ಕಾನೂನು ತರುತ್ತಿದೆ' ಎಂದರು.
'ಪಿಎಫ್ ಹಣದ ಮೇಲಿನ ಬಡ್ಡಿ ದರವನ್ನು ಶೇ 9 ರಿಂದ ಶೇ 8.75ಕ್ಕೆ ಇಳಿಸಲಾಗಿದೆ. ಇದಲ್ಲದೆ ಕಾರ್ಮಿಕರ ಶ್ರಮದ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡಲಾಗಿದೆ. ಅವರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಏಕೆ ಹೂಡಿಕೆ ಮಾಡಲಾಗುತ್ತಿದೆ? ಷೇರುಪೇಟೆ ಕುಸಿದರೆ ಯಾರು ಹೊಣೆ? ಕೇಂದ್ರ ಜಾರಿಗೆ ತಂದಿರುವ ನಾಲ್ಕು ಕಾನೂನುಗಳು ಕಾರ್ಮಿಕರ ವಿರುದ್ಧವಾಗಿದೆ. ಇದರ ವಿರುದ್ಧ ಸಂಸತ್ತಿನಲ್ಲಿ ಹೋರಾಟ ನಡೆಸಿದ್ದೇವೆ. ಆದರೆ, ಸರ್ಕಾರ ಅವುಗಳನ್ನು ವಾಪಸ್ ತೆಗೆದುಕೊಂಡಿಲ್ಲ' ಎಂದರು.
ಶ್ರೀಮಂತರ ಆದಾಯವು ಶೇ 70 ರಷ್ಟು ಹೆಚ್ಚಾಗಿದೆ. ಆದರೆ, ಕಾರ್ಮಿಕರ ವೇತನವು ಕೇವಲ ಶೇ 5 ರಷ್ಟು ಹೆಚ್ಚಾಗಿದೆ. ಕೇಂದ್ರದ ಆದೇಶವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪಾಲಿಸುತ್ತಿದೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಕೇಂದ್ರ ಜಾರಿಗೊಳಿಸಿದ ಕಾರ್ಮಿಕ ವಿರೋಧಿ ಕಾನೂನನ್ನು ಅಂಗೀಕರಿಸಿಲ್ಲ ಅಥವಾ ಜಾರಿಗೊಳಿಸಿಲ್ಲ ಎಂದು ಖರ್ಗೆ ಹೇಳಿದರು.
ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ ಸೌಲಭ್ಯ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ವಿಮಾ ಯೋಜನೆ ಸೇರಿದಂತೆ ತಾವು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಜಾರಿಗೆ ತಂದ 'ಜನಪರ' ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದರು.
Advertisement