ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಟೆಂಪಲ್ ರನ್: ಎಂ.ಬಿ ಪಾಟೀಲ್- ಜಾರ್ಜ್ ಜೊತೆ ಸಿದ್ದರಾಮಯ್ಯ ಗೌಪ್ಯ ಸಭೆ!
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಸೋಮವಾರ ಅಥವಾ ಮಂಗಳವಾರ ಹೈಕಮಾಂಡ್ ಘೋಷಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ನಾಯಕನ ಆಯ್ಕೆ ಆಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಯಸಿದ್ದರು. ಆದರೆ, ಪಕ್ಷದ ಹೈಕಮಾಂಡ್ ಈ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದರು ಎಂದು ಹೇಳಲಾಗಿದೆ.
ಈ ನಡುವೆ ಶನಿವಾರ ತಡರಾತ್ರಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಸಿದ್ದರಾಮಯ್ಯ ಅವರು ಗೌಪ್ಯ ಸಭೆ ನಡೆಸಿದ್ದು, ಲಿಂಗಾಯತ ಮುಖಂಡ, ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡ ಪಾಲ್ಗೊಂಡಿದ್ದರು ಎಂಬ ಮಾತುಗಳೂ ಕೇಳಿಬರುತ್ತಿವೆ.
ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗ ಹಾಗೂ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರನ್ನು ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಒಕ್ಕಲಿಗರ ಪ್ರಭಾವಿ ನಾಯಕರಾಗಿರುವ ಡಿ.ಕೆ ಶಿವಕುಮಾರ್ ತುಮಕೂರು ಜಿಲ್ಲೆಯ ಕಾಡಸಿದ್ದೇಶ್ವರ ಮಠ ಮತ್ತು ಸಿದ್ದಗಂಗಾ ಮಠದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಇಬ್ಬರು ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಟೆಂಪಲ್ ರನ್ ಮಾಡಿದ್ದಾರೆ.
ದಲಿತ ಸಮುದಾಯದ ಹಿರಿಯ ನಾಯಕರಲ್ಲಿ ಒಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ಅವರನ್ನು ಸಮಾಧಾನಪಡಿಸುವ ಕ್ರಮಗಳು ನಡೆಯುತ್ತಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಎಷ್ಟು ಉಪಮುಖ್ಯಮಂತ್ರಿಗಳು ನೇಮಕವಾಗುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


