ಮುಖ್ಯಮಂತ್ರಿ ಆಯ್ಕೆ ಕಗ್ಗಂಟು: ಸಿಎಂ ಸ್ಥಾನಕ್ಕೆ ಡಿಕೆಶಿ ಪಟ್ಟು; ಶಿವಕುಮಾರ್ ವಾದವೇನು, 'ಬಂಡೆ'ಗಿರುವ ಆತಂಕವೇನು?

ಕಾಂಗ್ರೆಸ್‌ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ,ಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ,ಕೆ ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್‌ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಹಂಚಿಕೆ ತಲೆ ನೋವಾಗಿ ಪರಿಣಿಸಿದ್ದು, ಇಬ್ಬರೂ ನಾಯಕರು ತಮ್ಮನ್ನೇಕೆ ಮುಖ್ಯಮಂತ್ರಿ ಮಾಡಬೇಕು ಎಂಬ ವಾದಗಳನ್ನು ಮುಂದಿಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿಯಾಗಿದ್ದವರು. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನನ್ನ ಪಾತ್ರ ದೊಡ್ಡದಿರುವ ಕಾರಣ ಮೊದಲು ಮುಖ್ಯಮಂತ್ರಿ ಹುದ್ದೆಯನ್ನು ನನಗೆ ನೀಡಬೇಕು ಎಂದು ಡಿ.ಕೆ ಶಿವಕುಮಾರ್ ಹೈಕಮಾಂಡ್ ಬಳಿ ಅವಲತ್ತುಕೊಂಡಿದ್ದಾರೆ ಎನ್ನಲಾಗಿದೆ.

ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಸಹ ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರ ಹೆಣೆಯಲಾಗಿತ್ತು. ಆದರೆ, ಅಲ್ಲಿನ ಮುಖ್ಯಮಂತ್ರಿಗಳಾದ ಅಶೋಕ ಗೆಹ್ಲೋಟ್ ಮತ್ತು ಭೂಪೇಶ್‌ ಬಘೆಲ್‌ ಅವರು ತಮಗೆ ‘ಶಾಸಕರ ಬೆಂಬಲ ಇದೆ’ ಎಂಬ ಕಾರಣಕ್ಕೆ ಅಧಿಕಾರ ಹಸ್ತಾಂತರ ಮಾಡಿರಲಿಲ್ಲ.

ಮೊದಲ ಎರಡು ವರ್ಷ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ನಂತರದ ಎರಡೂವರೆ ವರ್ಷಕ್ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಅಧಿಕಾರ ಹಂಚಿಕೆ ಸೂತ್ರವನ್ನು ಹೈಕಮಾಂಡ್ ನೀಡಿದೆ, ಮೊದಲ ಅವಧಿಗೆ ನಾನೇ ಮುಖ್ಯಮಂತ್ರಿಯಾಗಬೇಕು. ಏಕೆಂದರೆ, ಸಿದ್ದರಾಮಯ್ಯ ಸಿಎಂ ಆದರೆ ಅನಂತರ ಹುದ್ದೆ ಬಿಟ್ಟುಕೊಡುವ ಖಾತರಿ ನನಗಿಲ್ಲ ಎಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ರಾಜಸ್ತಾನ ಮತ್ತು ಛತ್ತೀಸ್  ಗಡದಲ್ಲಿ ನಡೆದಂತೆ ಕರ್ನಾಟಕದಲ್ಲೂ ಎರಡೂವರೆ ವರ್ಷಗಳ ಬಳಿಕ ಇದೇ ಸ್ಥಿತಿ ನಿರ್ಮಾಣವಾದರೆ ನನ್ನ ಗತಿಯೇನು ಎಂದು ಡಿ.ಕೆ. ಶಿವಕುಮಾರ್ ಅವರು ಪಕ್ಷದ ಹಿರಿಯ ನಾಯಕರಲ್ಲಿ ಪ್ರಶ್ನಿಸಿದ್ದಾರೆ. ಇದು ಸಹ ಶಿವಕುಮಾರ್ ಬಿಗಿ ಪಟ್ಟು ಹಿಡಿಯಲು ಕಾರಣ  ಎನ್ನಲಾಗಿದೆ.

ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ, ‘ಅತ್ಯುತ್ತಮ, ಜನಪರ ಆಡಳಿತವನ್ನು 2013ರಿಂದ 2018ರ ಅವಧಿಯಲ್ಲಿ ನೀಡಿದ್ದೇನೆ. ಆದರೆ, ಸೂಕ್ತ ಪ್ರಚಾರ ಸಿಗದ ಕಾರಣ ಪಕ್ಷ ಮರಳಿ ಅಧಿಕಾರಕ್ಕೆ ಬರಲಿಲ್ಲ. ಈಗ ಪೂರ್ಣ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮತ್ತೊಮ್ಮೆ ಅಂತಹ ಆಡಳಿತವನ್ನು ಜನ ಬಯಸಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸಿದ್ದಾರೆ. ಹೀಗಾಗಿ ನನಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಪಟ್ಟು ಹಿಡಿದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ನೇತೃತ್ವದಲ್ಲಿ ಚುನಾವಣೆ ಎದುರಿಸಿರುವುದರಿಂದ ಸಂಪ್ರದಾಯದಂತೆ ನನಗೆ ಮುಖ್ಯಮಂತ್ರಿ ಹುದ್ದೆ ನನಗೆ ನೀಡಬೇಕು. 1999ರಲ್ಲಿ ಎಸ್‌.ಎಂ. ಕೃಷ್ಣ ಅಧ್ಯಕ್ಷರಾಗಿದ್ದಾಗ ಗೆದ್ದಿದ್ದರಿಂದ ಅವರೇ ಮುಖ್ಯಮಂತ್ರಿ ಆಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿಲ್ಲ, 2013ರಲ್ಲಿ ಡಾ.ಜಿ. ಪರಮೇಶ್ವರ್‌ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿದ್ದರೂ ಅವರು ಗೆದ್ದಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಯಾಗಲಿಲ್ಲ.

ಈ ಬಾರಿ ನನ್ನ ಅಧ್ಯಕ್ಷತೆಯಲ್ಲೇ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಕಾರಣಕ್ಕೆ ಒಕ್ಕಲಿಗ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವರ್ಗವಾಗಿವೆ,  ದಕ್ಷಿಣ ಕರ್ನಾಟಕ ಭಾಗದಲ್ಲಿ 33 ಸ್ಥಾನ ಗೆಲ್ಲುವ ಮೂಲಕ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ.

ಜೆಡಿಎಸ್‌ಗೆ ಶೇ. 5ರಷ್ಟು ಮತಗಳು ನಷ್ಟವಾಗಿದ್ದು, ಅದು ಕಾಂಗ್ರೆಸ್‌ಗೆ ಬಂದಿರುವುದೇ ಒಕ್ಕಲಿಗ ಸಮುದಾಯ ನನಗೆ ಬೆಂಬಲ ನೀಡಿದೆ ಎಂಬುದಕ್ಕೆ ಸಾಕ್ಷಿ. ಕಳೆದ ಬಾರಿಯ ಸೋಲಿನಿಂದ ಸಿದ್ದರಾಮಯ್ಯ ಹಾಗೂ ಹಿಂದಿನ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಿದ ಸಂಕಷ್ಟಸಂದರ್ಭದಲ್ಲಿ ಪಕ್ಷವನ್ನು ಮುನ್ನೆಡೆಸಿದೆ. ದೇಶದಲ್ಲೇ ಕಾಂಗ್ರೆಸ್‌ ಸಂಕಷ್ಟದಲ್ಲಿರುವಾಗ ರಾಜ್ಯದಲ್ಲಿ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟಿಸಿ ಅಧಿಕಾರಕ್ಕೆ ತಂದಿದ್ದೇನೆ ಹೀಗಾಗಿ ನನ್ನನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com