ಬೆಂಗಳೂರು: ಚುನಾವಣೆಯಲ್ಲಿ ನಿರಾಶಾದಾಯಕ ಸೋಲಿನ ನಂತರ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಸೋಲಿಗೆ ಕಾರಣ ಏನೆಂಬುದನ್ನು ಪರಾಮರ್ಶಿಸಲು ಪಕ್ಷದ ಚುನಾವಣಾ ಸಮಿತಿ ಸದಸ್ಯರು ಮತ್ತು ಶಾಸಕರೊಂದಿಗೆ ಸರಣಿ ಸಭೆಗಳನ್ನು ಕರೆದಿದ್ದಾರೆ.
ಸಮಿತಿಯ ಸದಸ್ಯರು, ಶಾಸಕರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸಕಾರಾತ್ಮಕ ಮತ್ತು ದಕ್ಷ ಪ್ರತಿಪಕ್ಷವಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ.
ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಉಸ್ತುವಾರಿ ಮುಖಂಡರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ವಿವಿಧ ಭರವಸೆಗಳನ್ನು ಜಾರಿಗೊಳಿಸಬೇಕು ಎಂದ ಅವರು, ಬಿಜೆಪಿಯ ಮತಗಳಿಕೆಯು ಕಡಿಮೆಯಾಗಿಲ್ಲ. ಹೆಚ್ಚು ಸ್ಥಾನ ಪಡೆದಿರುವ ಕಾಂಗ್ರೆಸ್‌ಗೆ ಜೆಡಿಎಸ್‌ನ ಮತ ಹಂಚಿಕೆಯಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷಿಸಿದ್ದೆವು. ಕೆಲವು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾದರೆ, ಕೆಲವೆಡೆ ಕಡಿಮೆ ಮತದಾನವಾಗಿದೆ. ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ಸಂಸದೀಯ ಮಂಡಳಿ ನಿರ್ಧರಿಸಲಿದೆ.
ಇದಕ್ಕೂ ಮುನ್ನ ಪಕ್ಷದ ಶಾಸಕರು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತಾರೆ. ಬಡವರು, ರೈತರು, ಮಹಿಳೆಯರು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳು ಸೇರಿದಂತೆ ದೇಶದ ಸರ್ವತೋಮುಖ ಪ್ರಗತಿಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಇದನ್ನು ಕರ್ನಾಟಕದ ಜನತೆಗೆ ತಿಳಿಸಲಾಗುವುದು ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ತನ್ನ ನಿಲುವು ಬದಲಿಸುತ್ತಿದೆ. ಈ ಹಿಂದೆ ಎಲ್ಲಾ ನಿರುದ್ಯೋಗಿ ಯುವಕರಿಗೆ 3,000 ರೂ. ನೀಡುವುದಾಗಿ ಹೇಳಿದ್ದರು. ಆದರೆ, ಈಗ ಈ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರಿಗೆ ಯೋಜನೆ ಎಂದು ಷರತ್ತು ವಿಧಿಸಿದ್ದಾರೆ ಎಂದು ದೂರಿದರು.
ಒಂದು ವೇಳೆ ಕಾಂಗ್ರೆಸ್ ಗೋಹತ್ಯೆ ವಿರೋಧಿ ಕಾನೂನನ್ನು ಹಿಂಪಡೆದರೆ ಅದು ಸಂವಿಧಾನಕ್ಕೆ ವಿರುದ್ಧವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
Advertisement