ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ತೀವ್ರ ಹಗ್ಗ-ಜಗ್ಗಾಟದ ನಡುವೆ ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಸರ್ಕಸ್ ಬುಧವಾರ ದೆಹಲಿಯಲ್ಲಿ ಆರಂಭವಾಗಿದೆ. ಹೈಕಮಾಂಡ್ ಉಭಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಇದರ ನಡುವೆ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರ ಬೆಂಬಲಿಗರು ಲಾಬಿ ತೀವ್ರಗೊಳಿಸಿದ್ದಾರೆ. ಹಲವು ಶಾಸಕರು ಹೆಚ್ಚಿನ ಅನುಭವಿಗಳಾಗಿದ್ದು, ಅವರೆಲ್ಲರನ್ನೂ ಸಮಾಧಾನಪಡಿಸುವುದು ಹೇಗೆ ಎಂದು ನಾಯಕರು ಆತಂಕಕ್ಕೊಳಗಾಗಿದ್ದಾರೆ.
ಮೊದಲ ಸುತ್ತಿನಲ್ಲಿ ಎಂಟು ಶಾಸಕರು ಸಂಪುಟ ಸೇರ್ಪಡೆಗೊಂಡಿರುವುದು ಈಗಾಗಲೇ ಹಲವಾರು ಹಿರಿಯರನ್ನು ನಿರಾಸೆಗೊಳಿಸಿದೆ. ಪಕ್ಷದ ಪ್ರಮುಖ ಶಾಸಕರಾದ ಕೃಷ್ಣ ಬೈರೇಗೌಡ, ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಎಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್ ತಮ್ಮನ್ನು ಏಕೆ ಸಂಪುಟಕ್ಕೆ ಸೇರಿಸಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
ಹೊಸ ಲೆಕ್ಕಾಚಾರದ ಪ್ರಕಾರ ಪ್ರಮುಖ ಜಿಲ್ಲೆಗಳಿಂದ ತಲಾ ಒಬ್ಬರಾದರೂ ಶಾಸಕರು ಆಯ್ಕೆಯಾಗಬಹುದು ಎಂಬ ಊಹಾಪೋಹ ಹಬ್ಬಿದೆ. ಬೆಂಗಳೂರು ಮತ್ತು ಬೆಳಗಾವಿಯಂತಹ ಕೆಲವು ದೊಡ್ಡ ಜಿಲ್ಲೆಗಳಿಗೆ ಹೆಚ್ಚಿನ ಶಾಸಕರು ಸೇರ್ಪಡೆಯಾಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಸಿಎಂ ಯಾವುದೇ ಸುಳಿವು ನೀಡಿಲ್ಲ.
ಮುಂಬಯಿ- ಕರ್ನಾಟಕದ ಏಳು ಜಿಲ್ಲೆಗಳಿಂದ 37 ಶಾಸಕರು ಗೆಲ್ಲುವು ಕಂಡಿದ್ದಾರೆ., ಪಕ್ಷವು ಈ ಪ್ರದೇಶದ ಹೆಚ್ಚಿನ ಲಿಂಗಾಯತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಸಿದ್ದರಾಮಯ್ಯನವರು ತಮ್ಮ ಅನುಭವಿಗಳು ಮತ್ತು ಯುವಕರ ಮಿಶ್ರಣವುಳ್ಳ ಸಚಿವ ಸಂಪುಟ ತರುವ ನಿರೀಕ್ಷೆಯಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಆದಾಗ್ಯೂ, ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಉತ್ತಮ ಪ್ರಾತಿನಿಧ್ಯ ನೀಡಲು ಪಕ್ಷವು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement