ಅಳೆದು-ತೂಗಿ ಸಚಿವ ಸಂಪುಟ ರಚನೆ ಲೆಕ್ಕಾಚಾರ: ಲೋಕಸಭೆ ಚುನಾವಣೆ ದೃಷ್ಟಿಯಿಂದ ಜನಪ್ರಿಯ ಶಾಸಕರಿಗಷ್ಟೇ ಮಣೆ!
ಸಂಪುಟ ವಿಸ್ತರಣೆ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಣದವರ ಮಧ್ಯೆ ಪೈಪೋಟಿ ಜೋರಾಗಿದೆ. ಹಿರಿಯ ಶಾಸಕರೂ ಕೂಡ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
Published: 24th May 2023 10:30 AM | Last Updated: 24th May 2023 02:13 PM | A+A A-

ಸಿದ್ದರಾಮಯ್ಯ ಮತ್ತು ಡಿ,ಕೆ ಶಿವಕುಮಾರ್
ಬೆಂಗಳೂರು: ಸಂಪುಟ ವಿಸ್ತರಣೆ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಣದವರ ಮಧ್ಯೆ ಪೈಪೋಟಿ ಜೋರಾಗಿದೆ. ಹಿರಿಯ ಶಾಸಕರೂ ಕೂಡ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಈ ನಡುವೆ ಕಾಂಗ್ರೆಸ್ ಹೊಸ ಲೆಕ್ಕಾಚಾರ ನಡೆಸುತ್ತಿದೆ.
ಮೊದಲ ಸುತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಎಂಟು ಮಂದಿ ಪ್ರಮುಖ ನಾಯಕರು ಸೇರ್ಪಡೆಗೊಂಡ ಬೆನ್ನಲ್ಲೇ ರಾಜ್ಯಾದ್ಯಂತ ಹಲವು ಸಚಿವ ಆಕಾಂಕ್ಷಿಗಳು ಸಂಪುಟ ವಿಸ್ತರಣೆಗೆ ತುದಿಗಾಲಲ್ಲಿ ನಿಂತಿದ್ದಾರೆ.
ಅವರಲ್ಲಿ ಹಲವರು ಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್‌ನೊಂದಿಗೆ ಲಾಬಿ ಮಾಡುತ್ತಿದ್ದರೂ, 2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭ ತರುವ ಶಾಸಕರನ್ನು ಮಾತ್ರ ಸಚಿವ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಗೆದ್ದಿರುವ ಕೆಲವು ಶಾಸಕರ ಜನಪ್ರಿಯತೆಯ ಮೇಲೆ ಕಣ್ಣಟ್ಟಿರುವ ಪಕ್ಷ, ಗರಿಷ್ಠ ಸಂಖ್ಯೆಯ ಲೋಕಸಭೆ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರವನ್ನು ರೂಪಿಸುತ್ತಿದೆ. ಸಾರ್ವತ್ರಿಕ ಚುನಾವಣೆಗೆ ಸಮೀಕರಣಗಳು ಭಿನ್ನವಾಗಿರುತ್ತವೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನಡೆದುಕೊಂಡ ರೀತಿ ಭಿನ್ನವಾಗಿರಬಹುದು ಎಂದು ಪಕ್ಷಕ್ಕೆ ತಿಳಿದಿದೆ. ಅದಕ್ಕಾಗಿಯೇ ಪಕ್ಷವು ಎಲ್ಲಾ ವರ್ಗಗಳನ್ನು ತೃಪ್ತಿಪಡಿಸಲು `ಸಮತೋಲನ ನಿಯಮ ಆಶ್ರಯಿಸುವುದಕ್ಕಿಂತ ಹೆಚ್ಚಾಗಿ ತನ್ನ ಜನಪ್ರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷವು ತನ್ನ ಎಂಟು ಅನುಭವಿ ಮತ್ತು ಜನಪ್ರಿಯ ನಾಯಕರನ್ನು ಸೇರಿಸಿಕೊಳ್ಳುವ ಮೂಲಕ ತನ್ನ ಉದ್ದೇಶಗಳನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬೆಳಗಾವಿ ಲೋಕಸಭಾ ಸ್ಥಾನ ಸಿಗಬಹುದು ಎಂದು ಪಕ್ಷದ ಕೆಲ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಕಪ್ಪ ಕಳುಹಿಸಲೇಬೇಕು! ಕಾಂಗ್ರೆಸ್ ಹೈ ಕಮಾಂಡಿಗು- ಸಿದ್ದರಾಮಯ್ಯಗೂ ಇರುವ ಡೀಲ್ ಅದು!
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರನ್ನು ಸೆಳೆಯಲು ಲಕ್ಷ್ಮಣ ಸವದಿ ಅವರಿಗೆ ಅಲ್ಲಿನ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಡಿತವನ್ನು ಪರಿಗಣಿಸಿ ಪಕ್ಷವು ಅವರನ್ನು ಆಯ್ಕೆ ಮಾಡಬೇಕು ಎಂದು ಮುಖಂಡರು ಸಲಹೆ ನೀಡಿದರು.
ಈಶ್ವರ ಖಂಡ್ರೆ, ಶಿವಾನಂದ್ ಪಾಟೀಲ್, ಬಸವರಾಜ ರಾಯರೆಡ್ಡಿ, ನಾಗೇಂದ್ರ, ಶರಣಬಸಪ್ಪ ದರ್ಶನಾಪುರ ಮತ್ತು ಶರಣಪ್ರಕಾಶ ಪಾಟೀಲ್ ಸೇರಿದಂತೆ ಬಾಂಬೆ-ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಕೆಲವು ಜನಪ್ರಿಯ ಮುಖಗಳು ಸಂಪುಟ ಸೇರುವ ಸಾಧ್ಯತೆಯಿದೆ.
ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಪ್ರಿಯಾಂಕ್ ಖರ್ಗೆ ಮತ್ತು ಎಂ.ಬಿ.ಪಾಟೀಲ್ ಈಗಾಗಲೇ ಸಂಪುಟದಲ್ಲಿದ್ದಾರೆ. ಬಿಜೆಪಿಯ ಹುಬ್ಬಳ್ಳಿಯ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ಪಕ್ಷವು ಗಂಭೀರವಾಗಿ ಚಿಂತಿಸುತ್ತಿದೆ. ಹಾಗಾಗಿ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಂಪುಟ ಬಿಕ್ಕಟ್ಟು: ಸಿದ್ದು ಆಪ್ತ ಮಹಾದೇವಪ್ಪಗೆ ಸ್ಥಾನ ನೀಡದಂತೆ ಡಿಕೆ ಪಟ್ಟು; ದಲಿತರು-ಒಕ್ಕಲಿಗರ ಸ್ವಾಭಿಮಾನಕ್ಕೆ ಪೆಟ್ಟು!
ಮುಂದಿನ ಎರಡು ಮೂರು ದಿನಗಳಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್‌ನೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದ ನಂತರ ಶುಕ್ರವಾರ ಅಥವಾ ಶನಿವಾರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷವು 28 ಸಚಿವರ ಸಂಪುಟವನ್ನು ಹೊಂದಬಹುದು ಮತ್ತು ಸ್ವಲ್ಪ ಸಮಯದ ನಂತರ ಇನ್ನೂ ಐದು ಸಚಿವರನ್ನು ಸೇರಿಸಿಕೊಳ್ಳಲು ಮತ್ತೊಂದು ಸುತ್ತಿನ ವಿಸ್ತರಣೆಗೆ ಹೋಗಬಹುದು ಎಂದು ಅವರು ಹೇಳಿದರು.