ನನ್ನ ಆತ್ಮವಿಶ್ವಾಸ ಕುಗ್ಗಿಲ್ಲ, ಖಿನ್ನತೆಗೊಳಗಾಗಿಲ್ಲ: ಫಲಿತಾಂಶದ ಬಳಿಕ ಮೊದಲ ಬಾರಿ ಶೆಟ್ಟರ್ ಬಹಿರಂಗ ಪ್ರತಿಕ್ರಿಯೆ!
ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಶೆಟ್ಟರ್ ಯಾರೋ ಊಹಿಸಿದಂತೆ ನನ್ನ ಆತ್ಮವಿಶ್ವಾಸ ಕುಗ್ಗಿಲ್ಲ ಅಥವಾ ನಾನು ಖಿನ್ನತೆಗೆ ಒಳಗಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.
Published: 31st May 2023 09:15 AM | Last Updated: 31st May 2023 01:55 PM | A+A A-

ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಯಾರೋ ಊಹಿಸಿದಂತೆ ನನ್ನ ಆತ್ಮ ವಿಶ್ವಾಸ ಕುಗ್ಗಿಲ್ಲ ನಾನು, ಖಿನ್ನತೆಗೆ ಒಳಗಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಶೆಟ್ಟರ್ ಯಾರೋ ಊಹಿಸಿದಂತೆ ನನ್ನ ಆತ್ಮವಿಶ್ವಾಸ ಕುಗ್ಗಿಲ್ಲ ಅಥವಾ ನಾನು ಖಿನ್ನತೆಗೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶೆಟ್ಟರ್, ನಾನು ಚುನಾವಣೆಯಲ್ಲಿ ಸೋತರೂ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಗೆಲುವು ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಕಪಾಳಮೋಕ್ಷ ದಂತಾಗಿದೆ, ರಾಷ್ಟ್ರೀಯ ರಾಜಕೀಯದಲ್ಲಿ ಬದಲಾವಣೆಗೆ ಮುನ್ನುಡಿ ಆಗಲಿದೆ ಎಂದರು.
ಇದನ್ನೂ ಓದಿ: ಸಿದ್ದು ಸಂಪುಟದಲ್ಲಿ ಲಿಂಗಾಯತರಿಗೆ ಬಂಪರ್: 7 ಮಂದಿ ಮಿನಿಸ್ಟರ್; ಯೋಜನಾ ಆಯೋಗದ ಮುಖ್ಯಸ್ಥರಾಗಿ ಶೆಟ್ಟರ್?
ತಮ್ಮ ಸೋಲಿನಿಂದ ಪಕ್ಷದ ಕಾರ್ಯಕರ್ತರು ಹತಾಶರಾಗುವ ಅಗತ್ಯವಿಲ್ಲ ಎಂದು ಹೇಳಿದ ಶೆಟ್ಟರ್, ತಾವು ವೈಯಕ್ತಿಕವಾಗಿ ಸೋತಿಲ್ಲ, ಆದರೆ ಬಿಜೆಪಿ ಕಟ್ಟಲು ಹರಸಾಹಸ ಮಾಡಿದ ತಮ್ಮ ಕುಟುಂಬದ ಹಿರಿಯರು ಸೋಲಿನ ರುಚಿ ಅನುಭವಿಸಿ ನಂತರ ಗೆಲುವು ಸಾಧಿಸಿದ್ದಾರೆ ಎಂದರು.
ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಅವರಂತಹ ನಾಯಕರು ಕೂಡ ತಮ್ಮ ವೃತ್ತಿ ಜೀವನದಲ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. ಸೋಲು ಅನುಭವಿಸಿದ ನಂತರವೇ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾದರು.
ಸೋಲು-ಗೆಲುವು ಚುನಾವಣಾ ರಾಜಕೀಯದ ಭಾಗವಾಗಿದ್ದು, ಪಕ್ಷದ ಕಾರ್ಯಕರ್ತರು ಆತಂಕಕ್ಕೆ ಒಳಗಾಗದೆ ಪಕ್ಷದ ಯಶಸ್ಸಿಗೆ ಶ್ರಮಿಸಬೇಕು ಎಂದರು. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸಿ, ಬಹಮತದಿಂದ ಗೆಲ್ಲುವಂತೆ ಮನವಿ ಮಾಡಿದರು. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುತ್ತಿದ್ದು, ಗ್ರಾಮೀಣ ಭಾಗದಲ್ಲಿ ಪಕ್ಷವು ಪ್ರಬಲವಾಗಿರುವ ಕಾರಣ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಪಕ್ಷವು ಬಹುಮತ ಗಳಿಸಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಚಿವ ಸ್ಥಾನ ಮಿಸ್: ಲಕ್ಷ್ಮಣ ಸವದಿ-ಜಗದೀಶ್ ಶೆಟ್ಟರ್ ಭೇಟಿ ಮಾಡಿ ಡಿ ಕೆ ಶಿವಕುಮಾರ್ ಮನ ಓಲೈಕೆ?
ಚುನಾವಣೆಗೂ ಮುನ್ನ ನೀಡಿದ್ದ ಐದು ಭರವಸೆಗಳನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಕ್ಷ ನೀಡಿದ ಭರವಸೆಗಳಿಗೆ ಬದ್ಧವಾಗಿದೆ ಎಂದರು.
ಐದು ಭರವಸೆಗಳ ಪೈಕಿ ಮೂರಾದರೂ ಜಾರಿಯಾದರೆ ಸಂಸತ್ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲುವು ದಾಖಲಿಸಲಿದೆ. ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಮುಂದಿನ ವರ್ಷದ ಚುನಾವಣೆಯಲ್ಲಿ ಆ ಫಲಿತಾಂಶ ವ್ಯತಿರಿಕ್ತವಾಗಲಿದೆ ಎಂದು ಅವರು ಭವಿಷ್ಯ ನುಡಿದರು.