ಎಚ್ ಡಿಕೆ ಕಾಮಾಲೆ ಕಣ್ಣಿಗೆ ನೋಡಿದ್ದು, ಕೇಳಿದ್ದೆಲ್ಲವೂ ಲಂಚದ ವ್ಯವಹಾರಗಳೇ; ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿ: ಸಿಎಂ ವಾಗ್ದಾಳಿ

ನಾನು ಕುಮಾರಸ್ವಾಮಿಯವರ ಮಟ್ಟಕ್ಕೆ ಇಳಿದು ಅವರ ರೀತಿ ಅವರ ಪತ್ನಿ ಮತ್ತು ಮಗನ ಬಗ್ಗೆ ಮಾತನಾಡಲಾರೆ. ಕನಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಾದರೂ ಮಗನಿಗೆ ಬುದ್ದಿ ಹೇಳಿ ರಾಜ್ಯದ ಜನರಿಂದ ಮಗ ಛೀಮಾರಿಗೆ ಈಡಾಗುತ್ತಿರುವುದನ್ನು ತಪ್ಪಿಸಬೇಕೆಂದು ಕೋರುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದರೂ ಜನಸೇವೆಯಿಂದ ಹಿಂದೆ ಸರಿಯದ ಡಾ.ಯತೀಂದ್ರ ಅವರು ವರುಣ ಕ್ಷೇತ್ರದ ಅಭಿವೃದ್ದಿಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರನ್ನು ನೈತಿಕವಾಗಿ ಕುಗ್ಗಿಸುವ ದುರುದ್ದೇಶದಿಂದ  ಎಚ್.ಡಿ ಕುಮಾರಸ್ವಾಮಿ  ಅವರು ಪ್ರತಿನಿತ್ಯ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮ ಪತ್ನಿ ಮತ್ತು ಮಗ ಕೂಡಾ ರಾಜಕೀಯ ಕ್ಷೇತ್ರದಲ್ಲಿದ್ದಾರೆ ಎನ್ನುವುದನ್ನು ಹೆಚ್.ಡಿ.ಕುಮಾರಸ್ವಾಮಿ ಮರೆತಂತಿದೆ. ನಾನು ಕುಮಾರಸ್ವಾಮಿಯವರ ಮಟ್ಟಕ್ಕೆ ಇಳಿದು ಅವರ ರೀತಿ ಅವರ ಪತ್ನಿ ಮತ್ತು ಮಗನ ಬಗ್ಗೆ ಮಾತನಾಡಲಾರೆ. ಕನಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಾದರೂ ಮಗನಿಗೆ ಬುದ್ದಿ ಹೇಳಿ ರಾಜ್ಯದ ಜನರಿಂದ ಮಗ ಛೀಮಾರಿಗೆ ಈಡಾಗುತ್ತಿರುವುದನ್ನು ತಪ್ಪಿಸಬೇಕೆಂದು ಕೋರುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿಯವರು ರಾಜಕೀಯಕ್ಕೆ ಪ್ರವೇಶ ಮಾಡಿದ ದಿನದಿಂದ ನಿರಂತರವಾಗಿ ಕಪೋಲ ಕಲ್ಪಿತ ಆರೋಪಗಳ ಮೂಲಕ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಬಾಯಿಗೆ ಬಂದಂತೆ ಮಾತನಾಡುತ್ತಾ ಬರುತ್ತಿದ್ದುದನ್ನು ರಾಜ್ಯದ ಜನ ಕಂಡಿದ್ದಾರೆ. ಈಗ ತಂದೆಯಾದ ನನಗೆ ನೋವು ಕೊಡಬೇಕೆಂಬ ಏಕೈಕ ದುರುದ್ದೇಶದಿಂದ ಡಾ.ಯತೀಂದ್ರ ಅವರನ್ನು ಗುರಿಯಾಗಿಸಿಕೊಂಡು ಪ್ರತಿನಿತ್ಯ ಸುಳ್ಳು ಆರೋಪಗಳನ್ನು ಹರಿಬಿಡುತ್ತಿರುವುದು ಎಚ್.ಡಿ ಕುಮಾರಸ್ವಾಮಿ  ಅವರ ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಡಾ.ಯತೀಂದ್ರ ಅವರು ಆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಸಿಎಸ್ಆರ್ ಹಣವನ್ನು ಬಳಸಿಕೊಂಡು ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳ ಸುಧಾರಣೆಗೆ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಫಲಾನುಭವಿ ಶಾಲೆಗಳ ಪಟ್ಟಿ ಬಗ್ಗೆ ನನ್ನ ಜೊತೆ ಮಾತನಾಡಿದ್ದರು. ಕ್ಷೇತ್ರದ ಜನರ ಎದುರಿನಲ್ಲಿಯೇ ನಡೆದಿರುವ ಈ ಸಂಭಾಷಣೆಯನ್ನು ವರ್ಗಾವಣೆಗಾಗಿ ವಸೂಲಿ ಎಂಬ ಅರ್ಥ ಬರುವ ಹಾಗೆ ತಿರುಚಿರುವ ಕುಮಾರಸ್ವಾಮಿ ಅವರು ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ ಎಂದಿದ್ದಾರೆ.

ಅಧಿಕಾರ ಇದ್ದಾಗ ಲಂಚ-ಕಮಿಷನ್ ವ್ಯವಹಾರದಲ್ಲಿ ಮೂರುಹೊತ್ತು ಮುಳುಗೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾಮಾಲೆ ಕಣ್ಣಿಗೆ ನೋಡಿದ್ದು, ಕೇಳಿದ್ದೆಲ್ಲದರಲ್ಲಿಯೂ ಲಂಚದ ವ್ಯವಹಾರಗಳೇ ಕಾಣಿಸುತ್ತಿದೆ. ವರುಣ ಕ್ಷೇತ್ರದ ಶಾಲೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ನಡೆದಿರುವ ನನ್ನ ಮತ್ತು ನನ್ನಮಗನ ನಡುವಿನ ಪೋನ್ ಸಂಭಾಷಣೆಗೆ ವರ್ಗವಾವಣೆಯಲ್ಲಿ ವಸೂಲಿಯ ಕತೆ ಕಟ್ಟಿ ಕುಮಾರಸ್ವಾಮಿ ಕುಣಿದಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಈ ಕ್ಷುಲಕ ನಡವಳಿಕೆ ಬಗ್ಗೆ ನಾನು ಕನಿಕರವನ್ನಷ್ಟೇ ವ್ಯಕ್ತಪಡಿಸಬಲ್ಲೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com