ವಿಪಕ್ಷ ನಾಯಕನ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು; ವರಿಷ್ಠರು ಚೇಲಾಗಳ ಮಾತು ಕೇಳಿ ನಿರ್ಧಾರ ಮಾಡಬಾರದು: ಯತ್ನಾಳ್

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಆಯ್ಕೆ ವಿಚಾರವಾಗಿ ಒಳಗೊಳಗೆ ಅಸಮಾಧಾನ ಭುಗಿಲೆದ್ದಿರುವ ಹೊತ್ತಿನಲ್ಲೇ ಬಿಜೆಪಿ ಪಾಳಯದ ಅತೃಪ್ತ ನಾಯಕ, ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Updated on

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಆಯ್ಕೆ ವಿಚಾರವಾಗಿ ಒಳಗೊಳಗೆ ಅಸಮಾಧಾನ ಭುಗಿಲೆದ್ದಿರುವ ಹೊತ್ತಿನಲ್ಲೇ ಬಿಜೆಪಿ ಪಾಳಯದ ಅತೃಪ್ತ ನಾಯಕ, ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ.

ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆ ಇಂದು ಸಂಜೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್  ಅವರನ್ನು ಭೇಟಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್, ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ, ಚುನಾವಣೆಯಲ್ಲಿ ಯಾರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಒಂದು ವರ್ಗದ ಕೇಂದ್ರೀಕೃತವಾಗಿ ಮಾಡಿದ್ದರು ಎಂದು ವಿವರಿಸಿದ್ದೇನೆ. ಅವರಿಗೆ ಎಷ್ಟೋ ವಿಷಯ ಗೊತ್ತಿರಲಿಲ್ಲ, ನಾನು ಧೈರ್ಯದಿಂದ ಎಲ್ಲವನ್ನೂ ಹೇಳಿದ್ದೇನೆ. ನಾವು ಈ ದೇಶದಲ್ಲಿ ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ವರಿಷ್ಠರು ಕೆಲವೇ ಚೇಲಾಗಳ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬಾರದು, ಕೆಲವರು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಾರೆ, ನಾನು ಅಂಜಲ್ಲ ಎಂದು ಹೇಳಿದ್ದೇನೆ. ಇಬ್ಬರೂ ಬಹಳ ಖುಷಿಯಾದರು ಎಂದು ಹೇಳಿದರು.

ನೀವು ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೀರಿ, ಅಧ್ಯಕ್ಷರು ಮತ್ತು ಪ್ರಧಾನಿಗೆ ಹೇಳುತ್ತೇವೆ ಎಂದು ಅವರು ಹೇಳಿದ್ದಾರೆ. ನಿಮ್ಮನ್ನು ಮನೆಗೆ ಕರೆಸುವಷ್ಟು ದೊಡ್ಡ ಮನೆ ನಂದಲ್ಲ ಎಂದು ಹೇಳಿದೆ. ಅದಕ್ಕೆ ನನ್ನ ಮನೆಯೂ ಸಣ್ಣದಿದೆ, ಮುಂದಿನ ಸಲ ನನ್ನ ಮನೆ ತೋರಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು ಎಂದು ತಿಳಿಸಿದರು.

ಯತ್ನಾಳ್‌ನನ್ನು ಖರೀದಿ ಮಾಡಲು ಆಗಲ್ಲ. ನಿನ್ನೆ ಒಬ್ಬ ಏಜೆಂಟ್ ನನ್ನನ್ನು ಖರೀದಿ ಮಾಡಲು ಬಂದಿದ್ದ. ಅಡ್ಜೆಸ್ಟ್ ಮೆಂಟ್ ರಾಜಕಾರಣದ ಬಗ್ಗೆ ಹೇಳಿದ್ದೇನೆ. ವಿಜಯೇಂದ್ರ ನೇಮಕಕ್ಕೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ, ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತೇನೆ. ಅಲ್ಲಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದರು.

ವಿಪಕ್ಷ ನಾಯಕನ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು, ಅದರಲ್ಲಿ ರಾಜಿಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ ಯತ್ನಾಳ್, ದಕ್ಷಿಣ ಕರ್ನಾಟಕದವರೇ ಆಗಬೇಕಾ? ಮಂಗಳೂರು ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರು ಇದ್ದಾರೆ? ಬಹಳಷ್ಟು ಶಾಸಕರು ನಮ್ಮ ಜೊತೆ ಇದ್ದಾರೆ ಆದರೆ ಅವರಿಗೆ ಮಾತಾಡಲು ಧಮ್ ಇಲ್ಲ.

ಅವರಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಬೇಕು ಅಂತಾ ಇದ್ದಾರೆ. ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದೇ ಇದ್ದರೆ ಜನ ತೀರ್ಮಾನ ಮಾಡುತ್ತಾರೆ, ಆಗ ನಾವೂ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com