ಬಿಜೆಪಿ - ಬಿಎಸ್ ಯಡಿಯೂರಪ್ಪ
ಬಿಜೆಪಿ - ಬಿಎಸ್ ಯಡಿಯೂರಪ್ಪ

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ಯಡಿಯೂರಪ್ಪ ಬಣದ ವಿರುದ್ಧ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ!

2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಅಷ್ಟೇನು ಜನಪ್ರಿಯವಲ್ಲದ ಇಬ್ಬರು ನಾಯಕರನ್ನು ಪಕ್ಷದ ಅಧ್ಯಕ್ಷರಾಗಿ ಮತ್ತು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿರುವುದು ಇದೀಗ ಪಕ್ಷದೊಳಗೆ ಅಸಮಧಾನ ಭುಗಿಲೇಳಲು ಕಾರಣವಾಗಿದೆ. 
Published on

ಬೆಳಗಾವಿ: 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಅಷ್ಟೇನು ಜನಪ್ರಿಯವಲ್ಲದ ಇಬ್ಬರು ನಾಯಕರನ್ನು ಪಕ್ಷದ ಅಧ್ಯಕ್ಷರಾಗಿ ಮತ್ತು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿರುವುದು ಇದೀಗ ಪಕ್ಷದೊಳಗೆ ಅಸಮಧಾನ ಭುಗಿಲೇಳಲು ಕಾರಣವಾಗಿದೆ. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿರೋಧಿಸುವ ಗುಂಪಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈಗಾಗಲೇ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ಸೇರಿದಂತೆ ಹಲವರು ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮತ್ತು ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಈ ನಿರ್ಧಾರವು ಸಹಜವಾಗಿಯೇ ಬಿಜೆಪಿ ಹಿರಿಯ ನಾಯಕ ಬಿಎಲ್ ಸಂತೋಷ್ ಹಾಗೂ ಸಂತೋಷ್ ಮತ್ತು ಆರ್‌ಎಸ್‌ಎಸ್‌ಗೆ ಹತ್ತಿರವಾಗಿರುವ ಎಲ್ಲಾ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಶೋಕ್ ಮತ್ತು ವಿಜಯೇಂದ್ರ ಅವರನ್ನು ಪಕ್ಷದ ಉನ್ನತ ಹುದ್ದೆಗೆ ನೇಮಿಸಿರುವ ನಡೆಗೆ ಲಿಂಗಾಯತರ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕ ಭಾಗದ ವಿವಿಧ ವರ್ಗಗಳು ವಿರೋಧ ವ್ಯಕ್ತಪಡಿಸಿವೆ. 

ಬೆಂಗಳೂರು ಮತ್ತು ಶಿವಮೊಗ್ಗದ ನಾಯಕರಿಗೆ ಎರಡೂ ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿ ಉತ್ತರ ಕರ್ನಾಟಕದ ನಾಯಕರಿಗೆ ಅನ್ಯಾಯ ಮಾಡಿದೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಪಂಚಮಸಾಲಿ ನಾಯಕರನ್ನು ನಿರ್ಲಕ್ಷಿಸಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉತ್ತರ ಕರ್ನಾಟಕಕ್ಕೆ ಕನಿಷ್ಠ ಒಂದು ಹುದ್ದೆ ನೀಡಬೇಕಿತ್ತು ಎಂದಿದ್ದಾರೆ.

ಅಶೋಕ್ ಮತ್ತು ವಿಜಯೇಂದ್ರ ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಿರುವುದನ್ನು ವಿರೋಧಿಸಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸಿದರು. ಪಕ್ಷದ ವೀಕ್ಷಕರನ್ನು ಭೇಟಿ ಮಾಡಿದ ಅವರು, ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಸ್ವೀಕರಿಸುತ್ತೇನೆ. ಆದರೆ, ಅವರ ಮಗನನ್ನಲ್ಲ. `ನನಗಿಂತ ಚಿಕ್ಕವನಾದ ವಿಜಯೇಂದ್ರ ಅವರ ಬಳಿ ನಾನು ಹೇಗೆ ಕೆಲಸ ಮಾಡಬೇಕು. ಪಕ್ಷವು ಹಿರಿಯ ನಾಯಕರನ್ನು ಉನ್ನತ ಹುದ್ದೆಗೆ ಪರಿಗಣಿಸಬೇಕಿತ್ತು' ಎಂದು ಹೇಳಿದ್ದಾರೆ.

ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಎಂದೇ ಕರೆಯಲ್ಪಡುವ ಯತ್ನಾಳ್ ಅವರು ಶಾಸಕಾಂಗ ಪಕ್ಷದ ಸಭೆಯಿಂದ ಹೊರಬಂದ ನಂತರ, ಬಿಜೆಪಿ ಒಂದು ಕುಟುಂಬದ ಪಕ್ಷವಾಗುವುದನ್ನು ಪಕ್ಷ ಮತ್ತು ಹಿಂದೂ ಕಾರ್ಯಕರ್ತರು ಒಪ್ಪುವುದಿಲ್ಲ. ಉತ್ತರ ಕರ್ನಾಟಕದ ಜನರು ಯಾವಾಗಲೂ ಬಿಜೆಪಿಗೆ ಬೆಂಬಲ ನೀಡಿ ಮತ ಹಾಕುತ್ತಿದ್ದರು. ಆದರೆ, ದಕ್ಷಿಣ ಕರ್ನಾಟಕದ ನಾಯಕರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗುತ್ತಿದೆ' ಎಂದು ದೂರಿದರು.

ವಿವಿಧ ವೇದಿಕೆಗಳಲ್ಲಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಮಾತನಾಡಿರುವ ಯತ್ನಾಳ್, `ಕೆಲವು ಏಜೆಂಟರು ನನ್ನನ್ನು ಸಂಪರ್ಕಿಸಿ ಮೌನವಾಗಿರುವಂತೆ ಹೇಳಿದರು. ಆದರೆ, ನಾನು ಯಾವುದೇ ಒತ್ತಡ ಮತ್ತು ಬ್ಲ್ಯಾಕ್ ಮೇಲ್ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ಹೇಳಿದ್ದೇನೆ' ಎಂದರು.

ಅಶೋಕ್ ಮತ್ತು ವಿಜಯೇಂದ್ರ ಅವರನ್ನು ಉನ್ನತ ಹುದ್ದೆಗೆ ನೇಮಿಸುವ ಮೂಲಕ ಯಡಿಯೂರಪ್ಪ ಬಣ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದು ಬಿಜೆಪಿಯ ಹಲವು ಶಾಸಕರು ಭಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಲ್ ಸಂತೋಷ್ ಅವರ ನೇತೃತ್ವದಲ್ಲಿ ಪಕ್ಷವು ಸಂಪೂರ್ಣವಾಗಿ ವಿಫಲವಾದ ನಂತರ, ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಳೆದುಹೋದ ತನ್ನ ಸ್ಥಾನವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಯಡಿಯೂರಪ್ಪನವರ ಒತ್ತಡಕ್ಕೆ ಮಣಿಯದೆ ಪಕ್ಷಕ್ಕೆ ಬೇರೆ ದಾರಿ ಕಾಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com