ಕರ್ನಾಟಕದ ತೆರಿಗೆದಾರರ ಹಣದಲ್ಲಿ ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು: ಕಾಂಗ್ರೆಸ್ ಢೋಂಗಿತನ ಕಳಚುತ್ತಿದೆ- ಬಿಜೆಪಿ
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಸಿ.ಎಂ ಸಿದ್ದರಾಮಯ್ಯ ತೆಲಂಗಾಣದಲ್ಲಿ ಮತದಾರರಿಗೆ ಅಮಿಷವೊಡ್ಡುವ ಕಾನೂನುಬಾಹಿರ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಚುನಾವಣೆಗೂ ಮುನ್ನಾ ಸುಳ್ಳು ಹೇಳಿಕೆ ನೀಡಲು ತೆರಿಗೆದಾರರ ಹಣದಿಂದ ಹಾಕಲಾದ ಕಾಂಗ್ರೆಸ್ ಜಾಹಿರಾತುಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಕರ್ನಾಟಕಕ್ಕೆ ಅವಮಾನ ಎಂದು ಟೀಕಾ ಪ್ರಹಾರ ನಡೆಸಿದೆ.
ಮತ್ತೊಂದೆಡೆ ಟ್ವೀಟ್ ಮಾಡಿರುವ ಬಿಜೆಪಿ ಹಿರಿಯ ನಾಯಕ ಅರವಿಂದ್ ಬೆಲ್ಲದ್, ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹೀರಾತು ನೀಡಲು ಪೋಲು ಮಾಡಿದ ಕರ್ನಾಟಕ ಸರ್ಕಾರಕ್ಕೆ ಚುನಾವಣೆ ಆಯೋಗ ಚಾಟಿ ಏಟು ನೀಡಿದೆ. ಗ್ಯಾರಂಟಿಗಳನ್ನು ನೀಡಲಾಗದವರು ಹೊಗಳುಭಟ್ಟರಂತೆ ತಮ್ಮನ್ನು ತಾವು ಪತ್ರಿಕೆಗಳಲ್ಲಿ ಹೊಗಳಿಸಿಕೊಂಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಕಾಂಗ್ರೆಸ್ ಪಕ್ಷದ ಢೋಂಗಿತನ ಕಳಚುತ್ತಿದೆ ಎಂದು ಟೀಕಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ