ಆರು ತಿಂಗಳಲ್ಲಿ ಸರ್ಕಾರ ಪತನ ಹೇಳಿಕೆ: ಹೆಚ್'ಡಿಕೆಗೆ ಕಾಂಗ್ರೆಸ್ ತಿರುಗೇಟು

ಮುಂದಿನ ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದು, ಈ ಹೇಳಿಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.
ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿ
ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿ

ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದು, ಈ ಹೇಳಿಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.

ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ತಮ್ಮದೇ ಪಕ್ಷದ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.

ಆರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂಬ ಹೇಳಿಕೆ ಈ ವಾರದ ಅತ್ಯುತ್ತಮ ಜೋಕ್. ಕುಮಾರಸ್ವಾಮಿ ಅವರು ನಮ್ಮ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸುವುದು ಬಿಟ್ಟು, ಈಗಾಗಲೇ ಜನರ ಮನಸ್ಸಿನಿಂದ ಗೇಟ್‌ಪಾಸ್ ಆಗಿರುವ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಲಿ. ಅಧಿಕಾರವಿಲ್ಲದೆ ಅತೃಪ್ತ ಆತ್ಮವಾಗಿರೋ ಹೆಚ್'ಡಿಕೆ ಹತಾಶೆಯಿಂದ ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ.

ನಮ್ಮ ಸರ್ಕಾರಕ್ಕೆ ರಾಜ್ಯದ ಜನ ನಾವು ನಿರೀಕ್ಷೆ ಮಾಡದಷ್ಟು ಸಂಪೂರ್ಣ ಜನಾದೇಶ ನೀಡಿದ್ದಾರೆ‌.  ನಾವು ಪೂರ್ಣಾವಧಿ ಆಡಳಿತ ನಡೆಸುವುದು ನಿಶ್ಚಿತ. ಇನ್ನೊಬ್ಬರ ಆಸರೆಯಲ್ಲಿ ಸರ್ಕಾರ ರಚಿಸಿಲ್ಲ. ಸ್ವಂತ ಬಲದಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಸರ್ಕಾರ ಬೀಳಲಿದೆ ಎಂಬ ಕನಸು ತಿರುಕನ ಕ‌ನಸಷ್ಟೆ.

ಸ್ಥಾಪಿತ ಸರ್ಕಾರವನ್ನು ಕೆಡವುವ ಕೆಟ್ಟ ಚಾಳಿ ಆರಂಭಿಸಿದ್ದೇ ಬಿಜೆಪಿ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ BJP ಜೊತೆ ಮೈತ್ರಿ ಮಾಡಿಕೊಂಡ ತಕ್ಷಣವೆ ಹೆಚ್'ಡಿಕೆಗೂ ಆ ಚಾಳಿ ಅಂಟಿಕೊಂಡಂತಿದೆ. ಹೀಗಾಗಿ ಸರ್ಕಾರ ಬೀಳಿಸುವ ಮಾತನಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗದ ಮಾತು‌. ಇದು ಕೊನೆಗೆ, ಸಿಗದ ದ್ರಾಕ್ಷಿ ಹುಳಿ ಎಂಬ ನರಿಯ ಕಥೆಯಂತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕರನ್ನು ಭೀತಿಗೊಳಗಾಗುವಂತೆ ಮಾಡಲು ಐಟಿ, ಇಡಿ ಮತ್ತು ಸಿಬಿಐ ಅನ್ನು ಬಳಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರಬಹುದು ಎಂದು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕರನ್ನು ಬೇಟೆಯಾಡಲು ‘ಆಪರೇಷನ್ ಕಮಲ’ ನಡೆಸಲು ಕುಮಾರಸ್ವಾಮಿ ಮತ್ತು ಬಿಜೆಪಿ ಚಿಂತನೆ ನಡೆಸುತ್ತಿದೆ ತಿಳಿಸಿದ್ದಾರೆ.

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಚುನಾಯಿತ ಸರ್ಕಾರಗಳ ದೀರ್ಘಾಯುಷ್ಯದ ಕುರಿತು ಭವಿಷ್ಯ ನುಡಿಯುವುದು ಕುಮಾರಸ್ವಾಮಿ ಅವರಿಗೆ ಹೊಸದೇನಲ್ಲ. ಏಕೆಂದರೆ ಅವರು ಯಾವುದೇ ಸರ್ಕಾರ ಪೂರ್ಣಾವಧಿಯನ್ನು ಬಯಸುವುದೂ ಇಲ್ಲ ಎಂದು ಹೇಳಿದ್ದಾರೆ.

ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿಟಿ ದೇವೇಗೌಡ ಅವರು ಮಾತನಾಡಿ, 2019ರಲ್ಲಿ ತಮ್ಮ ಸರ್ಕಾರ ಪತನಗೊಂಡಿದ್ದ ಹಿನ್ನೆಲೆಯಲ್ಲಿ ಅದು ಕುಮಾರಸ್ವಾಮಿ ಅವರಿಗೆ ನೋವು ತಂದಿದೆ ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com