ಆಪರೇಷನ್ ಹಸ್ತ: ಜೆಡಿಎಸ್'ಗೆ ಡಿಕೆಶಿ ಶಾಕ್, ಹೆಚ್'ಡಿಕೆ ಆಪ್ತ ಶ್ರೀಕಾಂತ್ ಸೇರಿ ಮೂವರು ನಾಯಕರು 'ಕೈ' ಸೇರ್ಪಡೆ!

ಡಿಸಿಎಂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ಮುಂದುವರಿಸಿದ್ದು, ಜೆಡಿಎಸ್ ಪಕ್ಷಕ್ಕೆ ಬುಧವಾರ ಶಾಕ್ ನೀಡಿದ್ದಾರೆ.
ಜೆಡಿಎಸ್ ನಾಯಕರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿದ ಡಿಸಿಎಂ ಡಿಕೆ ಶಿವಕುಮಾರ್.
ಜೆಡಿಎಸ್ ನಾಯಕರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿದ ಡಿಸಿಎಂ ಡಿಕೆ ಶಿವಕುಮಾರ್.

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ಮುಂದುವರಿಸಿದ್ದು, ಜೆಡಿಎಸ್ ಪಕ್ಷಕ್ಕೆ ಬುಧವಾರ ಶಾಕ್ ನೀಡಿದ್ದಾರೆ.

ನಿನ್ನೆಯಷ್ಟೇ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಆಪ್ತ, ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಶಿವಮೊಗ್ಗದ ನಾಗರಾಜ್, ತುಮಕೂರು ಮಾಜಿ ಶಾಸಕ ಎಸ್.ಶಫಿ ಅಹ್ಮದ್ ಸೇರಿ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಎಂ ಶ್ರೀಕಾಂತ್ ಜೊತೆ ಜೆಡಿಎಸ್‌ನ ಕೆಲ ಪದಾಧಿಕಾರಿಗಳು ಕಾಂಗ್ರೆಸ್ ಬಾವುಟ ಹಿಡಿದರು. ಈ ವೇಳೆ ಅವರಿಗೆ ಡಿಕೆ.ಶಿವಕುಮಾರ್ ಸ್ವಾಗತ ಕೋರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಕುಮಾರಣ್ಣ ಮೈತ್ರಿ ಕರ್ನಾಟಕಕ್ಕೆ ಮಾತ್ರ ಎನ್ನುತ್ತಿದ್ದಾರೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇರಳಕ್ಕೆ ಒಂದು ಭಾಗ, ಕರ್ನಾಟಕಕ್ಕೆ ಒಂದು ಭಾಗ ಎಂದು ಹೇಗೆ ಮಾಡುತ್ತಾರೋ?" ಎಂದು ಲೇವಡಿ ಮಾಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಜೆಪಿ ನಾಯಕರೇ ಪತನಗೊಳಿಸಿದ್ದರೂ ಕುಮಾರಸ್ವಾಮಿಯವರು ಇದೀಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆಂದು ಕಿಡಿಕಾರಿದರು.

ಜೆಡಿಎಸ್ ಎನ್‌ಡಿಎಗೆ ಸೇರಿದ ಕಾರಣ, ಕೇರಳ ಸೇರಿದಂತೆ ಇತರೇ ರಾಜ್ಯಗಳ ಜೆಡಿಎಸ್ ಪಕ್ಷದ ನೂರಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಇಂಡಿಯಾಗೆ ಸೇರುತ್ತಿದ್ದಾರೆ. ನಾನು ಕೇವಲ ಪಕ್ಷಕ್ಕೆ ಆಹ್ವಾನ ನೀಡಲು ಬಂದಿಲ್ಲ. ಒಬ್ಬೊಬ್ಬ ನಾಯಕರು, ಕಾರ್ಯಕರ್ತರು ಕನಿಷ್ಠ 10 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ನೀಡಲು ಬಂದಿದ್ದೇನೆ. ಕಾಂಗ್ರೆಸ್ ಪಕ್ಷವೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಎಲ್ಲರೂ ಸೇರಿ ಮತ್ತಷ್ಟು ಪಕ್ಷವನ್ನು ಬಲಪಡಿಸೋಣ" ಎಂದು ಕರೆ ನೀಡಿದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮೀರ್ ಸಾದಿಕ್ (ದೇಶದ್ರೋಹಿ), ಮೈತ್ರಿ ಸರ್ಕಾರ ಬೀಳಲು ಅವರೇ ಕಾರಣ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ಬಳಿಕ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಅವರ ಸಹೋದ್ಯೋಗಿಗಳು ಹಣ ಪಾವತಿಸಿ ಸರ್ಕಾರವನ್ನು ಬೀಳಿಸಲು ಪಿತೂರಿ ನಡೆಸಿದ್ದಾರೆ ಎಂದು ಹೇಳಿದ್ದರು.

ನಿಮ್ಮನ್ನು ಬೆಂಬಲಿಸಿದ 80 ಕಾಂಗ್ರೆಸ್ ಶಾಸಕರ ದಯೆಗೆ ನೀವು ಕೃತಜ್ಞರಾಗಿಲ್ಲವೇ? ಈಗ ಸಿದ್ದರಾಮಯ್ಯನವರನ್ನು ಮೀರ್ ಸಾದಿಕ್ ಎನ್ನುತ್ತಿದ್ದೀರಿ. ನಿಜವಾದ ಮಿರ್ ಸಾದಿಕ್ ಯಾರೆಂಬುದನ್ನು ಜನರು ಅರಿತುಕೊಂಡಿದ್ದಾರೆ. ಮೈತ್ರಿ ಸರ್ಕಾರವನ್ನು ಬೀಳಿಸಲು ಹಗಲು, ರಾತ್ರಿ ಕೆಲಸ ಮಾಡಿದ ಬೆಳಗಾವಿ, ಚನ್ನಪಟ್ಟಣ, ಬೆಂಗಳೂರಿನ ಹಲವು ನಾಯಕರ ಜೊತೆ ಕೈಜೋಡಿಸಿದ್ದೀರಿ, ಇದೀಗ ನಿಮ್ಮ ರಾಜಕೀಯ ಮೌಲ್ಯಗಳು ಏಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಗೆ ಒಕ್ಕಲಿಗ ಸಮುದಾಯದ ಉನ್ನತ ನಾಯಕನ ಆಯ್ಕೆಗೆ ಜಟಾಪಟಿ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಒಕ್ಕಲಿಗ ಸಮುದಾಯದ ನಾಯಕನಲ್ಲ. ನಾನು ಕಾಂಗ್ರೆಸ್ ನಾಯಕ. ನಾನು ಜಾತಿ ರಾಜಕಾರಣಿಯಲ್ಲ, ನೈತಿಕತೆ, ತತ್ವ ಮತ್ತು ಮೌಲ್ಯಗಳ ಮೇಲೆ ರಾಜಕಾರಣ ಮಾಡುವ ರಾಜಕಾರಣಿ ಎಂದರು.

ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್?
ಈ ನಡುವೆ ಕೆಪಿಸಿಸಿ ಕಚೇರಿಯಲ್ಲಿ ಶಿವಮೊಗ್ಗ ಜೆಡಿಎಸ್ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಭಾಗವಹಿಸಿದ್ದರು. ಈ ಬೆಳವಣಿಗೆಯು ಗೀತಾ ಶಿವರಾಜ್ ಕುಮಾರ್ ಅವರು, 2024 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಗೀತಾ ಶಿವರಾಜ್ ಕುಮಾರ್ ಅವರು, 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಅವರ ಕಿರಿಯ ಸಹೋದರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ತೆಕ್ಕೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪತಿ ಕನ್ನಡದ ಮೇರು ನಟ, ಡಾ ರಾಜ್‌ಕುಮಾರ್ ಅವರ ಪುತ್ರ ಶಿವರಾಜ್‌ಕುಮಾರ್ ಅವರೊಂದಿಗೆ ಪಕ್ಷದ ಪರ ಪ್ರಚಾರ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com