ವಕೀಲರು, ಕಾನೂನು ತಜ್ಞರು ಮತ್ತು ನನ್ನ ತಾತ ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೆ ಚರ್ಚಿಸಿ ಮುಂದಿನ ಕ್ರಮ: ಪ್ರಜ್ವಲ್ ರೇವಣ್ಣ
2019ರ ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುವಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಪ್ರಕರಣದಲ್ಲಿ ಹೈಕೋರ್ಟ್ ನ್ಯಾ. ಕೆ. ನಟರಾಜನ್ ಪೀಠ ಸಂಸತ್ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಆದೇಶ ಪ್ರಕಟಿಸಿದೆ.
Published: 02nd September 2023 08:53 AM | Last Updated: 02nd September 2023 01:52 PM | A+A A-

ಪ್ರಜ್ವಲ್ ರೇವಣ್ಣ
ಬೆಂಗಳೂರು/ಹಾಸನ: 2019ರ ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುವಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಪ್ರಕರಣದಲ್ಲಿ ಹೈಕೋರ್ಟ್ ನ್ಯಾ. ಕೆ. ನಟರಾಜನ್ ಪೀಠ ಸಂಸತ್ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಆದೇಶ ಪ್ರಕಟಿಸಿದೆ.
ಹೈಕೋರ್ಟ್ ಆದೇಶ ಪ್ರಕಟಿಸಿದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಪರ ವಕೀಲರು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.ಪ್ರಜ್ವಲ್ ರೇವಣ್ಣ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಒಂದು ತಿಂಗಳು ಕಾಲವಕಾಶವಿದ್ದು, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಬಹುದಾಗಿದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂನಿಂದ ತಡೆ ತರಬಹುದು. ಒಂದು ವೇಳೆ ತಡೆಯಾಜ್ಞೆ ನೀಡದಿದ್ದರೆ ಆಯ್ಕೆ ಅಸಿಂಧು ಆಗಲಿದೆ.
ಪ್ರಜ್ವಲ್ ಮೇಲಿನ ಆರೋಪಗಳು: ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ 265 ಎಕರೆ ಜಮೀನು ಘೋಷಣೆ ಮಾಡಿಲ್ಲ. ಬೇನಾಮಿ ಆಸ್ತಿ ಹೊಂದಿದ್ದಾರೆ, ಆದಾಯ ಮುಚ್ಚಿಟ್ಟಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ಮತದಾನ ಮಾಡಿಸಿದ್ದಾರೆ. ಬೂತ್‌ನಲ್ಲಿ ಕುಳಿತು ಮತ ಹಾಕಿಸಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಸುದೀರ್ಘ 4 ವರ್ಷ ವಿಚಾರಣೆ ನಡೆಸಿದ ಹೈಕೋರ್ಟ್ ಈಗ ತೀರ್ಪು ನೀಡಿದೆ. ಈ ಬಗ್ಗೆ ಶಾಸಕ ಎ ಎಂಜು ಮತ್ತು ದೇವರಾಜೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ. ಯಾರು ಸುಳ್ಳು ಮಾಹಿತಿ ಕೊಡಬಾರದು ಎಂದಿದ್ದಾರೆ. ಕಾನೂನಿಗೆ ತಲೆಬಾಗೋದಾಗಿ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ. ಇದೀಗ ಅನರ್ಹ ಸಂಸದ ಪ್ರಜ್ವಲ್ ರೇವಣ್ಣ ಮುಂದಿನ ಕಾನೂನು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಇದನ್ನೂ ಓದಿ: ಸಂಸತ್ ಸದಸ್ಯತ್ವ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಹೈಕೋರ್ಟ್ ಆದೇಶ
ಮುಂದಿನ ಲೋಕಸಭೆ ಚುನಾವಣಾಗೆ 6 ತಿಂಗಳು ಮಾತ್ರ ಬಾಕಿ ಉಳಿದರೆ ಚುನಾವಣಾ ಆಯೋಗ ಉಪಚುನಾವಣೆ ನಡೆಸಬೇಕಾಗುತ್ತದೆ. ಲೋಕಸಭೆಯ ಅವಧಿಯ 6 ತಿಂಗಳಿಗಿಂತ ಕಡಿಮೆ ಇದ್ದರೆ ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಕೂಡ ಹಾಸನ ಲೋಕಸಭಾ ಚುನಾವಣಾ ಸ್ಥಾನ ಖಾಲಿ ಉಳಿಯುವ ಸಾಧ್ಯತೆ ಇದೆ.
ತೀರ್ಪು ಪ್ರತಿ ಓದಿ ಪ್ರತಿಕ್ರಿಯಿಸುವೆ: ತೀರ್ಪಿನ ಪ್ರತಿಯನ್ನು ಅಧ್ಯಯನ ಮಾಡಿದ ನಂತರವೇ ಪ್ರತಿಕ್ರಿಯಿಸುವುದಾಗಿ ಅನರ್ಹ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್, ವಕೀಲರು ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮವನ್ನು ನಿರ್ಧರಿಸುತ್ತೇನೆ. ಈ ಬಗ್ಗೆ ತಾತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೂ ಚರ್ಚಿಸುತ್ತೇನೆ ಎಂದರು.