ಜೆಡಿಎಸ್ ಫೀನಿಕ್ಸ್ ನಂತೆ ಪುಟಿದೇಳಲಿದೆ, ಪಕ್ಷ ಅಧಿಕಾರಕ್ಕೆ ಬರುವುದನ್ನು ನಾನು ಕಣ್ಣಾರೆ ನೋಡಲಿದ್ದೇನೆ: ಎಚ್.ಡಿ ದೇವೇಗೌಡ

ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಆಸ್ಪತ್ರೆಯಿಂದ ಬಿಡುಗಡೆಯಾದ ಕೆಲ ದಿನಗಳ ನಂತರ ಬುಧವಾರ  ಜೆಡಿಎಸ್‌ನ ಪ್ರಮುಖ ನಾಯಕರ ಸಭೆ ನಡೆಸಿದ್ದಾರೆ. ಕಾವೇರಿ ನೀರಿನ ಸಮಸ್ಯೆ ಹಾಗೂ ಬರಗಾಲದ ಕುರಿತು ಚರ್ಚೆ ನಡೆಸಲಾಗಿದೆ.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
Updated on

ಬೆಂಗಳೂರು: ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಆಸ್ಪತ್ರೆಯಿಂದ ಬಿಡುಗಡೆಯಾದ ಕೆಲ ದಿನಗಳ ನಂತರ ಬುಧವಾರ  ಜೆಡಿಎಸ್‌ನ ಪ್ರಮುಖ ನಾಯಕರ ಸಭೆ ನಡೆಸಿದ್ದಾರೆ. ಕಾವೇರಿ ನೀರಿನ ಸಮಸ್ಯೆ ಹಾಗೂ ಬರಗಾಲದ ಕುರಿತು ಚರ್ಚೆ ನಡೆಸಲಾಗಿದೆ. ಜನಪರ ವಿಚಾರಗಳ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಭಾಗವಹಿಸಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು.

ಜೆ.ಪಿ.ನಗರದಲ್ಲಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ಸಭೆ ನಡೆದಿದ್ದು, ಪಾರ್ಶ್ವವಾಯುವಿಗೆ ಒಳಗಾದ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುವಂತೆ  ವೈದ್ಯರು ಸೂಚಿಸಿದ್ದಾರೆ. ನೋಡಲು ಸುಸ್ತಾಗಿರುವಂತೆ ಕಾಣುತ್ತಿದ್ದ ಕುಮಾರಸ್ವಾಮಿ ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ್, ಕುಪೇಂದ್ರರೆಡ್ಡಿ, ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಎಲ್ಲ ಶಾಸಕರು, ಎಂಎಲ್ಸಿಗಳು, ಮಾಜಿ ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.

ನಂತರ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ  ಪಕ್ಷ ಬಲಿಷ್ಠವಾಗಿದೆ. ಅದನ್ನು ದುರ್ಬಲಗೊಳಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಪಕ್ಷ ಮೊದಲಿನಂತೆ ಅಧಿಕಾರಕ್ಕೆ ಬರಲಿದ್ದು, ಅದನ್ನು ನಾನು ಕಣ್ಣಾರೆ ನೋಡುತ್ತೇನೆ. ಈ ವಯಸ್ಸಿನಲ್ಲೂ ರಾಜ್ಯಾದ್ಯಂತ ಸಂಚರಿಸಲು ಸಿದ್ಧ. ನಾನು ಎಲ್ಲಿಗೆ ಬೇಕಾದರೂ ಬರಲು ಸಿದ್ಧ. ಜನರ ಪರವಾಗಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.

ಮುಂಬರುವ ಲೋಕಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸಲು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಭೆ ನಡೆಸಲು ಪಕ್ಷ ಮುಂದಾಗಿದೆ. ಸೆ.10ರಂದು ಪ್ರಮುಖ ಪದಾಧಿಕಾರಿಗಳ ಸಭೆ ಕರೆಯಲಾಗಿದ್ದು, ಸಭೆ ಯಶಸ್ವಿಗೊಳಿಸಲು ಹಿರಿಯ ಮುಖಂಡರಿಗೆ ಸೂಚನೆ ನೀಡಲಾಗಿದೆ.

ಬಳಿಕ ಕೋರ್ ಕಮಿಟಿ ಸದಸ್ಯರು ರಾಜ್ಯ ಪ್ರವಾಸ ಮಾಡಲಿದ್ದಾರೆ. ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೂ ತೆರಳಿ ಪ್ರಮುಖರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾವೇರಿ ವಿಚಾರವಾಗಿ ಬೃಹತ್ ಆಂದೋಲನ ನಡೆಸಲು ನಾಯಕರು ಮುಂದಾಗಿದ್ದಾರೆ.

ಸಭೆಯ ನಂತರ ಇಬ್ರಾಹಿಂ, ಜಿ.ಟಿ.ದೇವೇಗೌಡ, ಕಾಶೆಂಪೂರ್, ಟಿ.ಎ.ಶರವಣ ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ದೇವೇಗೌಡರ ನೇತೃತ್ವದಲ್ಲಿ ಕಾವೇರಿ ನೀರಿಗಾಗಿ ಪಕ್ಷ ಹೋರಾಟ ನಡೆಸಿದೆ. ಮಂಡ್ಯ ಜಿಲ್ಲೆಯ ನಮ್ಮ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಈ ಸರ್ಕಾರದಿಂದ ಕಾವೇರಿ ಹಿತ ಕಾಪಾಡಲು ಸಾಧ್ಯವಿಲ್ಲ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com