ಮೂವರು ಡಿಸಿಎಂ ಸೃಷ್ಠಿ: ಡಿಕೆಶಿ ಕಟ್ಟಿಹಾಕಲು ಸಿಎಂ ತಂತ್ರವೇ? ರಾಜಣ್ಣ ಬೇಡಿಕೆಯಲ್ಲಿ ತಪ್ಪಿಲ್ಲ ಎಂದ ಪರಮೇಶ್ವರ್!
ಮೂವರು ಉಪಮುಖ್ಯಮಂತ್ರಿಗಳ ಬೇಡಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಕು ಮೂಡಿಸಿದಂತಿದ್ದು, ಹಾಲಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ಹೆಣೆದಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
Published: 18th September 2023 08:40 PM | Last Updated: 18th September 2023 08:43 PM | A+A A-

ಡಿಕೆಶಿ, ರಾಜಣ್ಣ, ಪರಮೇಶ್ವರ್
ಬೆಂಗಳೂರು: ಮೂವರು ಉಪಮುಖ್ಯಮಂತ್ರಿಗಳ ಬೇಡಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಕು ಮೂಡಿಸಿದಂತಿದ್ದು, ಹಾಲಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ಹೆಣೆದಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಸಿದ್ದರಾಮಯ್ಯ ಅವರ ಆಪ್ತರು ಆಗಿರುವ ಸಹಕಾರ ಸಚಿವ ರಾಜಣ್ಣ, ರಾಜ್ಯಕ್ಕೆ ಒಬ್ಬರ ಬದಲು ಮೂವರು ಉಪ ಮುಖ್ಯಮಂತ್ರಿಗಳಾಗಬೇಕು ಎಂದು ಕಳೆದ ವಾರ ಆಗ್ರಹಿಸಿದ್ದರು. ಈ ಸಂಬಂಧ ಪಕ್ಷದ ಹೈಕಮಾಂಡ್ ಭೇಟಿ ಮಾಡಿ ರಾಜ್ಯದಲ್ಲಿ ಆಗಬಹುದಾದ ಬದಲಾವಣೆ ಕುರಿತು ಚರ್ಚಿಸುವುದಾಗಿ ಅವರು ಹೇಳಿಕೆ ನೀಡಿದ್ದರು.
ಈ ಮಧ್ಯೆ ಉಪ ಮುಖ್ಯಮಂತ್ರಿ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಈ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ. ರಾಜಣ್ಣ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ಆ ವಿಷಯವನ್ನು ಹೈಕಮಾಂಡ್‌ಗೆ ಬಿಡೋಣ. ಅದನ್ನು ಅವರು ಪ್ರಶ್ನಿಸಬೇಕು. ನಾನು ಅದನ್ನು ಅವರ ಗಮನಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮೂರು ಡಿಸಿಎಂ ಸ್ಥಾನಕ್ಕೆ ಬೇಡಿಕೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿಎಂ ಸಿದ್ದರಾಮಯ್ಯ
ಮತ್ತೊಂದೆಡೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನನ್ನು ಸಿಎಂ ಸಿದ್ದರಾಮಯ್ಯ ನೇಮಕ ಮಾಡಿದ್ದು, ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಸಿಎಂ ಸೂಕ್ತ ವ್ಯಕ್ತಿ. ರಾಜಣ್ಣ ಏಕೆ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ರಾಜಣ್ಣ ಅವರ ಪ್ರಶ್ನೆಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ. ಇತ್ತೀಚಿಗೆ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ಪಕ್ಷದ ವರಿಷ್ಠರು ಪತ್ರ ಬರೆದಿದ್ದಾರೆ. ರಾಜಣ್ಣ ಅವರ ಹೇಳಿಕೆಯಿಂದ ನನಗೇನೂ ಮುಜುಗರವಿಲ್ಲ ಎಂದರು.
ಒಬ್ಬ ಉಪಮುಖ್ಯಮಂತ್ರಿ ಎಂದು ಪಕ್ಷದ ಹೈಕಮಾಂಡ್ ಹೇಳಿದ ನಂತರವೂ ಮೂವರು ಉಪಮುಖ್ಯಮಂತ್ರಿಗಳ ಪ್ರಸ್ತಾಪ ಏಕೆ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಬ್ಯುಸಿಯಾಗಿದ್ದೇ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.
ಹರಿಪ್ರಸಾದ್ ಹೇಳಿಕೆಗೆ ಮೌನ ವಹಿಸಿರುವ ಕುರಿತು ಪ್ರಶ್ನಿಸಿದಾಗ, ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದು ಮಾಧ್ಯಮಗಳ ಸೃಷ್ಟಿ. ನಾನು ಯಾವತ್ತೂ ಆಂತರಿಕ ರಾಜಕಾರಣವನ್ನು ಬೆಂಬಲಿಸಿಲ್ಲ, ಅಂತಹ ರಾಜಕಾರಣ ನನಗೆ ಬೇಕಿಲ್ಲ ಎಂದರು.