ಮೈತ್ರಿಯಿಂದಾಗಿ ಜೆಡಿಎಸ್, ಬಿಜೆಪಿ ನಾಯಕರು ಕಾಂಗ್ರೆಸ್'ನತ್ತ ಮುಖ ಮಾಡುತ್ತಿದ್ದಾರೆ: ಡಿಕೆ.ಶಿವಕುಮಾರ್
ರಾಜಕೀಯದಲ್ಲಿ ಸಿದ್ಧಾಂತ ಮುಖ್ಯವಲ್ಲ ಎಂಬ ತಪ್ಪು ಸಂದೇಶವನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟ ರವಾನಿಸಿದೆ' ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬುಧವಾರ ಹೇಳಿದರು.
Published: 28th September 2023 09:15 AM | Last Updated: 28th September 2023 03:46 PM | A+A A-

ಡಿಕೆ.ಶಿವಕುಮಾರ್
ಬೆಂಗಳೂರು: ರಾಜಕೀಯದಲ್ಲಿ ಸಿದ್ಧಾಂತ ಮುಖ್ಯವಲ್ಲ ಎಂಬ ತಪ್ಪು ಸಂದೇಶವನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟ ರವಾನಿಸಿದೆ' ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬುಧವಾರ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಂಗಳವಾರ ರಾತ್ರಿ ಮೂರು ಜನ ಮಾಜಿ ಶಾಸಕರ ಜೊತೆ ಮಾತುಕತೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗಲಿದೆ. ನಾವೆಲ್ಲಾ ಜಾತ್ಯತೀತ ಸರ್ಕಾರ ಇರಬೇಕು ಎಂದು ಹೋರಾಟ ಮಾಡಿದೆವು. ಈಗ ಸರ್ಕಾರ ಬೀಳಿಸಿದವರ ಜೊತೆಯಲ್ಲೇ ಕೈ ಜೋಡಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಮುಸ್ಲಿಮರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ನಮ್ಮ ಜಾತ್ಯತೀತ ಸಿದ್ಧಾಂತ ತೆಗೆದುಹಾಕುವುದಿಲ್ಲ: ಹೆಚ್ ಡಿ ದೇವೇಗೌಡ
ಜೆಡಿಎಸ್- ಬಿಜೆಪಿ ಮೈತ್ರಿ ನಂತರ ಕಾಂಗ್ರೆಸ್ ಸೇರುವಂತಹವರ ಸಂಖ್ಯೆ ಹೆಚ್ಚಾಗುತ್ತಿದೆ. ಮೈತ್ರಿಯನ್ನು ವಿರೋಧಿಸಿ ಪಕ್ಷ ತೊರೆದು ಬರುತ್ತಿದ್ದಾರೆ. ನಮಗೆ ಮುಖಂಡರಿಗಿಂತ ಕಾರ್ಯಕರ್ತರು ಬಹಳ ಮುಖ್ಯ, ಶಿವಮೊಗ್ಗ, ರಾಮನಗರ, ಬೆಂಗಳೂರು ನಗರ ಹೀಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ತಂಡೋಪತಂಡವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಮರ್ಥ್ಯವಿರುವ ಅಭ್ಯರ್ಥಿಗಳೆಲ್ಲ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ” ಎಂದು ಹೇಳಿದರು.
ಆಪರೇಷನ್ ಹಸ್ತ ನಾವೆಂದೂ ಮಾಡುವುದಿಲ್ಲ. ನಮ್ಮದು ಕೋ- ಆಪರೇಷನ್ ಎಂದು ಪದೇ ಪದೇ ಹೇಳುತ್ತಿದ್ದೇನೆ. ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸೇರ್ಪಡೆಗೆ ಸೂಚನೆ ನೀಡಿದ್ದೇನೆಂದು ತಿಳಿಸಿದರು.