ಮೈತ್ರಿ ಸಂಬಂಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೊತೆ ಚರ್ಚಿಸಲಾಗಿದೆ: ಎಚ್‌.ಡಿ. ಕುಮಾರಸ್ವಾಮಿ

ಬಿಜೆಪಿ ಜೊತೆಗಿನ ಪಕ್ಷದ ಮೈತ್ರಿಯ ಹಿಂದಿನ ಉದ್ಧೇಶವನ್ನು ಮುಸ್ಲಿಂ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸಿರುವ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಮೈತ್ರಿ ಕುರಿತಾದ ಎಲ್ಲಾ ವಿಚಾರಗಳನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಜೊತೆ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಜೊತೆಗಿನ ಪಕ್ಷದ ಮೈತ್ರಿಯ ಹಿಂದಿನ ಉದ್ಧೇಶವನ್ನು ಮುಸ್ಲಿಂ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸಿರುವ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಮೈತ್ರಿ ಕುರಿತಾದ ಎಲ್ಲಾ ವಿಚಾರಗಳನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಜೊತೆ ಚರ್ಚಿಸಲಾಗಿದೆ. ಮೈತ್ರಿ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಇಬ್ರಾಹಿಂ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಹಲವು ಮುಸ್ಲಿಂ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೈತ್ರಿ ಘೋಷಣೆಯ ನಂತರ ಇಬ್ರಾಹಿಂ ಅವರು ನಮ್ಮನ್ನು ಸಂಪರ್ಕಿಸಿಲ್ಲ ಎಂದರು.

ಯಾರಿಗೂ ಅಗೌರವ ತೋರಬಾರದು ಎಂದು ಕೆಲ ವಿಚಾರಗಳನ್ನು ಮುಚ್ಚಿಟ್ಟಿದ್ದೇವೆ. ನಮ್ಮ ಪಕ್ಷದ ಉಳಿವು ಮತ್ತು ದೇಶದಲ್ಲಿನ ಘಟನೆಗಳು, ಇವತ್ತಿನ ಅವಶ್ಯಕತೆಗೆ ತಕ್ಕಂತೆ ನಾವು ತೀರ್ಮಾನ ಮಾಡಿದ್ದೇವೆ. ಮೈತ್ರಿಯಿಂದ ನಷ್ಟದ ಪ್ರಶ್ನೆಯೇ ಇಲ್ಲ. ಇನ್ನು ಹೆಚ್ಚಿನ ಶಕ್ತಿ ಬರಲಿದೆ. ಯಾರು ಕೂಡ ಪಕ್ಷಕ್ಕೆ ರಾಜೀನಾಮೆ ಕೊಡುವುದಿಲ್ಲ. ಕೆಲ ಕಾರ್ಯಕರ್ತರು ರಾಜೀನಾಮೆ ನೀಡಿರಬಹುದು ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಮುಸ್ಲಿಂ ಮತಗಳಿಂದ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಆ ಸಮುದಾಯ ಪ್ರಬಲವಾಗಿದ್ದರೂ, ನನಗೆ ಮತ ಹಾಕಿಲ್ಲ ಎಂದರು.

ನೈಸ್ ಸಂಸ್ಥೆಯಿಂದ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ವಾಪಸ್ ನೀಡದಿದ್ದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತ ಸಂಘಟನೆಗಳು ಮತ್ತು ರೈತರೊಂದಿಗಿನ ಸಭೆ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ, 'ಯೋಜನೆಗೆ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಹೆಚ್ಚುವರಿ ಭೂಮಿಯನ್ನು ಹಿಂದಿರುಗಿಸಲು ಸರ್ಕಾರ ವಿಫಲವಾದರೆ, ನಾವು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಕಂಡುಬಂದ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ' ಎಂದು ಎಚ್ಚರಿಸಿದರು.

ಕಾವೇರಿ ನದಿ ನೀರು ವಿವಾದ ಇತ್ಯರ್ಥವಾದ ನಂತರ ನೈಸ್ ವಿರುದ್ಧದ ಹೋರಾಟಕ್ಕೆ ಇಳಿಯುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಜನವಾದಿ ಮಹಿಳಾ ಸಂಘಟನೆಯ ಪ್ರತಿನಿಧಿಗಳು ಸೇರಿದಂತೆ ಹಲವಾರು ರೈತ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com