ಕೊಪ್ಪಳ ಲೋಕಸಭಾ ಕ್ಷೇತ್ರ: ಸಂಧಾನ ಯಶಸ್ವಿ; ತಣ್ಣಗಾದ ಕರಡಿ ಸಂಗಣ್ಣ; ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ!

ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಅವರು ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ.
ಸಂಗಣ್ಣ ಕರಡಿ
ಸಂಗಣ್ಣ ಕರಡಿ

ಕೊಪ್ಪಳ: ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಅವರು ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ.

ಸದ್ಯಕ್ಕೆ ಕಾಂಗ್ರೆಸ್ ಸೇರುವ ಯೋಚನೆ ಕೈ ಬಿಟ್ಟಿರುವ ಕರಡಿ ಸಂಗಣ್ಣ ಕಾಂಗ್ರೆಸ್ ಸೇರುವುದಿಲ್ಲ, ಬಿಜೆಪಿಯಲ್ಲೇ ಮುಂದುವರಿಯಲಿದ್ದಾರೆ. ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದ ಅವರ ಬೆಂಬಲಿಗರು ಕೊಪ್ಪಳ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅವರ ಹಿಂಬಾಲಕರು ಶಕ್ತಿ ಪ್ರದರ್ಶನ ಮಾಡಲು ದೊಡ್ಡ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಂಗಣ್ಣ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದರು.

ಕೊಪ್ಪಳದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖ ನಾಯಕರಲ್ಲಿ ಸಂಗಣ್ಣ ಕೂಡ ಒಬ್ಬರು. 2014 ಮತ್ತು 2019ರಲ್ಲಿ ಎರಡು ಬಾರಿ ಕೊಪ್ಪಳದಿಂದ ಸಂಸದರಾಗಿದ್ದರು, ಈ ಬಾರಿಯೂ ಸಂಗಣ್ಣ ಅವರಿಗೆ ಎಂಪಿ ಟಿಕೆಟ್ ಸಿಗುತ್ತದೆ ಎಂದು ಕೊಪ್ಪಳದ ಎಲ್ಲಾ ಬಿಜೆಪಿ ನಾಯಕರು ಹಾಗೂ ಸಂಗಣ ಬೆಂಬಲಿಗರು ವಿಶ್ವಾಸದಿಂದಿದ್ದರು, ಆದರೆ ಕೊಪ್ಪಳ ಮೂಲದ ವೈದ್ಯ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿದೆ.

ಸಂಗಣ್ಣ ಕರಡಿ
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿದ ಸಂಗಣ್ಣ ಕರಡಿ; ಬಿಜೆಪಿ ವಿರುದ್ಧ ಅಸಮಾಧಾನ

ಸೋಮವಾರ ಸಂಜೆಯಿಂದ ಕುಷ್ಟಗಿಯಲ್ಲೂ ಸಂಗಣ್ಣ ಕ್ಯಾವಟರ್ ಪರ ಪ್ರಚಾರ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿಗಾಗಿ ಸಂಗಣ್ಣ ಬಿಜೆಪಿಯಲ್ಲೇ ಮುಂದುವರಿಯಲಿದ್ದಾರೆ ಎಂದು ಸಂಗಣ್ಣ ಅವರ ಬೆಂಬಲಿಗರು ಹೇಳಿದ್ದಾರೆ. ಸಂಗಣ್ಣ ಅವರ ಅನುಯಾಯಿಗಳು ಸ್ಪರ್ಧಿಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು, ಆದರೆ ಸದ್ಯಕ್ಕೆ ಅದು ಸಾಧ್ಯವಿಲ್ಲ ಎಂದು ಸಂಗಣ್ಣ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ.

ಸಂಗಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಹಲವು ವದಂತಿಗಳು ಹರಿದಾಡಿದ್ದು, ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿತ್ತು. ಸಂಗಣ್ಣ ಅವರ ಮುಂದಿನ ನಡೆ ಬಗ್ಗೆ ಮತದಾರರೂ ಗೊಂದಲಕ್ಕೀಡಾಗಿದ್ದರು. ಕಳೆದ ವಾರ ಸಂಗಣ್ಣ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಎಲ್ಲದಕ್ಕೂ ತೆರೆ ಎಳೆದಿರುವ ಕರಡಿ ಸಂಗಣ್ಣ ನಾನು ಪ್ರಚಾರ ಆರಂಭಿಸಿದ್ದು, ಮೋದಿ ಗೆಲುವಿಗೆ ಬಿಜೆಪಿಗೆ ಮತ ನೀಡಿ ಎಂದು ಹೇಳುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com