'ಒಕ್ಕಲಿಗರು ದಡ್ಡರಲ್ಲ, ಸ್ವಾಮೀಜಿಗಳು ಯಾರ ಪರವೂ ಅಲ್ಲ, ಪರ್ಯಾಯ ಮಠ ಸೃಷ್ಟಿಸಿದ್ದೇ HD Kumaraswamy': ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿ NDA ಮೈತ್ರಿ ಅಭ್ಯರ್ಥಿದಗಳು ಒಕ್ಕಲಿಗ ಸಮುದಾಯದ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ KPCC ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಶ್ರೀಗಳು ಯಾರ ಪರವೂ ಅಲ್ಲ ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಬೆಂಗಳೂರಿನಲ್ಲಿ NDA ಮೈತ್ರಿ ಅಭ್ಯರ್ಥಿದಗಳು ಒಕ್ಕಲಿಗ ಸಮುದಾಯದ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ KPCC ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಶ್ರೀಗಳು ಯಾರ ಪರವೂ ಅಲ್ಲ ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಅತ್ತ ಬಿಜೆಪಿ ನಾಯಕರು ಒಕ್ಕಲಿಗ ಸ್ವಾಮೀಜಿಯ ಭೇಟಿ ಮಾಡುತ್ತಲೇ ಇತ್ತ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, 'ಶ್ರೀಗಳು ಯಾರ ಪರವೂ ಇಲ್ಲ, ಮಠಕ್ಕೆ ಬಂದ ಪ್ರತೀಯೊಬ್ಬರಿಗೂ ವಿಭೂತಿ ಇಟ್ಟು ಆಶೀರ್ವದಿಸಿ ಕಳುಹಿಸುತ್ತಾರೆ. ಬಿಜೆಪಿಗರ ನಾಟಕವನ್ನು ಜನ ನೋಡುತ್ತಿದ್ದಾರೆ. ನಮ್ಮ ಸಮಾಜದ ಜನರು ಏನ್ ಗಮನಿಸಬೇಕೋ ಅದನ್ನ ಗಮನಿಸ್ತಿದ್ದಾರೆ. ಇದೇ ಕುಮಾರಸ್ವಾಮಿಯವರನ್ನು ಸಿಎಂ ಸ್ಥಾನದಿಂದ ಬಿಜೆಪಿಯವರೇ ಇಳಿಸಿದ್ರು. ಈಗ ಅವರ ಜೊತೆಗೇ ಆಶೀರ್ವಾದ ಪಡೆಯಲು ಹೋಗಿದ್ದಾರೆ ಎಂದರು.

ಒಕ್ಕಲಿಗರು, ಸಮಾಜದ ಸ್ವಾಮೀಜಿಗಳು ದಡ್ಡರಲ್ಲ

'ಅವರು ಮಠಕ್ಕೆ ಹೋಗಿ ಸ್ವಾಮೀಜಿಯನ್ನು ಭೇಟಿ ಮಾಡುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಒಕ್ಕಲಿಗರು ಮತ್ತು ಸಮುದಾಯದ ಜನರು ಮೂರ್ಖರಲ್ಲ. ಶ್ರೀಗಳು ಯಾರೇ ಮಠಕ್ಕೆ ಬಂದರೂ ಅವರನ್ನು ಆಶೀರ್ವದಿಸಿ ಕಳುಹಿಸುತ್ತಾರೆ. ಈ ಹಿಂದೆ ನಮ್ಮ ಅಭ್ಯರ್ಥಿಗಳೂ ಕೂಡ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಶ್ರೀಗಳು ಮಠಕ್ಕೆ ಬರುವ ಪ್ರತೀಯೊಬ್ಬರಿಗೂ ಆಶೀರ್ವಾದ ನೀಡುತ್ತಾರೆ. ಒಕ್ಕಲಿಗರು ಮತ್ತು ಸ್ವಾಮೀಜಿಗಳು ದಡ್ಡರಲ್ಲ. ಸ್ವಾಮೀಜಿಗಳ ಬಳಿ ಬರುವವರಿಗೆ ವಿಭೂತಿ, ಹೂವಿನ ಹಾರ ಹಾಕಿ ಕಳಿಸುತ್ತಾರೆ. ಅವರು ನಮ್ಮ ಪರ, ಅವರ ಪರ ಇಬ್ಬರ ಪರವೂ ಮಾಡುವುದಿಲ್ಲ. ಸ್ವಾಮೀಜಿಗಳು ಬುದ್ಧಿವಂತರು ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಡಿಕೆ ಶಿವಕುಮಾರ್
ಕಾಂಗ್ರೆಸ್ 'ಒಕ್ಕಲಿಗ' ಅಸ್ತ್ರಕ್ಕೆ BJP ಟಕ್ಕರ್; NDA ಅಭ್ಯರ್ಥಿಗಳಿಂದ ನಿರ್ಮಲಾನಂದ ಶ್ರೀ ಭೇಟಿ!

ಪರ್ಯಾಯ ಮಠ ಸೃಷ್ಟಿಸಿದ್ದೇ ಕುಮಾರಸ್ವಾಮಿ

ಕುಮಾರಸ್ವಾಮಿ ಅವರು ಯಾರನ್ನ ಟೀಕೆ ಮಾಡಿಲ್ಲ ಹೇಳಿ. ಪ್ರಣಾಳಿಕೆ ಬಿಡಿ, ಕುಮಾರಸ್ವಾಮಿ ಅವರು ನಮ್ಮ ಪ್ರತಿ ವಿಚಾರವನ್ನು ಟೀಕೆ ಮಾಡುತ್ತಾರೆ. ಮೇಕೆದಾಟು ಪಾದಯಾತ್ರೆ ಟೀಕೆ ಮಾಡಿದ್ದವರು ಈಗ ಮೇಕೆದಾಟು ಯೋಜನೆ ಜಾರಿಗೆ ಶಪಥ ಮಾಡುವುದಾಗಿ ಹೇಳಿದ್ದಾರೆ. ಅವರು ಮಠದ ಸ್ವಾಮೀಗಳನ್ನೂ ಬಿಟ್ಟಿಲ್ಲ. ಎರಡು ಮಠ ಮಾಡಿದ್ದಾರೆ. ಜನತಾದಳದವರು ಮಠವನ್ನು ಇಬ್ಭಾಗ ಮಾಡಿರುವ ಬಗ್ಗೆ ಸ್ವಾಮೀಜಿಗಳಿಗೆ ಅರಿವಿದೆ. ಈಗ ದಿನಬೆಳಗಾದರೆ ಮಠಕ್ಕೆ ಹೋಗಿ ಭೇಟಿ ಮಾಡುತ್ತಾರೆ. ಅವರು ತಮ್ಮ ಮಾತಿಗೆ ಎಂದಿಗೂ ಬದ್ಧರಾಗಿರುವುದಿಲ್ಲ. ಹೀಗಾಗಿ ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಡಿಕೆ ಶಿವಕುಮಾರ್
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ವಿಚಲಿತ: ಆದಿ ಚುಂಚನಗಿರಿ ಮಠಕ್ಕೆ ಸಿಎಂ ಭೇಟಿ; ಕಾಂಗ್ರೆಸ್ ನಾಯಕರಿಂದ ಒಕ್ಕಲಿಗ ಮಂತ್ರ ಜಪ!

ನಮ್ಮ ಜನ ಕೂಡ ಇದನ್ನು ಗಮನಿಸುತ್ತಾರೆ. ಮೈತ್ರಿ ಸರ್ಕಾರ ಪತನವಾದ ಬಳಿಕ ನಮ್ಮ ಸಮಾಜದ ಸಿಎಂರನ್ನು ಇಳಿಸಿ ಬಿಟ್ಟಿರಲ್ಲ ಎಂದು ಸ್ವಾಮೀಜಿಗಳು ಬಿಜೆಪಿಯರನ್ನು ಪ್ರಶ್ನಿಸಬಹುದಿತ್ತಲ್ಲವೇ? ಇದನ್ನು ಕೇಳುವ ಶಕ್ತಿ ಸ್ವಾಮೀಜಿಗಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರನ್ನೇ ಇಂದು ಸ್ವಾಮೀಜಿಯವರ ಬಳಿ ಕರೆದುಕೊಂಡು ಹೋಗಿ ಆಶೀರ್ವಾದ ಪಡೆಯುತ್ತಿದ್ದಾರಲ್ಲವೇ? ಎಂಟು ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನಾನು ಡಿಸಿಎಂ ಮತ್ತು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾವೆಲ್ಲಾ ಸಮಾಜದ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ತಯಾರಿದ್ದೇವೆ. ಭವಿಷ್ಯದ ಬಗೆಗಿನ ಮಾತುಗಳು ನಮಗೆ ಏಕೆ? ನಮ್ಮ ಸಮಾಜದವರು ದಡ್ಡರಲ್ಲ ಎಂದರು.

ಮೇಕೆದಾಟುಗಾಗಿ ನಾನು ಪಾದಯಾತ್ರೆ ಮಾಡಿದ್ದು ನಿಜವಲ್ಲವೇ?

ಅವರು ಏನಾದರೂ ಹೇಳಿಕೊಳ್ಳಲಿ. ಜನಕ್ಕೆ ಎಲ್ಲವೂ ಗೊತ್ತಿದೆ. ನಾನು ಪಾದಯಾತ್ರೆ ಮಾಡಿದ್ದೇನೆ ತಾನೆ, ಅವರು ಮಾಡಲಿ. ನಾನು ಕುಡಿದು ತೂರಾಡಿದ್ದೇನೆಯೇ? ನಾನು ಪಾದಯಾತ್ರೆಯಲ್ಲಿ ನಡೆದು ಸುಸ್ತಾಗಿ ತೂರಾಡಿದ್ದೇನೆ. ಕುಮಾರಸ್ವಾಮಿ ಅವರು ಅಲ್ಲಿ ನಡೆದಿದ್ದರೆ ಅವರಿಗೆ ಗೊತ್ತಾಗುತ್ತಿತ್ತು. ಈ ನಾಡು, ಕಾವೇರಿ ಜಲಾನಯನ ಪ್ರದೇಶದ ಜನರಿಗಾಗಿ ಈ ಹೋರಾಟ ಮಾಡಿದ್ದೇನೆ. ನಾನು ಈ ವಿಚಾರದಲ್ಲಿ ಅವರಿಗೆ ಸವಾಲು ಹಾಕುವುದಿಲ್ಲ. ನಾನು ಸವಾಲು ಹಾಕಿ ಅವರ ಆರೋಗ್ಯ ಹೆಚ್ಚುಕಮ್ಮಿ ಆದರೆ ನಾನು ಜವಾಬ್ದಾರಿ ತೆಗುಕೊಳ್ಳುವುದಿಲ್ಲ. ಅವರು ಧೈರ್ಯವಾಗಿ ಚುನಾವಣೆ ಮಾಡುತ್ತಿದ್ದಾರೆ ಅದಕ್ಕೆ ಶುಭ ಕೋರುತ್ತೇನೆ ಎಂದರು.

ಮಾಧ್ಯಮದವರು ಸಹ ವಸ್ತುನಿಷ್ಠವಾಗಿ ವರದಿ ಮಾಡುತ್ತಿಲ್ಲ

"ದೇವೇಗೌಡರು ನಾಲ್ಕು ಸೀಟ್ ಬಗ್ಗೆ ಹೇಳುತ್ತಾ ಇದ್ದಾರೆ. ಆದರೆ ಅವರು ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ. ಬಿಜೆಪಿಯ ಸೀಟನ್ನು ಜೆಡಿಎಸ್ ಸೀಟ್ ಎಂದು ಹೇಳುತ್ತಿದ್ದಾರೆ. ಮಂಜುನಾಥ್ ಅವರು ಈ ತೀರ್ಮಾನ ನನ್ನದಲ್ಲ ಅವರಿಬ್ಬರದೇ ಎಂದಿದ್ದಾರೆ. ಜೆಡಿಎಸ್ ನಾಲ್ಕು ಸ್ಥಾನ ಗೆಲ್ಲುತ್ತದೆ ಎಂದು ಹೇಳುತ್ತಿದ್ದ ತಜ್ಞರು ಮತ್ತು ಮಾಧ್ಯಮದವರು ಏಕೆ ಈ ಬಗ್ಗೆ ಮಾತನಾಡುತ್ತಿಲ್ಲ?. ಮಾಧ್ಯಮದವರು ಸಹ ವಸ್ತುನಿಷ್ಠವಾಗಿ ವರದಿ ಮಾಡುತ್ತಿಲ್ಲ. ಇದನ್ನು ನಿಷ್ಠುರವಾಗಿ ಹೇಳುತ್ತಿದ್ದೇನೆ ಹಾಗೂ ಬಹಳ ತಾಳ್ಮೆಯಿಂದ ಗಮನಿಸುತ್ತಿದ್ದೇನೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com