'ಮೋದಿ ಕಾರ್ಯಕ್ರಮಕ್ಕೆ ಬರಲ್ಲ': BSY ಮನವಿ ತಿರಸ್ಕರಿಸಿದ ಶ್ರೀನಿವಾಸ್ ಪ್ರಸಾದ್

ಲೋಕಸಭಾ ಚುನಾವಣೆ ನಿಮಿತ್ತ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾವು ಹಾಜರಾಗುವುದಿಲ್ಲ ಎಂದು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಶ್ರೀನಿವಾಸ ಪ್ರಸಾದ್ ಭೇಟಿ ಮಾಡಿದ ಯಡಿಯೂರಪ್ಪ
ಶ್ರೀನಿವಾಸ ಪ್ರಸಾದ್ ಭೇಟಿ ಮಾಡಿದ ಯಡಿಯೂರಪ್ಪ

ಮೈಸೂರು: ಲೋಕಸಭಾ ಚುನಾವಣೆ ನಿಮಿತ್ತ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾವು ಹಾಜರಾಗುವುದಿಲ್ಲ ಎಂದು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಇಂದು ಮೈಸೂರಿನ ಜಯಲಕ್ಷ್ಮಿಪುರಂನ ನಿವಾಸಕ್ಕೆ ಭಾನುವಾರ ಆಗಮಿಸಿದ ಬಿಎಸ್ ಯಡಿಯೂರಪ್ಪ (BS Yediyurappa) ಶ್ರೀನಿವಾಸ್ ಪ್ರಸಾದ್ (Srinivas Prasad) ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, 'ಕೈ ಮುಗಿತೀನಿ ಆಗೋದಿಲ್ಲ. ನನಗೆ ಆರೋಗ್ಯ ಸ್ಪಂದಿಸಲ್ಲ. ನಾನು ಬಿಜೆಪಿಯಿಂದಲೇ ನಿವೃತ್ತಿ ಆಗಿದ್ದೇನೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿಲ್ಲ ಎಂದರು. ಆಗ ಬಿಎಸ್‌ವೈ, ಪ್ರಧಾನಿ ಬರ್ತಿದ್ದಾರೆ ಬನ್ನಿ ಎಂದು ಮನವಿ ಮಾಡಿದರು.

ಶ್ರೀನಿವಾಸ ಪ್ರಸಾದ್ ಭೇಟಿ ಮಾಡಿದ ಯಡಿಯೂರಪ್ಪ
ಮೋದಿ ಸಮಾವೇಶಕ್ಕೆ ಆಹ್ವಾನ ಬಂದಿಲ್ಲ, ನಾನು ಹೋಗಲ್ಲ: ಸಿಎಂ ಭೇಟಿ ಬಳಿಕ ಶ್ರೀನಿವಾಸ್ ಪ್ರಸಾದ್ ಹೇಳಿಕೆ; ಬಿಜೆಪಿಯಲ್ಲಿ ತಳಮಳ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, 'ಮೋದಿ ಕಾರ್ಯಕ್ರಮಕ್ಕೆ ಬರಲು ಪ್ರಸಾದ್ ಒಪ್ಪಿಕೊಂಡಿದ್ದಾರೆ. ನಮ್ಮ ಸಂಸತ್ ಸದಸ್ಯರು ಬಹಳ ಹಿರಿಯವರು. ಮೋದಿ ಅವರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿರುವ ನಾಯಕರು. ನಾನು ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಮೋದಿ ಭೇಟಿ ಮಾಡಿ ಐದು ನಿಮಿಷ ಇದ್ದು ಹೋಗಿ ಎಂದು ಕೇಳಿಕೊಂಡಿದ್ದೇನೆ. ಈಗ ಅವರು ಬರಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಚಿರಋಣಿಯಾಗಿದ್ದೇನೆ ಎಂದು ತಿಳಿಸಿದರು.

ನಾನು ಬಿಜೆಪಿಯಿಂದಲೇ ನಿವೃತ್ತಿ ಆಗಿದ್ದೇನೆ. ಹೋದ ತಿಂಗಳು ದೊಡ್ಡ ಕಾರ್ಯಕ್ರಮ ಮಾಡಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದೇನೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಬಹಳಷ್ಟು ಚುನಾವಣೆ ಎದುರಿಸಿದ್ದೇನೆ. ಸಾಕಾಗಿದೆ. ಜರ್ಜರಿತನಾಗಿದ್ದೇನೆ. ಆರೋಗ್ಯವೂ ಸರಿ ಇಲ್ಲ. ಸ್ವಲ್ಪ ದೂರವೂ ನಡೆಯಲಾಗುವುದಿಲ್ಲ. ನಿಮ್ಮ ಮೇಲೆ ಗೌರವವಿದೆ. ನೀವು ಬಂದಿದ್ದು ಬಹಳ ಸಂತೋಷವಾಯಿತು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

ಬಿಎಸ್ ವೈ ತೆರಳುತ್ತಿದ್ದಂತೆಯೇ ಕಾರ್ಯಕ್ರಮಕ್ಕೆ ಬರಲ್ಲ ಎಂದ ಶ್ರೀನಿವಾಸ್ ಪ್ರಸಾದ್

ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗಿದ್ದೇನೆ. ಹಾಗಾಗಿ ಸಮಾವೇಶದಲ್ಲಿ ಭಾಗಿಯಾಗುವುದಿಲ್ಲ. ಮೋದಿ ಜಾಗತಿಕ ನಾಯಕರು. ಅವರ ಜೊತೆ ಐದು ವರ್ಷ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ಮೋದಿ ನಾನು ಕಂಡ ಅತ್ಯಂತ ಒಳ್ಳೆಯ ಪ್ರಧಾನ ಮಂತ್ರಿ. ಮೋದಿ, ಬಿಜೆಪಿ ವಿರುದ್ಧ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದರು.

ಶ್ರೀನಿವಾಸ ಪ್ರಸಾದ್ ಭೇಟಿ ಮಾಡಿದ ಯಡಿಯೂರಪ್ಪ
ಬಿಜೆಪಿಗೆ ಮತ್ತೊಂದು ಶಾಕ್; ಸಂಸದ ಶ್ರೀನಿವಾಸ್ ಪ್ರಸಾದ್ ಸಹೋದರ ಕಾಂಗ್ರೆಸ್ ಸೇರ್ಪಡೆ

ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದಾರೆ. ಮನೆಗೆ ಬಂದಿದ್ದಾರೆ, ಮನೆಗೆ ಬಂದವರನ್ನ ಸೌಜನ್ಯದಿಂದ ಬರಮಾಡಿಕೊಳ್ಳುವುದು ಕರ್ತವ್ಯ. ಕಾರ್ಯಕ್ರಮಕ್ಕೆ ಬರುವಂತೆ ಯಡಿಯೂರಪ್ಪ ಕರೆದಿದ್ದಾರೆ. ಕಡಾ ಖಂಡಿತವಾಗಿ ಬರಲು ಆಗಲ್ಲ ಅಂತ ಹೇಳಲು ಆಗಲ್ಲ. ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಸಾದ್ ಅವರನ್ನು ಭೇಟಿಯಾಗುತ್ತಿರುವುದು ಸಹಜವಾಗಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com