'ದೆಹಲಿಯಲ್ಲಿ ಎಲ್ಲವೂ ತೀರ್ಮಾನ ಆಗಿದೆ, ಆ ಬಗ್ಗೆ ಚರ್ಚೆಗಳು ಬೇಡ': ಡಿ ಕೆ ಶಿವಕುಮಾರ್ ಮಾತಿನ ಅರ್ಥವೇನು?

ಮೈಸೂರಿನಲ್ಲಿ ನಡೆದ ಮೈಸೂರು-ಕೊಡಗು ಜಿಲ್ಲಾ ಒಕ್ಕಲಿಗ ಜನಾಂಗದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ ಕೆ ಶಿವಕುಮಾರ್, ಈ ಭಾಗದಲ್ಲಿ ನಮ್ಮ ಸಮಾಜದವರಿಗೆ ಸ್ವಲ್ಪ ಸಮಸ್ಯೆ ಆಗಿರುವುದು ನಿಜ ಎಂದರು.
ಮೈಸೂರಿನಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್
ಮೈಸೂರಿನಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್

ಮೈಸೂರು: ಡಿಸಿಎಂ ಡಿ ಕೆ ಶಿವಕುಮಾರ್ ಹೋದಲ್ಲೆಲ್ಲ ಅವರ ಅಭಿಮಾನಿಗಳು, ಹಿತೈಷಿಗಳು ಮುಂದಿನ ಸಿಎಂ ಎಂದು ಜೈಕಾರ ಹಾಕುವುದುಂಟು. ಸಿಎಂ ಆಗುವ ಆಸೆಯನ್ನು ಸ್ವತಃ ಡಿ ಕೆ ಶಿವಕುಮಾರ್ ಕೂಡ ಆಗಾಗ ತೋರ್ಪಡಿಸಿಕೊಳ್ಳುತ್ತಿರುತ್ತಾರೆ.

ನಿನ್ನೆ ಮೈಸೂರಿನಲ್ಲಿ ನಡೆದ ಮೈಸೂರು-ಕೊಡಗು ಜಿಲ್ಲಾ ಒಕ್ಕಲಿಗ ಜನಾಂಗದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ ಕೆ ಶಿವಕುಮಾರ್, ಮೈಸೂರು ಭಾಗದಲ್ಲಿ ನಮ್ಮ ಸಮಾಜದವರಿಗೆ ಸ್ವಲ್ಪ ಸಮಸ್ಯೆ ಆಗಿರುವುದು ನಿಜ. ಈಗ ಸಚಿವ ವೆಂಕಟೇಶ್, ಹರೀಶ್ ಗೌಡ ಮುಂದಾಳತ್ವ ವಹಿಸಿದ್ದಾರೆ. ನಾನು ನಿಮ್ಮೂರಿನ ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ. ನೀವು ತಲೆಕೆಡಿಸಿಕೊಳ್ಳಲು ಹೋಗಬೇಡಿ, ಸ್ವಲ್ಪ ದಿನ ಕಾಯಿರಿ ಎಂದು ಸ್ಥಳೀಯ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ.

ಚೆಲುವರಾಯಸ್ವಾಮಿ, ಕೃಷ್ಣ ಭೈರೇಗೌಡ ನನ್ನ ಬಳಿ ಚರ್ಚಿಸಿದ್ದರು. ಈ ಭಾಗದ ನ್ಯಾಯದ ಬಗ್ಗೆ ಇಬ್ಬರು ಮಾತನಾಡಿದರು. ನೀವು ಹೇಳುವುದು ಬೇಡ, ನಿಮ್ಮ ನ್ಯಾಯ ನಡೆಯುವುದಿಲ್ಲ. ದೆಹಲಿಯಲ್ಲಿ ಎಲ್ಲವೂ ನಡೆಯಬೇಕು ಎಂದು ಹೇಳಿದ್ದೇನೆ. ಅದರ ಬಗ್ಗೆ ಈಗ ಚರ್ಚೆ ಬೇಡವೆಂದು ಹೇಳಿದ್ದೇನೆ ಎಂದರು.

ಸಿಎಂ ಬದಲಾವಣೆ ಸುಳಿವು?: ಇದು 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ. ನೀವು ಎಲ್ಲರೂ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ದೆಹಲಿಯಲ್ಲಿ ಏನು ಆಗಬೇಕೋ ಎಲ್ಲವೂ ತೀರ್ಮಾನ ಆಗಿದೆ, ಸ್ವಲ್ಪ ದಿನ ಕಾಯಿರಿ, ಅದರ ಬಗ್ಗೆ ಚರ್ಚೆಗಳು ಬೇಡ ಎಂದರು.

ನಾನು ಈ ಸ್ಥಾನದವರೆಗೆ ಸುಮ್ಮನೆ ಬಂದಿಲ್ಲ, ನನ್ನ ಮೇಲೆ ಎಷ್ಟು ಕಿರುಕುಳ, ದಾಳಿ ಆಗಿಲ್ಲ ಹೇಳಿ, ಸಿಬಿಐಯಿಂದ ಹಿಡಿದು ಇಡಿ, ಐಟಿ ದಾಳಿ ಎಲ್ಲವೂ ಆಗಿದೆ, ಎಲ್ಲವನ್ನೂ ಸಹಿಸಿಕೊಂಡು ಎದುರಿಸಿಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರು. ಅಂದರೆ ಸದ್ಯದಲ್ಲಿಯೇ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಸುಳಿವು ನೀಡಿದಾರ ಡಿ ಕೆ ಶಿವಕುಮಾರ್ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com