ನನ್ನ ಹೆಂಡತಿ ನನ್ನ ಸರಿ ದಾರಿಗೆ ತಂದಿದ್ದಾರೆ; ಹೇಳಿಕೆಯಿಂದ ನೋವಾಗಿದ್ದರೆ ರಾಜ್ಯದ ಮಹಿಳೆಯರಿಗೆ ವಿಷಾದ ವ್ಯಕ್ತಪಡಿಸಲು ಸಿದ್ಧ: HDK

ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದ್ರೆ ಕಾಂಗ್ರೆಸ್‌ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆ ದುಖಃಕ್ಕೆ ಒಳಗಾಗುವ ಹಾಗೆ ಮಾಡಿದರೆ ವಿಷಾದ ವ್ಯಕ್ತಪಡಿಸುತ್ತೇನೆ.
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ
Updated on

ಬೆಂಗಳೂರು: ಗ್ಯಾರೆಂಟಿ ಯೋಜನೆಯಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಪ್ರಚಾರ ಸಭೆಯಲ್ಲಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದು, ಪ್ರತಿ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಹೆಚ್​ಡಿ ಕುಮಾರಸ್ವಾಮಿ ಅವರ ಈ ಹೇಳಿಕೆಯಿಂದ ಎನ್​ಡಿಎ ಮೈತ್ರಿಕೂಟಕ್ಕೆ ಹೊಡೆತ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್​ಗೆ ಹೆಚ್​ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದ್ರೆ ಕಾಂಗ್ರೆಸ್‌ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆ ದುಖಃಕ್ಕೆ ಒಳಗಾಗುವ ಹಾಗೆ ಮಾಡಿದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ದಾರಿ ತಪ್ಪಿದಾಗ ನನ್ನ ಹೆಂಡತಿ ಸರಿ ದಾರಿಗೆ ತಂದಿದ್ದಾರೆ ಎಂದು ನಾನು ಸದನದಲ್ಲಿ ಹೇಳಿದ್ದೇನೆ. ತಮ್ಮನಿಗೆ ಮತ ಹಾಕಿ‌ ನೀರು ಕೊಡುತ್ತೇನೆ ಎನ್ನುವವರು ಇವಾಗ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು.

ಮಹಿಳಾ ತಾಯಂದಿರ ಬಗ್ಗೆ ಕ್ಷಮೆ ಕೇಳಲು ಆಗದ ರೀತಿ ಅಪಮಾನ ಮಾಡಿದ್ದೇನೆ ಅಂತ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ತರಾತುರಿಯಲ್ಲಿ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂದಿರಾಗಾಂಧಿ ಹತ್ಯೆಯಾದ ಸಮಯದಲ್ಲಿ ದುಃಖಪಟ್ಟಿದ್ದು ಬಿಟ್ಟು ಈಗಲೇ ದುಃಖಪಟ್ಟೆ ಅಂತ ಅಧ್ಯಕ್ಷರು, ಮಹಿಳೆಯರ ಪರ ಕಂಬನಿ ಮಿಡಿದಿದ್ದಾರೆ. ಡಿಕೆ ಶಿವಕುಮಾರ್‌ಗೆ ಕೇಳ್ತೀನಿ, ಕೆಲವು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡಾಗ ಇವರಿಗೆ ದುಃಖ ಬಂದಿಲ್ಲ, ಈಗ ದುಃಖ ಬಂದಿದೆ ಎಂದರು.

ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿ ಪಿಕ್ ಪ್ಯಾಕೇಟ್ ಗ್ಯಾರಂಟಿ. ಕಾಂಗ್ರೆಸ್ ಸಚಿವರು, ನಾಯಕರು, ಮಹಿಳಾ ಘಟಕದವರು ಮಂಡ್ಯದಲ್ಲಿ `ಗೋ ಬ್ಯಾಕ್ ಕುಮಾರಸ್ವಾಮಿ’ ಅಂತ ಮಾಡಿದ್ದಾರೆ. ಅಲ್ಲಿಗೆ ಬಂದು ಹೆಣ್ಣುಮಕ್ಕಳನ್ನ ಕೇಳಿದ್ರೆ ಯಾಕೆ ಬಂದಿದ್ದೇವೆ ಗೊತ್ತಿಲ್ಲ ಅಂತ ಹೇಳ್ತಾರೆ. ಮಿಸ್ಟರ್ ಶಿವಕುಮಾರ್ ನಿಮ್ಮ ಉಸ್ತುವಾರಿ ಇದ್ದಾರೆ ಅಲ್ಲವಾ? ಆ ಮನುಷ್ಯ ಏನ್ ಹೇಳಿಕೊಟ್ರು? ಹೇಮಮಾಲಿನಿ ವಿರುದ್ಧ ಸುರ್ಜೇವಾಲಾ ಅವರು ಏನ್‌ ಹೇಳಿದ್ದರು? ಅದನ್ನ ಕನ್ನಡದಲ್ಲಿ ಓದೋಕೆ ಆಗಲ್ಲ. ಅದೆಲ್ಲ ಮಹಿಳೆಯರಿಗೆ ಗೌರವ ಕೊಡುವ ಹೇಳಿಕೆಗಳಾ? ಎಂದು ಪ್ರಶ್ನಿಸಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ
ಸುಮಲತಾರನ್ನು ಎಲ್ಲಿ ಮಲಗಿದ್ದೆ ಎಂದು ಕೇಳಿದ್ದಿರೀ; ಮನುವಾದಿಯಾಗಿ ಬಿಜೆಪಿ ಸೇರಿದ್ದೀರಾ?: HDK ವಿರುದ್ಧ ಕಾಂಗ್ರೆಸ್ ಕಿಡಿ

ನನ್ನ ಹೇಳಿಕೆ ನನ್ನ ಸಂಸ್ಕೃತಿ ತೋರಿಸುತ್ತೆ ಅಂತ ಹೇಳ್ತಾರೆ, 2 ಸಾವಿರ ಇವರು ಕೊಟ್ಟು ನಿಮ್ಮ ಯಜಮಾನರ ಜೇಬಿಂದ 5 ಸಾವಿರ ಕೀಳುತ್ತಿದ್ದಾರೆ. ಇದರಿಂದ ಎಚ್ಚರವಾಗಿರಿ ಅಂತ ನಾನು ಹೇಳಿದ್ದೇನೆ. ಆರ್ಥಿಕ ಶಕ್ತಿ ಬರಬೇಕು ಅಂತ ಭಾಷಣ ಮಾಡಿದ್ದೇನೆ. 2006-07 ಸಾರಾಯಿ ನಿಷೇಧ ಮಾಡಿದ್ದು ನಾನು, ಆವತ್ತು ನನಗೆ ಸಾವಿರಾರು ಕೋಟಿ ರೂ. ಆಫರ್ ಮಾಡಿದ್ರು. ಆದ್ರೆ ನಾನು ಮಹಿಳೆಯರಿಗಾಗಿ ಆ ಕೆಲಸ ಮಾಡಿದೆ. ಕಾಂಗ್ರೆಸ್ ಅವರಿಗೆ ನನ್ನ ಬಗ್ಗೆ ಮಾತಾಡೋಕೆ ವಿಷಯ ಇಲ್ಲಎಂದು ತಿರುಗೇಟು ನೀಡಿದ್ದಾರೆ.

ಕಂಗನಾ ರಣಾವತ್ ಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಕ್ಕಾಗಿ ಹೆಣ್ಣು ಮಕ್ಕಳಿಗೆ ರೇಟ್ ಫಿಕ್ಸ್ ಮಾಡಿದ್ದೀರಿ. ಅದಕ್ಕೆ ಡಿಕೆ ಶಿವಕುಮಾರ್ ಏನು ಹೇಳ್ತಾರೆ? ರಾಜ್ಯದಲ್ಲಿ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಏನು ಹೇಳಿಕೆ ಕೊಟ್ಟಿದ್ದರು? ನಿಮ್ಮಿಂದ ನಾನು ಕಲಿಯಬೇಕಾ? ಎಂದು ಪ್ರಶ್ನಿಸಿದರು. ಅತ್ಯಾಚಾರ ಅನಿವಾರ್ಯ ಆದರೆ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿದ್ದರು. ಶಾಮನೂರು ಶಿವಶಂಕರಪ್ಪ ಮಹಿಳೆಯರು ಅಡುಗೆ ಮನೆಯಲ್ಲಿ ಇರಬೇಕು ಎಂದಿದ್ದರು. ಇಂತಹ ನೂರಾರು ನಿರ್ದಶನ ಇದೆ. ಎಷ್ಟು ಕುಟುಂಬಗಳನ್ನು ಆಸ್ತಿಯ ದುರಾಸೆಗೆ ಏನು ಮಾಡಿದ್ದೀರಿ ಎಂದು ಬೇಕಾದಷ್ಟು ಉದಾಹರಣೆ ಇದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com