ಸುಮಲತಾರನ್ನು ಎಲ್ಲಿ ಮಲಗಿದ್ದೆ ಎಂದು ಕೇಳಿದ್ದಿರೀ; ಮನುವಾದಿಯಾಗಿ ಬಿಜೆಪಿ ಸೇರಿದ್ದೀರಾ?: HDK ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಿಕೊಳ್ಳಲಾಗದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ, ಹಳ್ಳಿಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಿಂದ ಹಳ್ಳಿಗಳ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮಹಿಳಾ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಸಿಕ್ಕಿದತಾಗಿದೆ.
ರಾಜ್ಯದ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ. ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ನಾನು ಒತ್ತಾಯಿಸುವುದಿಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿ ಸ್ಪಷ್ಟನೆ ನೀಡಬೇಕು ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದ ತುರುವೇಕೆರೆಯಲ್ಲಿ ಶನಿವಾರ ನಡೆದ ರೋಡ್‌ಶೋನಲ್ಲಿ ಎನ್‌ಡಿಎ ಅಭ್ಯರ್ಥಿ ವಿ ಸೋಮಣ್ಣ ಪರ ಪ್ರಚಾರ ನಡೆಸುತ್ತಿದ್ದ ಕುಮಾರಸ್ವಾಮಿ, ಹಳ್ಳಿಗಳಲ್ಲಿ ಮಹಿಳೆಯರು ಸ್ವಲ್ಪ ದಾರಿ ತಪ್ಪಿದ್ದಾರೆ (ಕನ್ನಡದಲ್ಲಿ ‘ದಾರಿ ತಪ್ಪಿದ್ದಾರೆ’) ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಎನ್‌ಡಿಎ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ ವಿರುದ್ಧ ಮಂಡ್ಯದಲ್ಲಿ ಭಾನುವಾರ ಕಾಂಗ್ರೆಸ್‌ನ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ತಾಯಂದಿರು ದಾರಿ ತಪ್ಪಿದ್ದಾರೆ ಎಂದರೆ ಏನು? ನಿಮ್ಮ ಕುಟುಂಬದಲ್ಲಿಯೂ ಅನೇಕ ಮಹಿಳೆಯರು ಇದ್ದಾರೆ. ಮನುವಾದಿಯಾಗಿ ಬಿಜೆಪಿ ಸೇರಿದ್ದೀರಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿ, ಕುಮಾರಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರನ್ನು ಕುಟುಂಬದ ಆಧಾರ ಸ್ತಂಭಗಳೆಂದು ಪರಿಗಣಿಸಿ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗಿದೆ. ಆದರೆ ಅವರು ದಾರಿ ತಪ್ಪಿದ್ದಾರೆ ಎಂದು ಹೇಳಿರುವ ಕುಮಾರಸ್ವಾಮಿ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ಬಡ ಗಾರ್ಮೆಂಟ್ಸ್ ಕೆಲಸಗಾರರು, ಬೀದಿಬದಿ ವ್ಯಾಪಾರಿಗಳು, ಗೃಹ ಸಹಾಯಕರು ಮತ್ತು ದಿನಗೂಲಿ ಕಾರ್ಮಿಕರಿಗೆ ನಾವು ಖಾತರಿ ನೀಡುತ್ತಿದ್ದೇವೆ. ಕ್ಲಬ್‌ಗಳಿಗೆ (ಮನರಂಜನೆಗಾಗಿ) ಹೋಗುವ ಮಹಿಳೆಯರಿಗೆ ನಾವು ಅವುಗಳನ್ನು ನೀಡುತ್ತಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಿಕೊಳ್ಳಲಾಗದ ಎಚ್ ಡಿ ಕುಮಾರಸ್ವಾಮಿ ಅವರು ಹಳ್ಳಿಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ ಎಂದುಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಮಹಿಳೆಯರನ್ನು ಗೌರವಿಸದ ಬಿಜೆಪಿಯ ಜೊತೆ ಸಂಬಂಧ ಬೆಳೆದ ಕೂಡಲೇ ಮಹಿಳೆಯರ ನಡತೆಯ ಬಗ್ಗೆ ಮಾತಾಡುವಷ್ಟು ಉದ್ಧಟತನ ಬಂದಿತೆ ಕುಮಾರಸ್ವಾಮಿಯವರೇ? ಹಿಂದೆ ಸುಮಲತಾ ಅವರನ್ನು ಎಲ್ಲಿ ಮಲಗಿದ್ದೆ ಎಂದು ಕೇಳಿದ್ದಿರಿ, ಈಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ರಾಜ್ಯದ ಮಹಿಳೆಯರ ನಡತೆಗೆ ಕಪ್ಪು ಚುಕ್ಕೆ ತರುವಂಥ ಮಾತಾಡಿದ್ದೀರಿ ಇದು ನಿಜವಾಗಿಯೂ ಅಕ್ಷಮ್ಯ. ಮದ್ಯದ ಬೆಲೆಯ ಬಗ್ಗೆ ಮಾತಾಡಿ ಪುರುಷರನ್ನು ದಾರಿ ತಪ್ಪಿಸುವ ಮನೆ ಒಡೆಯುವ ಕೆಲಸ ಮಾಡಿದ್ದಾಯಿತು. ಈಗ ಗೃಹಲಕ್ಷ್ಮಿಯರ ಬಗ್ಗೆ ಮಾತಾಡಿ ಜನರ ದಿಕ್ಕು ತಪ್ಪಿಸುತ್ತಿದ್ದೀರ? ನಿಜವಾಗಿಯೂ ದಾರಿ ತಪ್ಪಿದವರು ನೀವೇ ಹೊರತು ಮಹಿಳೆಯರಲ್ಲ ಮಿಸ್ಟರ್ ಕುಮಾರಸ್ವಾಮಿಯವರೇ.. ಎಚ್ ಡಿ ದೇವೇಗೌಡ ಅವರೇ ಹೆಣ್ಣುಮಕ್ಕಳನ್ನು ಅವಮಾನಿಸುವಂಥ ಮಾತುಗಳನ್ನಾಡಿದ ನಿಮ್ಮ ಮಗನ ಕೀಳು ಮಟ್ಟದ ಹೇಳಿಕೆಗೆ ನಿಮ್ಮ ಸಹಮತವಿದೆಯೇ?
ಕುಮಾರಸ್ವಾಮಿಯವರೇ ನಿಮ್ಮ ತಂದೆ ಈ ದೇಶದ ಪ್ರಧಾನಿಯಾಗಿದ್ದವರು ಅವರಾದರೂ ನಿಮ್ಮ ಈ ನೀಚ ಮನಸ್ಥಿತಿಯ ಮಾತನ್ನು ಒಪ್ಪುವರೇ? ರಾಜ್ಯ ಪ್ರವಾಸದಲ್ಲಿರುವ ಮಾನ್ಯ ನರೇಂದ್ರ ಮೋದಿ ಅವರೇ ಕುಮಾರಸ್ವಾಮಿ ಅವರ ಮಹಿಳೆಯರ ಬಗೆಗಿನ ಅವಹೇಳನಕಾರಿ ಹೇಳಿಕೆ ಬಗ್ಗೆ ಏನು ಹೇಳುವಿರಿ? ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೀರ? ಇಲ್ಲ ಎಂದಾದರೆ ಬಿಜೆಪಿಯ ಜೊತೆಗಿನ ಜೆಡಿಎಸ್ ಮೈತ್ರಿಯನ್ನು ಕಡಿದುಕೊಳ್ಳುತ್ತೀರ? ಉತ್ತರಿಸಿ ಮೋದಿಯವರೇ, ಹಾಗಿದ್ದರೆ ನಿಮ್ಮ #BetiBachaoBetiPadao ಕೇವಲ ಬೂಟಾಟಿಕೆಯ ಘೋಷಣೆ ಅಷ್ಟೇನಾ? ಮಹಿಳಾ ಸಬಲೀಕರಣವನ್ನು ಸಹಿಸಲಾಗದ ನಿಮ್ಮ ಮಹಿಳಾ ವಿರೋಧಿ ಮನಸ್ಥಿತಿಗೆ ಧಿಕ್ಕಾರವಿರಲಿ!!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ