ಬೆಂಗಳೂರು ದಕ್ಷಿಣ ಕ್ಷೇತ್ರ: ಗೆಲ್ಲಲು ಸೌಮ್ಯಾ ರೆಡ್ಡಿ ಪಣ; ಅನಂತ್ ಕುಮಾರ್ ಕುಟುಂಬ ಮೌನ; ತೇಜಸ್ವಿ ಸೂರ್ಯ ಗೆಲುವು ಕಠಿಣ!

ಚುನಾವಣಾ ಆಯೋಗದ ಅಧಿಕಾರಿಗಳು ಇತ್ತೀಚೆಗೆ ಕಾರಿನಲ್ಲಿ 1.4 ಕೋಟಿ ರೂ.ಗಳನ್ನು ವಶಪಡಿಸಿಕೊಂಡಾಗ, ಸೌಮ್ಯಾ ರೆಡ್ಡಿ ಬಿಜೆಪಿ ವಿರುದ್ಧ ಬೊಟ್ಟು ಮಾಡಿದ್ದರು. ತೇಜಸ್ವಿ ಸೂರ್ಯ (33) ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಬೌನ್ಸ್ ಬ್ಯಾಕ್ ಮಾಡಿದ್ದರು.
ಕಾಲ್ಪನಿಕ ಚಿತ್ರ
ಕಾಲ್ಪನಿಕ ಚಿತ್ರ

ಬೆಂಗಳೂರು: ತೇಜಸ್ವಿ ಸೂರ್ಯ ಪ್ರಬಲ ವಾಗ್ಮಿ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಆದರೂ, ಬೆಂಗಳೂರು ದಕ್ಷಿಣ ಸಂಸದರು ಇದುವರೆಗೂ ತಮ್ಮ ಕ್ಷೇತ್ರ ಬಿಟ್ಟು ಬೇರೆಡೆ ಪ್ರಚಾರ ಮಾಡಿಲ್ಲ, ಏಕೆಂದರೆ ಈ ಬಾರಿ ಅವರಿಗೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ತೇಜಸ್ವಿ ಸೂರ್ಯ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ.

ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಹವಾಲಾ ಹಣ ನೀರಿನಂತೆ ಹರಿಯುತ್ತಿದೆ ಎಂಬ ಊಹಾಪೋಹ ದಟ್ಟವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಇತ್ತೀಚೆಗೆ ಕಾರಿನಲ್ಲಿ 1.4 ಕೋಟಿ ರೂ.ಗಳನ್ನು ವಶಪಡಿಸಿಕೊಂಡಾಗ, ಸೌಮ್ಯಾ ರೆಡ್ಡಿ ಬಿಜೆಪಿ ವಿರುದ್ಧ ಬೊಟ್ಟು ಮಾಡಿದ್ದರು. ತೇಜಸ್ವಿ ಸೂರ್ಯ (33) ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಬೌನ್ಸ್ ಬ್ಯಾಕ್ ಮಾಡಿದ್ದರು.

ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಸೌಮ್ಯಾ ರೆಡ್ಡಿ 2018 ರಲ್ಲಿ ಜಯನಗರ ಶಾಸಕರಾಗಿ ಆಯ್ಕೆಯಾದರು, ಆದರೆ 2023 ರಲ್ಲಿ ಅದನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರು. ಈ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಮೂವರು ಶಾಸಕರಿದ್ದಾರೆ. ಹೀಗಾಗಿ ತೇಜಸ್ವಿ ಸೂರ್ಯ ಸ್ವಲ್ಪ ಗಲಿಬಿಲಿಯಾಗಿದ್ದಾರೆ. ಕರ್ನಾಟಕವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯವಾಗಿರುವುದರಿಂದ, ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಕ್ಷವು ಎಲ್ಲಾ ತಂತ್ರಗಳನ್ನು ಹೆಣೆಯುತ್ತಿದೆ. ಹೀಗಾಗಿ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರನ್ನು ಅಭ್ಯರ್ಥಿಯನ್ನಾಗಿಸಿದೆ.

ಕಾಲ್ಪನಿಕ ಚಿತ್ರ
ಬೆಂಗಳೂರಿನ ಮೊದಲ ಮಹಿಳಾ ಸಂಸದೆಯಾಗಿ ಇತಿಹಾಸ ನಿರ್ಮಿಸುವರೇ ಸೌಮ್ಯಾ ರೆಡ್ಡಿ!

ಬಿಜೆಪಿ ಸೇರಿದಂತೆ ಪಕ್ಷದ ಗಡಿ ದಾಟಿ ಎಲ್ಲಾ ಪಕ್ಷಗಳ ರಾಜಕೀಯ ನಾಯಕರೊಂದಿಗೆ ರೆಡ್ಡಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾಮಾನ್ಯ ಜನರು ಸೌಮ್ಯಾ ರೆಡ್ಡಿಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ನ ತಮ್ಮ ಬೆಂಬಲಕ್ಕಿದೆ ಎಂದು ಕಾಂಗ್ರೆಸ್ ಭಾವಿಸಿದೆ. ರೆಡ್ಡಿ ಅವರು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಕಾರ್ಪೊರೇಟರ್‌ಗಳು ಸೇರಿದಂತೆ ಹಲವರನ್ನು ತಮ್ಮ ಪರವಾಗಿ ಪಡೆಯಲು ತಂತ್ರ ರೂಪಿಸಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪವಾಗಿರುವ ಅಹಿಂದ ಮತಗಳನ್ನು ಕ್ರೋಢೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಒಕ್ಕಲಿಗರು ಸೌಮ್ಯಳನ್ನು ತಮ್ಮ ಮಗಳಂತೆ ಪರಿಗಣಿಸಿ ಆಶೀರ್ವದಿಸುವಂತೆ ಕೋರಿದ್ದಾರೆ.

ರೆಡ್ಡಿ ಮತ್ತು ನಾಯ್ಡು ಸೇರಿದಂತೆ ತೆಲುಗು ಮಾತನಾಡುವ ಜನಸಂಖ್ಯೆ ಸೌಮ್ಯಾ ರೆಡ್ಡಿ ಪರ ಒಲವು ತೋರುತ್ತಿದೆ, ಆದರೆ ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಮಾತನಾಡುವ ಒಕ್ಕಲಿಗರು ಆತಂಕಕ್ಕೊಳಗಾಗಿದ್ದಾರೆ ಎಂದು ನಿವಾಸಿ ಸ್ವಾಮಿಗೌಡ ಎಂಬುವರು ಹೇಳಿದ್ದಾರೆ. ಮಂಡ್ಯ ಜಿಲ್ಲೆಯಿಂದ ಬೆಂಗಳೂರು ದಕ್ಷಿಣಕ್ಕೆ ವಲಸೆ ಬಂದಿರುವ ಒಕ್ಕಲಿಗರ ಪ್ರಮುಖ ವರ್ಗ ಜೆಡಿಎಸ್‌ನಲ್ಲಿದೆ. ಹೀಗಾಗಿ ಅವರು ಬಿಜೆಪಿ-ಜೆಡಿ (ಎಸ್) ಮೈತ್ರಿ ಅಭ್ಯರ್ಥಿಯಾಗಿರುವ ಬ್ರಾಹ್ಮಣರಾದ ತೇಜಸ್ವಿ ಸೂರ್ಯ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಮಾವಳ್ಳಿ ಬಡಾವಣೆಯ ಅಂಗಡಿಯ ವ್ಯಾಪಾರಿ ಸೂರ್ಯನಾರಾಯಣ ಅವರ ಅಭಿಪ್ರಾಯವೇ ಬೇರೆಯಾಗಿದೆ. ಈ ಹಿಂದೆ ಬಿಜೆಪಿ ಜೊತೆಗಿದ್ದೇವೆ ಎಂದು ಹೇಳಿಕೊಂಡಿದ್ದ ಅನೇಕ ಮತದಾರರು ಈ ಬಾರಿ ಪರಿಸ್ಥಿತಿಯು ನೀರಸವಾಗಿರುವುದರಿಂದ ತಮ್ಮ ನಿಷ್ಠೆ ಬದಲಾಯಿಸಬಹುದು ಎಂದಿದ್ದಾರೆ. ಮೂರು ದಶಕಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿತ್ತು. 2018 ರಲ್ಲಿಅಕಾಲಿಕ ಮರಣದ ಮೊದಲು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪ್ರತಿನಿಧಿಸಿದ್ದರು. ಅನಂತ್ ಕುಮಾರ್ ಅವರು 2014 ರಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರನ್ನು ಸೋಲಿಸಿದ್ದರು.

ಕಾಲ್ಪನಿಕ ಚಿತ್ರ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪುನರಾಯ್ಕೆ ಖಚಿತ: ತೇಜಸ್ವಿ ಸೂರ್ಯ

2019ರಲ್ಲಿ ಸೂರ್ಯ ಕಾಂಗ್ರೆಸ್‌ನ ಮಾಜಿ ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು 3.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, ಪರಿಸ್ಥಿತಿ ಬದಲಾಗಿದೆ. ಇತ್ತೀಚೆಗಷ್ಟೇ ಹನುಮಾನ್ ಚಾಲೀಸಾ ಹಾಡು ಹಾಕಿದ್ದ ಹಿಂದೂ ಅಂಗಡಿಯವನ ಮೇಲೆ ಕೆಲ ಗೂಂಡಾಗಳು ಹಲ್ಲೆ ನಡೆಸಿದ್ದರು. ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಅದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿ ವಿಫಲವಾಯಿತು.

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಸಭೆಯಲ್ಲಿ, ಸೂರ್ಯ ಮತ್ತು ಅವರ ಚಿಕ್ಕಪ್ಪ (ಬಸವನಗುಡಿ ಶಾಸಕ ಎಲ್‌ಎ ರವಿ ಸುಬ್ರಹ್ಮಣ್ಯ) ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸೌಮ್ಯಾರೆಡ್ಡಿ ಅವರು ತೇಜಸ್ವಿಯವರ ವೈಫಲ್ಯಗಳನ್ನು ಪಟ್ಟಿ ಮಾಡಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಇದರಲ್ಲಿ ಮುಖ್ಯವಾಗಿ ಗುರುರಾಘವೇಂದ್ರ ಬ್ಯಾಂಕ್‌ ಪ್ರಕರಣವನ್ನು ಪ್ರಬಲ ಅಸ್ತ್ರವಾಗಿ ಬಳಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ವಿರುದ್ಧವೂ ಇದೇ ಅಸ್ತ್ರ ಬಳಸಲಾಗಿತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವರ್ಚಸ್ಸಿನ ಮೇಲೆ ಸೂರ್ಯ ಪ್ರಚಾರ ಮಾಡುತ್ತಿದ್ದಾರೆ. ಆದರೆ ಪ್ರತಿಪಕ್ಷವಾದ ಇಂಡಿಯಾ ಬ್ಲಾಕ್‌ಗೆ ಪ್ರಧಾನಿ ಮುಖವಿಲ್ಲ. ಮತ್ತೊಂದೆಡೆ, ಸೌಮ್ಯಾ ಐದು ಕಾಂಗ್ರೆಸ್ ಗ್ಯಾರಂಟಿಗಳನ್ನು ಜಪಿಸಿ, ತನ್ನ ತಂದೆಯ ರಾಜಕೀಯ ಬುದ್ಧಿವಂತಿಕೆಯನ್ನು ಅವಲಂಬಿಸಿದ್ದಾರೆ.

ಐದು ಭರವಸೆಗಳ ಕಾರಣದಿಂದ ಕಾರ್ಮಿಕ ವರ್ಗ, ವಿಶೇಷವಾಗಿ ಮಹಿಳೆಯರ ಪ್ರಮುಖ ಭಾಗವು ಕಾಂಗ್ರೆಸ್‌ನತ್ತ ಒಲವು ತೋರುತ್ತಿದೆ. ಇವರಲ್ಲಿ ಹೆಚ್ಚಿನವರು ಕ್ಷೇತ್ರದಾದ್ಯಂತ ಸುಮಾರು 60 ಕೊಳೆಗೇರಿಗಳಲ್ಲಿ ನೆಲೆಸಿದ್ದಾರೆ. ಆದರೆ ಸಾಂಪ್ರದಾಯಿಕ ಬಿಜೆಪಿ ಮತದಾರರು ಮತ್ತು ಜೆಡಿಎಸ್‌ನವರು, ಬಹುತೇಕ ಒಕ್ಕಲಿಗರು ಸೂರ್ಯ ಅವರನ್ನು ಬೆಂಬಲಿಸುತ್ತಾರೆ. ಏಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಯಾರ ಕೊರಳಿಗೆ ವಿಜಯಮಾಲೆ ಎಂಬುದನ್ನು ಕಾದು ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com