ಇದೇ ನಿಮ್ಮ ಕೊನೆಯ ಚುನಾವಣೆ ಭಾಷಣ; ಮತ್ತೆ ಅಧಿಕಾರಕ್ಕೆ ಬರಲಾರಿರಿ; ನಿಮ್ಮ ಹಿಪಾಕ್ರಸಿ ಬಗ್ಗೆ ಉತ್ತರ ಕೊಡಿ!

ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಏನು ಭಿಕ್ಷುಕ ರಾಜ್ಯವೇ? ಎಂದು ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಶ್ನಿಸಿದ್ದು ಸುಳ್ಳೇ?
ಇದೇ ನಿಮ್ಮ ಕೊನೆಯ ಚುನಾವಣೆ ಭಾಷಣ; ಮತ್ತೆ ಅಧಿಕಾರಕ್ಕೆ ಬರಲಾರಿರಿ; ನಿಮ್ಮ ಹಿಪಾಕ್ರಸಿ ಬಗ್ಗೆ ಉತ್ತರ ಕೊಡಿ!
Updated on

ಬೆಂಗಳೂರು: ಸನ್ಮಾನ್ಯ ನರೇಂದ್ರ ಮೋದಿ ಅವರೇ, ಈ ಚುನಾವಣೆಯ ನಿಮ್ಮ ಭಾಷಣಗಳು ಪ್ರಧಾನಿಯಾಗಿ ನಿಮ್ಮ ಕೊನೆಯ ಭಾಷಣವಾಗಿರಬಹುದು. ಮತ್ತೆ ನೀವು ಖಂಡಿತಾ ಅಧಿಕಾರಕ್ಕೆ ಬರಲಾರಿರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಲಾಭ ಪಡೆಯುವ ದುಷ್ಟತನವನ್ನು ಕೈಬಿಟ್ಟು ನಿಮ್ಮ ಹತ್ತು ವರ್ಷಗಳ ಸಾಧನೆಯ ಬಗ್ಗೆ ಮಾತನಾಡಿ, ನೀವು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡಿರುವ ಅನ್ಯಾಯ ಮತ್ತು ನಿಮ್ಮ ನಡೆ-ನುಡಿಗಳಲ್ಲಿನ ಹಿಪಾಕ್ರಸಿ ಬಗ್ಗೆ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ, ಮಾತುಮಾತಿಗೆ ಕರ್ನಾಟಕಕ್ಕೆ ಯುಪಿಎ ಸರ್ಕಾರ ಕೊಟ್ಟಿದ್ದು ಕಡಿಮೆ, ಎನ್ ಡಿ ಎ ಸರ್ಕಾರ ಎಷ್ಟೊಂದು ಕೊಟ್ಟಿದೆ ಎಂದು ಲೆಕ್ಕ ಹೇಳುತ್ತಿರಲ್ಲಾ? ನಮ್ಮ ಲೆಕ್ಕವನ್ನೂ ಕೇಳಿ. 2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ ರೂ. 24,42,213 ಕೋಟಿ, ಕರ್ನಾಟಕಕ್ಕೆ ನೀಡಿದ್ದ ತೆರಿಗೆ ಪಾಲು ರೂ.35,895 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯ ಪಾಲು ರೂ. 16,082 ಕೋಟಿ. ಹೀಗೆ ಒಟ್ಟು ರೂ.46,288 ಕೋಟಿ ರಾಜ್ಯಕ್ಕೆ ಬಂದಿತ್ತು.

2023-24ನೇ ಸಾಲಿನ ಕೇಂದ್ರ ಬಜೆಟ್ ಗಾತ್ರ ರೂ.45,03,097 ಕೋಟಿ. ಆದರೆ ನಿಮ್ಮ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆ, ಕೇಂದ್ರ ಪುರಸ್ಕೃತ ಯೋಜನೆಯ ಪಾಲು ಸೇರಿ ನೀಡಿದ್ದು ಕೇವಲ ರೂ.55,529 ಕೋಟಿ. ಐದು ವರ್ಷಗಳಲ್ಲಿ ಬಜೆಟ್ ಗಾತ್ರ ಹೆಚ್ಚು ಕಡಿಮೆ ದುಪ್ಪಟ್ಟಾದರೂ ಕರ್ನಾಟಕಕ್ಕೆ ನೀಡುವ ಹಣವೂ ದುಪ್ಪಟ್ಟಾಗಬೇಕಿತ್ತು ಅಲ್ಲವೇ? ಅಂದರೆ ಕನಿಷ್ಠ ಒಂದು ಲಕ್ಷ ಕೋಟಿಯನ್ನಾದರೂ ನೀವು ನೀಡಬೇಕಾಗಿತ್ತಲ್ಲವೇ? ಈ ಲೆಕ್ಕ ಸುಳ್ಳೇ? ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 95,21,493 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ರೂಪಿಸಿ ಖರ್ಚು ಮಾಡಿತ್ತು. ನಿಮ್ಮ ನೇತೃತ್ವದ ಎನ್ ಡಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 282 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ರೂಇಸಿ ಖರ್ಚು ಮಾಡಿದೆ. ಅಂದರೆ ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚು. ಇದು ಸುಳ್ಳೇ? ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚಾದಾಗ ಸಾಧನೆಯೂ ಮೂರು ಪಟ್ಟು ಹೆಚ್ಚಾಗಬೇಕಿತ್ತಲ್ಲವೇ? ಎಲ್ಲಿದೆ ನಿಮ್ಮ ಸಾಧನೆ? ಎಂದು ಪ್ರಶ್ನಸಿದ್ದಾರೆ.

ಇದೇ ನಿಮ್ಮ ಕೊನೆಯ ಚುನಾವಣೆ ಭಾಷಣ; ಮತ್ತೆ ಅಧಿಕಾರಕ್ಕೆ ಬರಲಾರಿರಿ; ನಿಮ್ಮ ಹಿಪಾಕ್ರಸಿ ಬಗ್ಗೆ ಉತ್ತರ ಕೊಡಿ!
ಆಹ್ವಾನ ತಿರಸ್ಕರಿಸಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಶ್ರೀರಾಮನನ್ನು ಅವಮಾನಿಸಿವೆ: ಪ್ರಧಾನಿ ನರೇಂದ್ರ ಮೋದಿ

2014ರ ಯುಪಿಎ ಸರ್ಕಾರದ ಕಾಲದಲ್ಲಿ ದೇಶದ ಸಾಲ 54 ಲಕ್ಷ ಕೋಟಿ ರೂಪಾಯಿಗಳಾಗಿತ್ತು, ಈಗ ನಿಮ್ಮದೇ ಸರ್ಕಾರ ಹೇಳುವ ಪ್ರಕಾರ ಸಾಲದ ಮೊತ್ತ ಕಳೆದ ಮಾರ್ಚ್ ವೇಳೆಗೆ 172.37 ಲಕ್ಷ ಕೋಟಿ ರೂಪಾಯಿಗಳಾಗಿರುವುದು ಸುಳ್ಳೇ? ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚಳ ಸಾಲ ಕೂಡಾ ಮೂರು ಪಟ್ಟು ಹೆಚ್ಚಳ. ಇದು ಸುಳ್ಳೇ? ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿರುವುದು ನಿಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿರಲ್ಲಾ ಮೋದಿಯವರೇ, ಇದರಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪಾಲೆಷ್ಟು? ರಸ್ತೆ ನಿರ್ಮಾಣ ಗುತ್ತಿಗೆದಾರರ ಸಾಲ ಎಷ್ಟು ಎಂದು ಲೆಕ್ಕ ಯಾಕೆ ಹೇಳುವುದಿಲ್ಲ? ಈ ಹೆದ್ದಾರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪಾಲು ನೀಡಿದರೂ ಹೆದ್ದಾರಿ ಟೋಲ್ ಗಳಲ್ಲಿ ಸಂಗ್ರಹಿಸುವ ದುಡ್ಡು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಯಾಕೆ ಹೋಗಬೇಕು?

ಕಳೆದ ವರ್ಷ ಟೋಲ್ ಗಳಿಂದ ಸಂಗ್ರಹವಾಗಿರುವ ಹಣದ ಮೊತ್ತ 64,810 ಕೋಟಿ ರೂಪಾಯಿ. ಕರ್ನಾಟಕ ರಾಜ್ಯವೊಂದರಿಂದಲೇ ಸಂಗ್ರಹವಾಗಿರುವ ಟೋಲ್ ಹಣ 3,600 ಕೋಟಿ ರೂಪಾಯಿ. ಇದು ಸುಳ್ಳೇ? ಇದರಲ್ಲಿ ನಿಮ್ಮ ಸಾಧನೆ ಏನು? ಭದ್ರಾ ಮೇಲ್ದಂಡೆ ಯೋಜನೆಗಾಗಿ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5,300 ಕೋಟಿ ರೂಪಾಯಿ ಕೊಡುವ ಭರವಸೆಯನ್ನು ನಿಮ್ಮ ಸಹದ್ಯೋಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಬಜೆಟ್ ನಲ್ಲಿಯೇ ಘೋಷಿಸಿದ್ದು ಸುಳ್ಳೇ?

ಹುಬ್ಬಳ್ಳಿ ಧಾರವಾಡದ ಅವಳಿ ನಗರವೂ ಸೇರಿದಂತೆ ಕಿತ್ತೂರು ಕರ್ನಾಟಕದ ಜನರ ಭಾಗ್ಯದ ಬಾಗಿಲು ತೆರೆಯಬಲ್ಲ ಮಹದಾಯಿ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿ ವರ್ಷಗಳೇ ಆಗಿವೆ. ಆದರೆ ನಿಮ್ಮದೇ ನೇತೃತ್ವದ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಅನುಮತಿ ನೀಡದೆ ಸತಾಯಿಸುತ್ತಿರುವುದು ಸುಳ್ಳೇ? ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಕೃಷ್ಣಾ,ಕಾವೇರಿ, ಮೇಕೆದಾಟು ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಇದು ಸುಳ್ಳೇ?

ಇದೇ ನಿಮ್ಮ ಕೊನೆಯ ಚುನಾವಣೆ ಭಾಷಣ; ಮತ್ತೆ ಅಧಿಕಾರಕ್ಕೆ ಬರಲಾರಿರಿ; ನಿಮ್ಮ ಹಿಪಾಕ್ರಸಿ ಬಗ್ಗೆ ಉತ್ತರ ಕೊಡಿ!
ದೇಶದ ರಾಜ-ರಾಣಿಯರನ್ನು ಕಾಂಗ್ರೆಸ್ ಅವಮಾನಿಸಿದೆ ಹೇಳಿಕೆ: ಪ್ರಧಾನಿ ಮೋದಿ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ

ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ ಬಿಜಲಿ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎನ್ನುವುದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ.ಕಳೆದ ವರ್ಷದ ಬಜೆಟ್ ನಲ್ಲಿಯೇ ಘೋಷಿಸಿದ್ದ ಈ ಯೋಜನೆ ಸಂಪೂರ್ಣ ಉಚಿತ ಅಲ್ಲ. 1 ಕಿಲೋ ವ್ಯಾಟ್‌ ಉತ್ಪಾದಿಸುವ ರೂಫ್‌ಟಾಪ್‌ ಸೋಲಾರ್‍‌ ಪ್ಯಾನೆಲ್‌ಗೆ 50,000 ರೂ. ವೆಚ್ಚವಾಗುತ್ತದೆ. ಈ ಮೊತ್ತದಲ್ಲಿ 40% ಹಣವನ್ನು ಖರೀದಿಸುವ ಕುಟುಂಬವೇ ಭರಿಸಬೇಕಾಗುತ್ತದೆ. ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುತ್ತಿದೆ. ಅಂದರೆ ಸೋಲಾರ್ ಪ್ಯಾನೆಲ್‌ ಅಳವಡಿಸುವ ವೆಚ್ಚದ ಹೊರೆ ಬಡ ಕುಟುಂಬದ ಮೇಲೆ ಹೊರಿಸಲಾಗಿದೆ. ಮತ್ತೆ ಎಲ್ಲಿಯ ಉಚಿತ? ಇದು ಸುಳ್ಳೇ?

ಪ್ರತಿ ರಾಜ್ಯಕ್ಕೊಂದು ( ಅಖಿಲಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮಾದರಿಯಲ್ಲಿ ಏಮ್ಸ್ ಸ್ಥಾಪಿಸುವುದಾಗಿ 2014ರಲ್ಲಿಯೇ ಭರವಸೆ ನೀಡಿದ್ದೀರಿ. ದೇಶದಲ್ಲಿ ಇರುವುದೇ 19 ಏಮ್ಸ್ ಗಳು. ನಮ್ಮ ಹಿಂದುಳಿದ ಜಿಲ್ಲೆಯಾದ ರಾಯಚೂರಿಗೂ ಒಂದು ಕೊಡಿ ಎಂದು ಪತ್ರಗಳ ಮೇಲೆ ಪತ್ರಗಳನ್ನು ಬರೆದೆವು. ಇಲ್ಲಿಯ ವರೆಗೆ ಕೊಟ್ಟಿಲ್ಲ ಎನ್ನುವುದು ಸುಳ್ಳೇ? ದರ್ಬಾಂಗ್, ಮದುರೈಗಳಲ್ಲಿ ಏಮ್ಸ್‌ ಸ್ಥಾಪನೆಯಾಗಿವೆ ಎಂದು ನೀವೇ ಹೇಳಿದಿರಿ. ಆದರೆ ಮಾಧ್ಯಮದ ವರದಿಗಳು ಇದು ಸುಳ್ಳು ಎಂದು ಹೇಳುತ್ತಿವೆ. ಇದು ಸುಳ್ಳೇ? 70 ವರ್ಷ ಮೇಲ್ಪಟ್ಟವರಿಗೂ ಆಯಷ್ಮಾನ್‌ ಸೇವೆ ವಿಸ್ತರಿಸಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿನ ನಿಮ್ಮ ಭರವಸೆ. ವಾಸ್ತವ ಸಂಗತಿ ಎಂದರೆ ಆಯುಷ್ಮಾನ್‌ ಯೋಜನೆಯ ಆರೋಗ್ಯ ವಿಮೆಯಲ್ಲಿ ಅಕ್ರಮ ನಡೆದಿರುವುದನ್ನು ಸಿಎಜಿಯೇ ವರದಿ ಮಾಡಿದೆ. 8.2 ಲಕ್ಷ ರೋಗಿಗಳು ಆಧಾರ್, ಬಯೋಮೆಟ್ರಿಕ್‌ ದಾಖಲೆಗಳಿಲ್ಲದೆ ಎರಡಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ಪಡೆದಿದ್ದನ್ನು ಗುರುತಿಸಿತ್ತು. ನಕಲಿ ವಿಮೆಗಳಿಗೆ ರೂ.1697 ಕೋಟಿ ವರೆಗೆ ಸರ್ಕಾರದಿಂದ ಹಣ ನೀಡಲಾಗಿದೆ ಇದು ಸುಳ್ಳೇ?

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ ರೂ.6000 ಸಹಾಯಧನವನ್ನು ನೀಡುತ್ತಿದ್ದು, ರೈತರಿಗೆ ಆರ್ಥಿಕ ಬೆಂಬಲ ನೀಡುವುದಕ್ಕೆ ಬದ್ಧರಾಗಿದ್ದೇವೆ ಎನ್ನುವುದನ್ನು ಹೇಳುತ್ತಲೇ ಇದ್ದೀರಿ. ಆದರೆ ಕಳೆದ ಐದು ವರ್ಷಗಳಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ 11 ಕೋಟಿ ರೈತರಿಗೆ ಸಹಾಯ ಧನ ನೀಡಲಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಕೃಷಿ ಸಚಿವರೇ ರಾಜ್ಯಸಭೆಯಲ್ಲಿ 4 ಲಕ್ಷ ಅನರ್ಹ ರೈತರಿಗೆ ರೂ. 3,000 ಕೋಟಿ ಸಹಾಯ ಧನ ವಿತರಣೆಯಾಗಿದ್ದು, ಮರಳಿ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದ್ದರು. ದೇಶದಲ್ಲಿ 55% ಭೂ ರಹಿತ ರೈತರಿದ್ದು, ಅವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಮತ್ತೊಂದು ದುರಂತ! ಇವೆಲ್ಲ ಸುಳ್ಳೇ?

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ತಂತ್ರಜ್ಞಾನದ ಬಳಕೆಯ ಮೂಲಕ ಮತ್ತಷ್ಟು ಬಲಪಡಿಸಿ ನಿಖರ ಪರಿಶೀಲನೆ ನಡೆಸಿ ಪರಿಹಾರದ ಹಣವನ್ನು ವೇಗವಾಗಿ ಪಾವತಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ, ವಾಸ್ತವ ಸಂಗತಿ ಎಂದರೆ ಹಿಂದಿನ 5 ವರ್ಷಗಳ ಅವಧಿಯಲ್ಲಿ ಈ ಯೋಜನೆಯಿಂದ ರೈತರಿಗೆ ಆದ ಲಾಭಕ್ಕಿಂತ ವಿಮಾ ಕಂಪನಿಗಳಿಗೆ ಆದ ಲಾಭವೇ ಹೆಚ್ಚು. ಕೃಷಿ ಸಚಿವ ತೋಮರ್ ಅವರು ರಾಜ್ಯಸಭೆಯಲ್ಲಿ ಉತ್ತರಿಸಿರುವಂತೆ, 2016-17ರಿಂದ 2021-22ರ ಅವಧಿಯಲ್ಲಿ ರೈತರು ರೂ. 1.59 ಲಕ್ಷ ಪ್ರೀಮಿಯಂ ಹಣ ಪಾವತಿಸಿದ್ದರು. ಈ ಪೈಕಿ ವಿಮಾ ಕಂಪನಿಗಳು ರೂ. 1.19 ಲಕ್ಷ ಕೋಟಿ ಹಣವನ್ನು ರೈತರಿಗೆ ಪಾವತಿಸಿದ್ದವು. ಅಂದರೆ ರೂ.40,000 ಕೋಟಿಗಳಷ್ಟು ಲಾಭಗಳಿಸಿದ್ದವು ಎಂದು ಅಂಕಿ ಅಂಶ ಹಂಚಿಕೊಂಡಿದ್ದರು. ಇದು ಸುಳ್ಳೇ? ಪ್ರಧಾನಿ ನರೇಂದ್ರ ಮೋದಿ ಅವರೇ, ಮೂರು ಕೋಟಿ ಲಖ್‌ಪತಿದೀದಿಗಳನ್ನು ಮಾಡಲಾಗುವುದು. ಈಗಾಗಲೇ 1 ಕೋಟಿ ಮಹಿಳೆಯರನ್ನು ಲಖ್‌ಪತಿ ದೀದಿಗಳನ್ನಾಗಿ ಮಾಡಿದ್ದು, ಮೂರು ಕೋಟಿ ಗ್ರಾಮೀಣ ಮಹಿಳೆಯರನ್ನು ಲಖ್‌ಪತಿ ದೀದಿಗಳನ್ನಾಗಿ ಸಬಲೀಕರಿಸಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ. ವಾಸ್ತವ ಸಂಗತಿ ಎಂದರೆ ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರಿಗೆ ನೀಡಲಾಗಿದೆ ಎಂದು ಹೇಳಲಾದ ಈ ನೆರವನ್ನು ಪಡೆದ ಒಬ್ಬರೇ ಒಬ್ಬ ಕರ್ನಾಟಕದ ಮಹಿಳೆಯ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇದು ಸುಳ್ಳೇ?

ಹದಿನೆಂಟು ಸಾವಿರ ಕೋಟಿ ರೂಪಾಯಿ ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ಅನುದಾನ ನೀಡದೆ ನಿರ್ಲಕ್ಷಿಸಿರುವುದು ಸುಳ್ಳೇ? ರಾಜ್ಯದ ಪ್ರಮುಖ ರೈಲ್ವೇ ಯೋಜನೆಗಳಿಗೆ ಅನುದಾನ ನೀಡದೆ ಮೂಲೆಗೆ ತಳ್ಳಿರುವುದು ಸುಳ್ಳೇ? ರಾಜ್ಯಕ್ಕೊಂದು ಏಮ್ಸ್ ಮಾದರಿ ಆಸ್ಪತ್ರೆ ಎಂದು ಘೋಷಿಸಿದ್ದು ಸುಳ್ಳೇ? ಇದನ್ನು ನಂಬಿ ರಾಯಚೂರಿನಲ್ಲಿಯಾದರೂ ಅಂತಹದ್ದೊಂದು ಆಸ್ಪತ್ರೆ ಮಾಡಿ ಎಂದು ಕೇಳಿದರೂ ಕೊಡದೆ ಇರುವುದು ಸುಳ್ಳೇ?

ಪ್ರಧಾನಿ ನರೇಂದ್ರ ಮೋದಿ ಅವರೇ, ಕೇಂದ್ರ ಹಣಕಾಸು ಆಯೋಗದ ವಿರುದ್ದ ಮೊದಲು ಮಾತನಾಡಿದ್ದೇ ನೀವು. ‘‘ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಏನು ಭಿಕ್ಷುಕ ರಾಜ್ಯವೇ? ಎಂದು ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಶ್ನಿಸಿದ್ದು ಸುಳ್ಳೇ? ಪ್ರಧಾನಿ ನರೇಂದ್ರ ಮೋದಿ ಅವರೇ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯತ್ತಿದ್ದಾಗ ‘’ ಯುಪಿಎ ಸರ್ಕಾರ ಮತ್ತು ರೂಪಾಯಿ ಉರುಳಿ ಕೆಳಗೆ ಬೀಳುವುದರದಲ್ಲಿ ಪೈಪೋಟಿ ನಡೆಸುವಂತಿದೆ ಎಂದ ವ್ಯಂಗ್ಯವಾಡಿದ ನಿಮಗೆ ಈಗ ರೂಪಾಯಿ ಮೌಲ್ಯ ಪಾತಾಳಕ್ಕೆ ಇಳಿದಿರುವುದು ಗಮನಕ್ಕೆ ಬಂದಿಲ್ಲವೇ? ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ‘’ಆಧಾರ್ ಕಾರ್ಡ್ ಗೆ ಭವಿಷ್ಯದ ಮುನ್ನೋಟವೇ ಇಲ್ಲ, ಇದು ಕೇವಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದವರು ನೀವೇ ಅಲ್ಲವೇ? ಈಗ ಪ್ರಧಾನಿಯಾಗಿ ಆಧಾರ್ ಗುರುತಿನ ಚೀಟಿಯ ಪ್ರಬಲ ಪ್ರತಿಪಾದಕರಾಗಿ ವಾದ ಮಾಡುತ್ತಿರುವವರು ನೀವೇ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com