
ರಾಮನಗರ: 'ಭ್ರಷ್ಟಾಚಾರ ಬಿಜೆಪಿ ಜೆಡಿಎಸ್ ನ ರಕ್ತ ಸಂಬಂಧಿ' ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶನಿವಾರ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ಪಾದಯಾತ್ರೆಗೆ ಪ್ರತಿಯಾಗಿ ರಾಮನಗರದಲ್ಲಿ ಆಯೋಜಿಸಿದ್ದ 'ಜನಾಂದೋಲನ'ದಲ್ಲಿ ಮಾತನಾಡಿದ ಶಿವಕುಮಾರ್, ಭ್ರಷ್ಟಾಚಾರ ಬಿಜೆಪಿ ಮತ್ತು ಜೆಡಿಎಸ್‌ನ ತಂದೆ, ತಾಯಿ, ಸಹೋದರ, ಸಹೋದರಿ ಮತ್ತು ಸಂಬಂಧಿ. ರಾಜ್ಯದ ಜನತೆ ನನ್ನ ನಾಯಕತ್ವಕ್ಕೆ 135 ಹಾಗೂ ಕುಮಾರಸ್ವಾಮಿ ನಾಯಕತ್ವಕ್ಕೆ 19 ಸ್ಥಾನ ನೀಡಿದ್ದಾರೆ ಎಂದರು.
ಶುಕ್ರವಾರ ಬಿಡದಿಯಲ್ಲಿ ಕುಮಾರಸ್ವಾಮಿಯವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ನನ್ನನ್ನು ಜೈಲಿಗೆ ಹಾಕಲು ಮಿಲಿಟರಿಯನ್ನು ನಿಯೋಜಿಸಲಾಗುವುದು ಎಂದು ಕುಮಾರಸ್ವಾಮಿ ಸುಳಿವು ನೀಡಿದ್ದರು. ತಿಹಾರ್ ಜೈಲನ್ನೂ ನೋಡಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ನೀವು ಹೂಡಿದ ಪ್ರಕರಣಗಳನ್ನು ನೋಡಿದ್ದೇನೆ. ಇಷ್ಟೆಲ್ಲ ಆದ ಮೇಲೆ ರಾಜ್ಯದ ಜನತೆ ನನ್ನ ನಾಯಕತ್ವಕ್ಕೆ 135 ಸ್ಥಾನಗಳನ್ನು ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋಗಳಿರುವ ಪೆನ್ ಡ್ರೈವ್ ಹಂಚುವಿಕೆಯ ಹಿಂದೆ ನನ್ನ ಕೈವಾಡವಿದೆ ಎಂದು ತಪ್ಪು ಆರೋಪ ಮಾಡಿದ್ದ ಕುಮಾರಸ್ವಾಮಿ ಇದೀಗ ಪೆನ್ ಡ್ರೈವ್ ಹಂಚಿಕೆ ಹಿಂದೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಕೈವಾಡವಿದೆ ಎಂದು ಹೇಳುತ್ತಿದ್ದಾರೆ. ಪ್ರೀತಂ ಗೌಡ ಭಾಗಿಯಾಗಿರುವ ಕಾರಣ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಹೇಳಿದ್ದವರು ಈಗ ಯಾಕೆ ಭಾಗವಹಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಪ್ರೀತಂ ಗೌಡ ಭಾಗಿಯಾಗಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ? ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವ ಪ್ರಧಾನಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಈ ಬಗ್ಗೆ ಈಗಲೇ ಮಾತನಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ವಿಜಯೇಂದ್ರ ಅವರ ತಂದೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋಗಿದ್ದೇಕೆ? ಕಣ್ಣೀರು ಹಾಕಿ ರಾಜೀನಾಮೆ ನೀಡಿದ್ದು ಏಕೆ? ಅವರು ಸಿಎಂ ಆಗಿದ್ದಾಗ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದು ಏಕೆ? ಈ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕು ಎಂದು ಪ್ರಶ್ನೆಗಳ ಸುರಿಮಳೆಗೈದರು.
ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ವಿಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ, ಕಾಂಗ್ರೆಸ್ ಸರ್ಕಾರ ಸುಲಭವಾಗಿ ಮುರಿಯುವಷ್ಟು ದುರ್ಬಲವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನೇತೃತ್ವದ ಸರ್ಕಾರವನ್ನು ಅವರು ಏನೂ ಮಾಡಲು ಸಾಧ್ಯವಿಲ್ಲ. ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
Advertisement