ಬೆಂಗಳೂರು: ಮುಡಾ ಹಗರಣದ ಆರೋಪದ ಮೇಲೆ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿಯು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಈ ಬಾರಿ ಉತ್ತರ ಕರ್ನಾಟಕದಲ್ಲಿ ಮತ್ತೊಂದು ಬೃಹತ್ ಸಮಾವೇಶ ನಡೆಸುವ ಸಾಧ್ಯತೆಯಿದೆ.
ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮ ಅಕ್ರಮಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಮುಂದಿನ ಕೆಲವು ವಾರಗಳಲ್ಲಿ ಬಳ್ಳಾರಿಯಲ್ಲಿ ಈ ರ್‍ಯಾಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಳ್ಳಾರಿ ಭಾಗದಲ್ಲಿ ಮತ್ತೊಮ್ಮೆ ಪಾದಯಾತ್ರೆ ನಡೆಸಲು ಬಿಜೆಪಿ ಉತ್ಸುಕವಾಗಿದೆ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದ್ದಾರೆ. “ನಮಗೆ ಬೀದರ್‌ನಿಂದ ಬಳ್ಳಾರಿಗೆ ಅಥವಾ ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ನಡೆಸಬೇಕು. ಅದನ್ನು ಅಂತಿಮಗೊಳಿಸುವ ಮೊದಲು ನಾವು ದೆಹಲಿಯಲ್ಲಿರುವ ನಮ್ಮ ಪಕ್ಷದ ನಾಯಕರು ಮತ್ತು ರಾಜ್ಯ ಕೋರ್-ಕಮಿಟಿ ನಾಯಕರೊಂದಿಗೆ ಸಮಾಲೋಚಿಸುತ್ತೇವೆ ಎಂದು ಅವರು ಹೇಳಿದರು.
ಇತ್ತೀಚೆಗೆ ಯಾದಗಿರಿಯಲ್ಲಿ ನಡೆದ ಪಿಎಸ್ ಐ ಪರಶುರಾಮ್ ಆತ್ಮಹತ್ಯೆ ಪ್ರಕರಣ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. “ರಾಜ್ಯ ಸರ್ಕಾರವು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾದ 25,000 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ. ನ್ಯಾಯಕ್ಕಾಗಿ ನಾವು ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ಪಾದಯಾತ್ರೆಯಿಂದಾಗಿ ಪಕ್ಷವು ಗಮನ ಸೆಳೆಯುತ್ತಿದೆ. “ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆಯುತ್ತಿರುವ ಪಾದಯಾತ್ರೆ ಹಳೇ ಮೈಸೂರಿನಲ್ಲಿ ಬಿಜೆಪಿ ಬಲಗೊಳ್ಳಲು ಸಹಕಾರಿಯಾಗಿದೆ ಬಿಜೆಪಿ ಒಳಗಿನವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ನಾವು ಈ ಪ್ರದೇಶದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಸಾಧನೆ ಮಾಡದ ಕಾರಣ ಕಲ್ಯಾಣ ಕರ್ನಾಟಕದಲ್ಲಿ ಇದೇ ರೀತಿಯ ಪಾದಯಾತ್ರೆ ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಮೈಸೂರು ಚಲೋ ಪಾದಯಾತ್ರೆ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದೆ ಎಂದು ಬಿಜೆಪಿ ಮುಖಂಡ, ಎಂಎಲ್ಸಿ ರವಿಕುಮಾರ್ ಹೇಳಿದ್ದಾರೆ. “ನಮ್ಮ ಈ ಪಾದಯಾತ್ರೆಯಿಂದ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ವಿಭಜನೆಯಾಗಲಿದೆ ಮತ್ತು ಸರ್ಕಾರವನ್ನು ಅಸ್ಥಿರಗೊಳಿಸುವ ಸಾಧ್ಯತೆಯಿದೆ ಎಂದಿದ್ದಾರೆ.
ಬೆಂಗಳೂರು-ಮೈಸೂರು ಪಾದಯಾತ್ರೆ ಮುಗಿಯುವ ಹೊತ್ತಿಗೆ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗಲಿದೆ. ರಾಜ್ಯ ಸರ್ಕಾರದ ಬಳಿಯೂ ಹಣವಿಲ್ಲ, ಶಾಸಕರ ಅನುದಾನ ಸಿಗದಿರುವ ಬಗ್ಗೆ ಒಂದು ವರ್ಗದ ಶಾಸಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮತ್ತಷ್ಟು ಸ್ಫೋಟಗೊಳ್ಳುವ ನಿರೀಕ್ಷೆಯಿದೆ ಎಂದು ರವಿಕುಮಾರ್ ಹೇಳಿದರು.
Advertisement