ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ A1 ಆರೋಪಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಂಗಳವಾರ ಆರೋಪಿಸಿದರು.
'ಮೈಸೂರು ಚಲೋ ಪಾದಯಾತ್ರೆಯ' ನಾಲ್ಕನೇ ದಿನವಾದ ಇಂದು ಮದ್ದೂರಿನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪಿಗಳನ್ನು ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ A1 ಆರೋಪಿಯಾಗಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಎಸ್ ಐಟಿ ಚಾರ್ಚ್ ಶೀಟ್ ಸಲ್ಲಿಸಿದೆ. ಆದರೆ, ಅದರಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಅಧ್ಯಕ್ಷ ಬಸನಗೌಡ ದಡ್ಡಲ್ ಅವರ ಹೆಸರನ್ನು ಕೈಬಿಡಲಾಗಿದೆ. ಅವರ ಹೆಸರು ಹೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಹೊರ ಬರುತ್ತದೆ. ಅವರೇ ನಂಬರ್ ಒನ್ ಆರೋಪಿಯಾಗುತ್ತಾರೆ. ಹೀಗಾಗಿ ಅವರ ಹೆಸರನ್ನು ಕೈಬಿಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸಿಎಂ ಅರಿಯಬೇಕು. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರು ವಿರುದ್ಧ ತನಿಖೆಗೆ ಆಗಿನ ರಾಜ್ಯಪಾಲರಾಗಿದ್ದ ದಿವಂಗತ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದಾಗ ಸಿದ್ದರಾಮಯ್ಯ ಏನು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.
ಪಾದಯಾತ್ರೆಯಲ್ಲಿ ಸಾವಿರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಸಾಗುತ್ತಿದ್ದು, ಹಿಂದೆ ನೂರಾರು ಕಾರುಗಳು ಹಿಂಬಾಲಿಸುತ್ತಿವೆ. ಆದರೆ ಬಿಸಿಲಿನ ನಡುವೆಯೂ ಯಾರೂ ಅವರ ಕಾರುಗಳನ್ನು ಹತ್ತಲಿಲ್ಲ, ಇದು ಮೆರವಣಿಗೆಯಲ್ಲಿ ಕಾರ್ಯಕರ್ತರ ಉತ್ಸಾಹವನ್ನು ತೋರಿಸುತ್ತದೆ. ಎಲ್ಲೆಂದರಲ್ಲಿ ಗೇಲಿ ಮಾಡುವವರು, ನಟರು ಇದ್ದೇ ಇರುತ್ತಾರೆ. ಅವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ, ಬಿಜೆಪಿಯಲ್ಲಿ ಒಗ್ಗಟ್ಟು ಇದೆ. ಭ್ರಷ್ಟಾಚಾರ ತಡೆಗಟ್ಟುವುದು ಪ್ರತಿಪಕ್ಷಗಳ ಒಗ್ಗಟ್ಟಾಗಿದೆ ಎಂದು ಅವರು ಹೇಳಿದರು.
Advertisement