ಮಂಡ್ಯ: ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿವಿಧ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ದೂಷಿಸುವ ಹಳೆಯ ವಿಡಿಯೋಗಳನ್ನು ವೇದಿಕೆ ಮೇಲೆಯೇ ತೋರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ , ರಾಜ್ಯದ ಪ್ರತಿಪಕ್ಷಗಳನ್ನು "ಅವಕಾಶವಾದಿಗಳ ಗುಂಪು" ಎಂದು ಬಣ್ಣಿಸಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಸರ್ಕಾರವನ್ನು ಗುರಿಯಾಗಿಸುವ ಪ್ರತಿಪಕ್ಷಗಳ ತಂತ್ರವು ಕೆಲಸ ಮಾಡುವುದಿಲ್ಲ ಮತ್ತು ಮುಂದಿನ ಹತ್ತು ವರ್ಷಗಳ ಕಾಲ ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲಿದ್ದ ದೊಡ್ಡ ಪರದೆಯ ಮೇಲೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿವಿಧ ವಿಷಯಗಳ ಕುರಿತು ಪರಸ್ಪರ ವಾಗ್ದಾಳಿ ನಡೆಸುತ್ತಿರುವ ಹಳೆಯ ದೃಶ್ಯಾವಳಿಗಳನ್ನು ತೋರಿಸಿದರು.
ಪ್ರತಿಪಕ್ಷಗಳನ್ನು ಅವಕಾಶವಾದಿಗಳ ಗುಂಪು ಎಂದು ಕರೆದ ಶಿವಕುಮಾರ್, ಹಿಂದುಳಿದ ಸಮುದಾಯದ ವ್ಯಕ್ತಿಯೊಬ್ಬರು ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸುವುದನ್ನು ಸಹಿಸಲಾಗದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಉದ್ದೇಶದಿಂದ ಹಳೆಯ ವೈರಿಗಳು ಈಗ ಮಿತ್ರರಾಗಿದ್ದಾರೆ. ಈ ದೃಶ್ಯಾವಳಿಗೆ ಉತ್ತರ ನೀಡುವಂತೆ ಜನರನ್ನು ಕೇಳಿದರು.
ಕಾಂಗ್ರೆಸ್ ಪ್ರತಿಪಕ್ಷದಲಿದ್ದಾಗ ಕಾವೇರಿ ನದಿ ನೀರು ಹಂಚಿಕೆ ವಿಷಯ ಮತ್ತು ಕನಕಪುರದಲ್ಲಿ ಕಾವೇರಿ ನದಿಗೆ ಮೇಕೆದಾಟು ಜಲಾಶಯಕ್ಕಾಗಿ ಪಾದಯಾತ್ರೆ ನಡೆಸಿದ್ದೇವೆ. 'ಭಾರತ್ ಜೋಡೋ ಯಾತ್ರೆ' ಕೂಡ ಮಾಡಿದೆವು. ಬಿಜೆಪಿಯವರು ನಮ್ಮನ್ನು ನಕಲು ಮಾಡುತ್ತಿದ್ದಾರೆ. ವಿಪಕ್ಷಗಳ ಪಾದಯಾತ್ರೆ ತಮ್ಮ ಪಾಪ ಮತ್ತು ಮಹಾ ಭ್ರಷ್ಟಾಚಾರವನ್ನು ತೊಳೆಯುವ ಪಶ್ಚಾತ್ತಾಪ ಯಾತ್ರೆಯಾಗಿದೆ ಎಂದು ಅವರು ವ್ಯಂಗ್ಯವಾಡಿದರು. ಮೇಕೆದಾಟು ಯೋಜನೆ ಜಾರಿಯಾಗಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಮತ್ತು ಜೆಡಿಎಸ್ ಇದಕ್ಕೆ ಅವಕಾಶ ನೀಡುತ್ತಿಲ್ಲ. ಬದಲಾಗಿ ಜನರ ಗಮನವನ್ನು ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Advertisement