ಪಾದಯಾತ್ರೆಗೆ 7ನೇ ದಿನ: ಮೈಸೂರು ತಲುಪಿದ ದೋಸ್ತಿ ನಾಯಕರು, ನಾಳೆ ಸಮಾರೋಪ ಕಾರ್ಯಕ್ರಮ

ಪಾದಯಾತ್ರೆ ಮೈಸೂರು ಹೊರವಲಯ ತಲುಪುತ್ತಿದ್ದಂತೆ ಜನ ದಟ್ಟಣೆ ಉಲ್ಲೇಖಿಸಿ ಪೊಲೀಸರು ಸ್ವಲ್ಪ ಕಾಲ ತಡೆದರು. ಪೊಲೀಸರ ನಡೆ ವಿರುದ್ಧ ದೋಸ್ತಿ ನಾಯಕರ ಆಕ್ರೋಶ. ನಾಳೆ ಮೆಗಾ ರ್‍ಯಾಲಿಯೊಂದಿಗೆ ನಾಳೆ ದೋಸ್ತಿ ಯಾತ್ರೆ ಮುಕ್ತಾಯವಾಗಲಿದೆ.
ಬಿ.ವೈ. ವಿಜಯೇಂದ್ರ, ಸಿಟಿ ರವಿ ಮತ್ತಿತರರು
ಬಿ.ವೈ. ವಿಜಯೇಂದ್ರ, ಸಿಟಿ ರವಿ ಮತ್ತಿತರರು
Updated on

ಮಂಡ್ಯ: ಮುಡಾ ನಿವೇಶನ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಅಂತಿಮ ಘಟ್ಟ ತಲುಪಿದ್ದು, 7ನೇ ದಿನವಾದ ಇಂದು ಮೈಸೂರು ತಲುಪಿತು. ಶ್ರೀರಂಗಪಟ್ಟಣದಿಂದ ಆರಂಭವಾದ ಪಾದಯಾತ್ರೆ 10 ಕಿ.ಮಿ ಕ್ರಮಿಸುವುದರೊಂದಿಗೆ ಮೈಸೂರು ತಲುಪಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಸಿಟಿ ರವಿ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತಿತರ ನಾಯಕರೊಂದಿಗೆ ಸಾಗಿದ ಪಾದಯಾತ್ರೆ ಮೈಸೂರು ಹೊರವಲಯ ತಲುಪುತ್ತಿದ್ದಂತೆ ಜನ ದಟ್ಟಣೆ ಉಲ್ಲೇಖಿಸಿ ಪೊಲೀಸರು ಸ್ವಲ್ಪ ಕಾಲ ತಡೆದರು. ಪೊಲೀಸರ ನಡೆ ವಿರುದ್ಧ ದೋಸ್ತಿ ನಾಯಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ನಾಳೆ ಮೆಗಾ ರ್‍ಯಾಲಿಯೊಂದಿಗೆ ನಾಳೆ ದೋಸ್ತಿ ಯಾತ್ರೆ ಮುಕ್ತಾಯವಾಗಲಿದೆ.

ಇಂದಿನ ಪಾದಯಾತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಕಾರ್ಯಕರ್ತೆಯರು ಕಂಡುಬಂದರು. ಉಭಯ ಪಕ್ಷಗಳ ಮುಖಂಡರು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಬಾವುಟ, ಭಿತ್ತಿಪತ್ರ ಹಿಡಿದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಉಭಯ ಪಕ್ಷದ ನಾಯಕರು ಪ್ಲೇಕ್ಸ್ ಗಳು, ಕಟೌಟ್ ಗಳು, ಬಾವುಟಗಳು ರಾರಾಜಿಸಿದವು.

ಮಂಡ್ಯದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ,ಭ್ರಷ್ಟಾಚಾರ ನಡೆಸಿಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಒಂದು ವೇಳೆ ಅವರು ಭ್ರಷ್ಟಾಚಾರ ನಡೆಸದಿದ್ದರೆ, ಸಿಬಿಐಗೆ ಯಾಕೆ ಹೆದರುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಅವರು ಮುಡಾದಿಂದ ತಾವು ಪಡೆದಿರುವ 14 ನಿವೇಶನಗಳು ಹಾಗೂ ಇತರರಿಗೆ ಕೊಡಿಸಿರುವ 400-500 ನಿವೇಶನಗಳನ್ನು ವಾಪಸ್ ನೀಡಬೇಕು. ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಬೇಕು, ಈ ವಿಚಾರದಲ್ಲಿ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.

ಬಿ.ವೈ. ವಿಜಯೇಂದ್ರ, ಸಿಟಿ ರವಿ ಮತ್ತಿತರರು
ಮುಡಾ ಹಗರಣ: ಸಿಎಂ ಕಡತಕ್ಕೆ ಸಹಿ ಹಾಕಲು 10 ವರ್ಷ ಕಾಯಬೇಕಿತ್ತೇ? ನಮ್ಮದು ಹೋರಾಟ; ಕಾಂಗ್ರೆಸ್ಸಿನದು ಹಾರಾಟ- ಆರ್.ಅಶೋಕ್

ತಮ್ಮ ಪತ್ನಿಗೆ ಸೇರಿದ್ದ 3.16 ಎಕರೆ ಜಮೀನಿಗೆ ಬದಲಿಯಾಗಿ ಅಭಿವೃದ್ಧಿ ಪಡಿಸಲಾದ ಜಾಗದಲ್ಲಿ ಮುಡಾ 14 ನಿವೇಶನಗಳನ್ನು ನೀಡಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅದನ್ನು ಹೇಗೆ ನಂಬೋದು ಎಂದ ಆರ್. ಅಶೋಕ್, 10 ವರ್ಷಗಳಿಂದ ಭೂಮಿಯನ್ನು ಮುಡಾ ಸ್ವಾಧೀನಪಡಿಸಿಕೊಂಡಿರುವುದು ಸಿಎಂ ಮತ್ತು ಅವರ ಕುಟುಂಬಕ್ಕೆ ತಿಳಿದಿರಲಿಲ್ಲವೇ? 2014ರಲ್ಲಿ ಕಡತ ಬಂದಾಗ ಯಾಕೆ ತಿರಸ್ಕರಿಸಿದ್ದರು?- ಇದು ಬಿಜೆಪಿ ಪ್ರಶ್ನೆಯಾಗಿದ್ದು, 10 ವರ್ಷ ಅದಕ್ಕಾಗಿ ಕಾಯಬೇಕಿತ್ತೇ ಎಂದು ಕೇಳಿದರು.

ಪ್ರಾಸಿಕ್ಯೂಷನ್ ಗೆ ಸಂಬಂಧಿಸಿದಂತೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವುದರಿಂದ ಸಿದ್ದರಾಮಯ್ಯ ಭಯಗೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com