ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್
ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್

ಮುಡಾ ಹಗರಣ: ಸಿಎಂ ಕಡತಕ್ಕೆ ಸಹಿ ಹಾಕಲು 10 ವರ್ಷ ಕಾಯಬೇಕಿತ್ತೇ? ನಮ್ಮದು ಹೋರಾಟ; ಕಾಂಗ್ರೆಸ್ಸಿನದು ಹಾರಾಟ- ಆರ್.ಅಶೋಕ್

'ಕಾನೂನು ಪ್ರಕಾರ, ನಿಯಮ ಪ್ರಕಾರ ಸಿದ್ದರಾಮಯ್ಯ ಅವರು ನಿವೇಶನ ಪಡೆದಿದ್ದರೆ 2014ರಲ್ಲಿ ಕಡತ ಬಂದಾಗ ಯಾಕೆ ತಿರಸ್ಕರಿಸಿದ್ದರು?- ಇದು ಬಿಜೆಪಿ ಪ್ರಶ್ನೆಯಾಗಿದ್ದು, 10 ವರ್ಷ ಅದಕ್ಕಾಗಿ ಕಾಯಬೇಕಿತ್ತೇ'
Published on

ಬೆಂಗಳೂರು: ಕಾಂಗ್ರೆಸ್ ಬೀದಿಗಿಳಿದು ‘ನಾನು ಕಳ್ಳ ಅಲ್ಲ; ನಾನು ಕಳ್ಳ ಅಲ್ಲ, ನನ್ನ ನಂಬಿರಿ’ ಎಂದು ಹೇಳುವುದನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ವಿಪಕ್ಷವಾಗಲು ತಯಾರಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.

ಮಂಡ್ಯದ ಪ್ರೆಸ್ ಕ್ಲಬ್ ನಲ್ಲಿ ಕಾಂಗ್ರೆಸ್ ಹಗರಣಗಳ ಕುರಿತು ಪುಸ್ತಕ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷವು ದಾಖಲೆಗಳನ್ನು ಕೊಟ್ಟು ಸರಕಾರ ಸ್ವಚ್ಛ, ಪಾರದರ್ಶಕ ಎಂದು ವಿಧಾನಸಭೆ ಒಳಗೆ ಹೇಳಬೇಕಿತ್ತು ಆದರೆ, ಕಾಂಗ್ರೆಸ್, ವಿಪಕ್ಷವಾಗಲು ಕೆಲಸ ಮಾಡಲು ಪೀಠಿಕೆ ಹಾಕಿ ಹೊರಡುತ್ತಿದೆ ಎಂದು ಟೀಕಿಸಿದರು.

ವಿಪಕ್ಷವಾಗಿ ನಾವು ಹೋರಾಟ ಮಾಡುತ್ತಿದ್ದೇವೆ; ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷವಾಗಿ ಹಾರಾಟ ಮಾಡುತ್ತಿದೆ ಎಂದು ಆಕ್ಷೇಪಿಸಿದ ಅವರು, ಮಂತ್ರಿಗಳಿಗೆ ಇನ್ ಚಾರ್ಜ್ ಕೊಟ್ಟು ಸಭೆಗಳನ್ನು ಮಾಡಿ, ನಾವು ಬಿಜೆಪಿ ಭ್ರಷ್ಟಾಚಾರಗಳನ್ನು ಬಯಲಿಗೆ ತರುತ್ತೇವೆ; ಕೇಂದ್ರ ನೀಡುವ ಅನುದಾನದಲ್ಲಿ ತಾರತಮ್ಯ ಆಗಿದೆ. ಅದರ ಬಗ್ಗೆ ನಾವು ಸಮಾವೇಶ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ಸಿನವರು ನಾಟಕ ಆಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರದ ಅನುದಾನ ಬಾರದಿದ್ದರೆ ಪ್ರಜಾಪ್ರಭುತ್ವದ ರೀತಿಯಲ್ಲಿ ಮಾತನಾಡಬೇಕಿತ್ತು. ನಮ್ಮ ರಾಜ್ಯದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಜೀ ಯವರು ವಿಪಕ್ಷ ನಾಯಕರು; ಅವರು ತಾರತಮ್ಯ ಆಗಿದೆ ಎಂದು ಸಂಸತ್ತಿನಲ್ಲಿ ಒಂದು ದಿನವೂ ಮಾತನಾಡಿಲ್ಲ. ಇಲ್ಲಿ ರಾಜಕೀಯದ ಬೇಳೆ ಬೇಯಿಸಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಬಂದು ಕಾಂಗ್ರೆಸ್ಸಿನವರ ಮುಖಕ್ಕೆ ಮಂಗಳಾರತಿ ಎತ್ತಿ ಹೋಗಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ಸರಕಾರ 10 ವರ್ಷ ಇತ್ತು. ಅದೇರೀತಿ ನರೇಂದ್ರ ಮೋದಿಯವರ ಸರಕಾರ 10 ವರ್ಷ ಇತ್ತು. ಅಂಕಿ ಅಂಶಗಳೊಂದಿಗೆ ಹೋಲಿಸಿ ಅನುದಾನ, ಸಹಾಯದ ವಿವರ ನೀಡಿದ್ದಾರೆ. ಯಾವುದರಲ್ಲೂ ಕಡಿಮೆ ಮಾಡಿಲ್ಲ; ನಾನೇ ಹಿಂದೆ ಕಂದಾಯ ಸಚಿವನಾಗಿದ್ದೆ. ಡಾ. ಮನಮೋಹನ್ ಸಿಂಗ್ ಅವರ ಸರಕಾರ ಕೊಟ್ಟ ಮೊತ್ತದಿಂದ 5 ಪಟ್ಟು ಜಾಸ್ತಿ ಮೋದಿಯವರ ಸರಕಾರ ಕೊಟ್ಟಿದೆ ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್
ಶೋಷಿತರು ಅಧಿಕಾರ ನಡೆಸೋದನ್ನ ಮನುವಾದಿಗಳು ಸಹಿಸಲ್ಲ; ಬಿಜೆಪಿ, ಜೆಡಿಎಸ್ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ: ಸಿಎಂ

ಪಾದಯಾತ್ರೆ ಅಂತಿಮ ಘಟ್ಟಕ್ಕೆ: ಪಾದಯಾತ್ರೆಯ ಅಂತಿಮ ಘಟ್ಟಕ್ಕೆ ತಲುಪಿದ್ದೇವೆ. ಇವತ್ತು ಸಂಜೆ ಮೈಸೂರು ಗಡಿಭಾಗ ತಲುಪಿ ನಾಳೆ ಬೆಳಿಗ್ಗೆ ಆರೇಳು ಕಿಮೀ ಪಾದಯಾತ್ರೆಯ ಬಳಿಕ ಮೈಸೂರಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಆರ್. ಅಶೋಕ್ ಅವರು ವಿವರಿಸಿದರು. ಜನರು ನಮ್ಮನ್ನು ವಿಪಕ್ಷವಾಗಿ ಆಯ್ಕೆ ಮಾಡಿದ್ದಾರೆ. ಸರಕಾರ ಮಾಡುವ ತಪ್ಪುಗಳನ್ನು ಜನರ ಮುಂದಿಡುವುದು, ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅವರ ಭ್ರಷ್ಟಾಚಾರ, ಅವ್ಯವಹಾರ, ಸ್ವಜನ ಪಕ್ಷಪಾತ- ಇವೆಲ್ಲವನ್ನೂ ತಿಳಿಸುವುದು, ಹೋರಾಟ ಮಾಡುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.

ಕಾನೂನು ಪ್ರಕಾರ, ನಿಯಮ ಪ್ರಕಾರ ಸಿದ್ದರಾಮಯ್ಯ ಅವರು ನಿವೇಶನ ಪಡೆದಿದ್ದರೆ 2014ರಲ್ಲಿ ಕಡತ ಬಂದಾಗ ಯಾಕೆ ತಿರಸ್ಕರಿಸಿದ್ದರು?- ಇದು ಬಿಜೆಪಿ ಪ್ರಶ್ನೆಯಾಗಿದ್ದು, 10 ವರ್ಷ ಅದಕ್ಕಾಗಿ ಕಾಯಬೇಕಿತ್ತೇ ಎಂದು ಕೇಳಿದರು. ಅನ್ಯಾಯ ಇದ್ದ ಕಾರಣ ನೀವು ಆಗ ಸಹಿ ಹಾಕಿಲ್ಲ ಅಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಈ ಆಪಾದನೆಗೆ ಅವರಲ್ಲಿ ಉತ್ತರ ಇಲ್ಲ ಎಂದು ತಿಳಿಸಿದರು.

ಅಣ್ಣ ಡಿ.ಕೆ.ಶಿವಕುಮಾರಣ್ಣ, ಸಿದ್ರಾಮಣ್ಣ, ನೀವು ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣ ಮಾಡಿದ್ದೀರಿ. 25 ಸಾವಿರ ಕೋಟಿ ಟಿಎಸ್‌ಪಿ ದಲಿತರ ಉದ್ಧಾರಕ್ಕೆ ಸೇರಬೇಕಾದ ಹಣವನ್ನು ಗ್ಯಾರಂಟಿ ಕೊಡಲು ಬಳಸಿದ್ದೀರಿ. ಇದಕ್ಕೆ ದಲಿತರ ಹಣವೇ ಇವರಿಗೆ ಬೇಕಾಗಿತ್ತು. ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದೇವೆ ಎಂದು ಗಮನ ಸೆಳೆದರು.

ಯಾರು ನಿಮ್ಮ ಕೈ ಕಟ್ಟಿ ಹಾಕಿದ್ದರು.. ಬೇರೆ ಜಾತಿಗಳವರ ಹಣವನ್ನು ಇವರು ಮುಟ್ಟಿಲ್ಲ; ಯಾರೂ ಕೇಳೋರಿಲ್ಲ; ಹೇಳೋರಿಲ್ಲವೆಂದು ದಲಿತರದೇ ಹಣ ವರ್ಗಾವಣೆ ಮಾಡಿದ್ದಾರೆ. ಇದೆಲ್ಲ ವಿವರವನ್ನೂ ನಾವು ಬಿಡುಗಡೆ ಮಾಡಿದ್ದೇವೆ ಎಂದ ಅವರು, ಬೊಮ್ಮಾಯಿ, ನಮ್ಮ ಮೇಲೆ ಇದ್ದ ಆರೋಪಗಳ ದಾಖಲೆಗಳನ್ನು ಆಗ ಬಿಡುಗಡೆ ಮಾಡಬೇಕಿತ್ತು. ಯಾರು ನಿಮ್ಮ ಕೈ ಕಟ್ಟಿ ಹಾಕಿದ್ದರು ಎಂದು ಆರ್. ಅಶೋಕ್ ಅವರು ಪ್ರಶ್ನೆಯನ್ನು ಮುಂದಿಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com